ಚಿದಂಬರಂ ಮನೆ ಮೇಲೆ ಸಿಬಿಐ- ಲಾಲು ಮನೆ ಮೇಲೆ ಐಟಿ ದಾಳಿ ನಡೆಯಲು ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್:

ದಿಢೀರ್ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ರೈಲ್ವೆ ಸಚಿವ ಹಾಗೂ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಅವರ ಮನೆ ಮೇಲೂ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಈ ಎರಡು ಪ್ರತ್ಯೇಕ ದಾಳಿಗಳು ಸಾಕಷ್ಟು ಸಂಚಲನ ಮೂಡಿಸಿದ್ದು, ಈ ದಾಳಿಯ ಹಿಂದಿನ ಉದ್ದೇಶ ಏನು ಎಂಬ ಕುತೂಹಲ ಮೂಡಿದೆ. ಯಾವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಇಬ್ಬರು ನಾಯಕರ ಮನೆ ಮೇಲೆ ದಾಳಿ ನಡೆದಿದೆ ಎಂಬುದನ್ನು ನೋಡೋಣ ಬನ್ನಿ…

ಏರ್ ಸೆಲ್ ಮ್ಯಾಕ್ಸಿಸ್ ಕಂಪನಿಗೆ ಪರವಾನಿಗೆಯಲ್ಲಿ ಚಿದಂಬರಂ ನಂಟು…

ಪಿ.ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡಿ ಏರ್ ಸೆಲ್ ಮ್ಯಾಕ್ಸಿಸ್ ಕಂಪನಿಗೆ ಫಾರಿನ್ ಇನ್ವೆಸ್ಟ್ ಮೆಂಟ್ ಪ್ರಮೋಷನ್ ಬೋರ್ಡ್ (ಎಫ್ಐಪಿಬಿ) ಮೂಲಕ ಪರವಾನಿಗೆ ನೀಡಿದ ಆರೋಪ ಇದೆ. ಹೀಗೊಂದು ಒಪ್ಪಂದ ನೆರವೇರುವುದಕ್ಕೆ ಪ್ರಭಾವಿಸಿದ್ದು ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಎಂಬುದು ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ಸಿಬಿಐ ಪಿ.ಚಿದಂಬರಂ ಹಾಗೂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಚಿದಂಬರಂ ಅವರ ಚೆನ್ನೈ ನಿವಾಸ ಸೇರಿದಂತೆ ಮುಂಬೈ, ದೆಹಲಿ, ಗುರುಗ್ರಾಮ್ ಗಳ ಒಟ್ಟು 14 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ದಾಳಿಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪಿ ಚಿದಂಬರಂ ಹೇಳಿರುವುದಿಷ್ಟು… ‘ಎಫ್ಐಪಿಬಿ ಮೂಲಕ ನೂರಾರು ಪರವಾನಿಗೆಗೆ ಅವಕಾಶ ನೀಡಲಾಗಿದೆ. ಐವರು ಕಾರ್ಯದರ್ಶಿಗಳು ಸೇರಿ ಈ ಎಫ್ಐಪಿಬಿ ರಚಿಸಲಾಗಿದ್ದು, ಇದರಲ್ಲಿ ಒಳಪಡುವ ಇತರರೆಲ್ಲರೂ ಸರ್ಕಾರಿ ಅಧಿಕಾರಿಗಳೇ. ಈ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪವಿಲ್ಲ. ಅದೇ ರೀತಿ ನನ್ನ ಮೇಲೂ ಕೂಡ ಯಾವುದೇ ಆರೋಪಗಳಿಲ್ಲ. ಎಫ್ಐಪಿಬಿನಲ್ಲಿ ಪ್ರತಿಯೊಂದು ಪರವಾನಿಗೆಗೆ ಒಪ್ಪಿಗೆ ಹಾಗೂ ನಿರಾಕರಣೆ ಪ್ರಕ್ರಿಯೆ ಕಾನೂನಿನ ವ್ಯಾಪ್ತಿಯಲ್ಲೇ ನಡೆಸಲಾಗಿದೆ. ಆದರೆ, ಕೇಂದ್ರ ಸರ್ಕಾರ ನನ್ನ ಬಾಯಿಯನ್ನು ಮುಚ್ಚಿಸುವ ಸಲುವಾಗಿ ಸಿಬಿಐ ಮೂಲಕ ಈ ರೀತಿಯಾದ ದಾಳಿ ನಡೆಸುತ್ತಿದೆ.’

ಬೇನಾಮಿ ಹೆಸರಲ್ಲಿ ಲಾಲು ಸಾವಿರ ಕೋಟಿ ಭೂ ವ್ಯವಹಾರ…

ಇತ್ತೀಚೆಗಷ್ಟೇ ಜೈಲಿನಲ್ಲಿರುವ ಭೂಗತಪಾತಕಿ ಜತೆಗಿನ ದೂರವಾಣಿ ಕರೆ ಆಡಿಯೋ ಬಿಡುಗಡೆ ಪ್ರಕರಣದಿಂದ ಮುಜುಗೊರಕ್ಕೊಳಗಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಲಾಲು ಪ್ರಸಾದ್ ಯಾದವ್ ಅವರು ಬೆನಾಮಿ ಹೆಸರಲ್ಲಿ ಸುಮಾರು ಒಂದು ಸಾವಿರ ಕೋಟಿ ಮೌಲ್ಯದ ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಜತೆಗೆ ಅವರ ಆಪ್ತರ ಮನೆ ಹಾಗೂ ಕಂಪನಿಗಳ ಮೇಲೂ ದಾಳಿ ನಡೆದಿದ್ದು, ಒಟ್ಟು 22 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ಶೋಧ ಕಾರ್ಯಕ್ಕೆ ತೆರಿಗೆ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ 100 ಮಂದಿ ಅಧಿಕಾರಿಗಳು ಭಾಗಿಯಾಗಿದ್ದಾರೆ.

Leave a Reply