ಕುಲಭೂಷಣ್ ಪ್ರಕರಣದಲ್ಲಿ ₹ 1 ಸಂಭಾವನೆ ಪಡೆದು ಮನಗೆದ್ದ ಹರೀಶ್ ಸಾಳ್ವೆ ಎಂಬ ದುಬಾರಿ ನ್ಯಾಯವಾದಿ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

ಡಿಜಿಟಲ್ ಕನ್ನಡ ಟೀಮ್:

ಹರೀಶ್ ಸಾಳ್ವೆ… ನಿನ್ನೆಯಿಂದ ಎಲ್ಲ ಮಾಧ್ಯಮಗಳಲ್ಲೂ ಈ ಹೆಸರನ್ನು ನೀವು ಪದೇ ಪದೇ ಕೇಳುತ್ತಲೇ ಇದ್ದೀರಿ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರ ತಮ್ಮ ವಾದ ಮಂಡಿಸುತ್ತಿರುವ ವಕೀಲರು ಈ ಹರೀಶ್ ಸಾಳ್ವೆ. ಈ ಪ್ರಕರಣದಲ್ಲಿ ವಾದ ಮಂಡಿಸಲು ಸಾಳ್ವೆ ಅವರು ಕೇವಲ ₹ 1 ಸಂಭಾವನೆ ಪಡೆದು ಮನ ಗೆದ್ದಿದ್ದಾರೆ.

ಈ ಪ್ರಕರಣದಲ್ಲಿ ಹರೀಶ್ ಸಾಳ್ವೆ ಅವರನ್ನು ನೇಮಕ ಮಾಡಿರುವ ಕುರಿತಾಗಿ ಅಪಸ್ವರಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ, ಸಾಳ್ವೆ ಅವರ ಸಂಭಾವನೆ ವಿಷಯ ತಿಳಿಸಿದ್ದಾರೆ.

ಆದರೆ…

ಹರೀಶ್ ಸಾಳ್ವೆ ದೇಶದ ಅತ್ಯಂತ ದುಬಾರಿ ವಕೀಲರಲ್ಲಿ ಒಬ್ಬರು. ಮಾಜಿ ಸೊಲಿಸಿಟರ್ ಜೆನರಲ್ ಆಗಿರುವ ಹರೀಶ್ ಸಾಳ್ವೆ, ದೇಶದ ಪ್ರಭಾವಿ ವ್ಯಕ್ತಿಗಳ ಪರ ಕಾನೂನು ಸಮರದಲ್ಲಿ ವಾದ ಮಂಡಿಸಿದ್ದಾರೆ. ಆ ಪೈಕಿ ನಮಗೆ ಸಿಗುವ ಪ್ರಮುಖ ಹೆಸರುಗಳು, ಮುಲಾಯಂ ಸಿಂಗ್ ಯಾದವ್, ಪ್ರಕಾಶ್ ಸಿಂಗ್ ಬಾದಲ್, ಮುಖೇಶ್ ಅಂಬಾನಿ, ಲಲಿತ್ ಮೋದಿ… ಹೀಗೆ ಪಟ್ಟಿ ಉದ್ದ ಬೆಳೆಯುತ್ತದೆ.

ಅದರಲ್ಲೂ ಹರೀಶ್ ಸಾಳ್ವೆ ಅಂಬಾನಿ ಸಹೋದರರ ಕಾನೂನು ಸಮರದಲ್ಲಿ ಮುಖೇಶ್ ಪರ ವಾದ ಮಂಡಿಸಿದ್ದರು. ಈ ಸಮರದಲ್ಲಿ ಅನಿಲ್ ಅಂಬಾನಿ ಅವರ ಪರ ವಕೀಲ ರಾಮ್ ಜೆಟ್ಮಲಾನಿ ಅವರನ್ನು ಸೋಲಿಸಿ ಸಾಕಷ್ಟು ಹೆಸರು ಮಾಡಿದರು. ಸಾಳ್ವೆ ಅವರು ಈ ಪ್ರಭಾವಿ ವ್ಯಕ್ತಿಗಳಿಂದ ಸಣ್ಣ ಸಂಭಾವನೆ ಪಡೆಯುವ ವಕೀಲರಲ್ಲ. ಇವರ ಸಂಭಾವನೆ ಎಷ್ಟು ಎಂಬುದನ್ನು ತಿಳಿದರೆ ನಿಮಗೆ ಶಾಕ್ ಆಗೋದು ಖಚಿತ. ಹರೀಶ್ ಸಾಳ್ವೆ ನಿಜಕ್ಕೂ ಎಷ್ಟು ದುಬಾರಿ ವಕೀಲ ಎಂಬುದಕ್ಕೆ ಈ ಮಾಹಿತಿಯನ್ನೊಮ್ಮೆ ನೋಡಿ.

ಇವರು ವಾದ ಮಂಡಿಸುವ ಪ್ರಕರಣಗಳಲ್ಲಿ ಪಡೆಯುವ ಸಂಭಾವನೆ ಪ್ರತಿ ದಿನಕ್ಕೆ ₹ 30 ಲಕ್ಷ. ಮುಖೇಶ್ ಅಂಬಾನಿ ಪರ ವಾದಕ್ಕೆ ಇವರು ಗಳಿಸಿದ ಒಟ್ಟು ಅಂದಾಜು ಸಂಭಾವನೆ ₹ 15 ಕೋಟಿ. ಇಷ್ಟಕ್ಕೆ ಗಾಬರಿಯಾಗಬೇಡಿ. ತಮಿಳುನಾಡಿನ ಗೊದವರ್ಮಾನ್ ತಿರುಮುಲ್ಪದ್ ನ ಅರಣ್ಯ ಪ್ರಕರಣದಲ್ಲಿ ಇವರು ಪಡೆದ ಒಟ್ಟು ಸಂಭಾವನೆ ₹ 60 ಕೋಟಿ. ಈ ಸಂಭಾವನೆ ಜತೆಗೆ ಪ್ರಥಮ ದರ್ಜೆ ವಿಮಾನ ಪ್ರಯಾಣ, ಪಂಚತಾರಾ ಹೊಟೇಲ್ ಗಳಲ್ಲಿ ತಂಗುವ ವ್ಯವಸ್ಥೆ ಇರಲೇಬೇಕು. ಸಾಳ್ವೆ ಹಾಗೂ ಅವರ ತಂಡಕ್ಕೆ ಪಂಚತಾರಾ ಹೊಟೇಲ್ ನಲ್ಲಿ ಒಂದು ರಾತ್ರಿಯ ಊಟಕ್ಕೆ ತಗಲುವ ವೆಚ್ಚ ಸರಿಸುಮಾರು ₹ 2 ಲಕ್ಷ ಎಂದರೆ ನಂಬಲೇಬೇಕು.

ಇವೆಲ್ಲದರ ಜತೆಗೆ ಇವರ ಮನ ಸಂತೋಷ ಪಡಿಸಲು ಕ್ಲೈಂಟ್ ಗಳು ದುಬಾರಿ ವಾಚ್, ಮೊಬೈಲ್ ಫೋನ್ ಹಾಗೂ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇನ್ನು ಸಾಳ್ವೆ ಆಗಾಗ್ಗೆ ಲಂಡನ್ ಗೆ ಹೋಗಿ ಬರುತ್ತಾರೆ. ಅದೂ ತಮಗೆ ಇಷ್ಟವಾಗುವ ಬಟ್ಟೆಯನ್ನು ಶಾಪಿಂಗ್ ಮಾಡಲು!

ಅದೇನೇ ಇರಲಿ, ಕುಲಭೂಷಣ್ ವಿಚಾರದಲ್ಲಿ ಸಾಳ್ವೆ ಕೇವಲ 1 ರು. ಗೌರವಧನ ಪಡೆದಿರುವುದು ಶ್ಲಾಘನಾರ್ಹ ಸಂಗತಿಯೇ. ಆದರೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಏಕಾಏಕಿ ಇವ ನಮ್ಮವ ಇವ ನಮ್ಮವ ಎಂದು ಉಬ್ಬುತ್ತಿದ್ದಾರೆ ತಥಾಕಥಿತ ಬಲಪಂಥೀಯರು. ಅಂಥವರ ಗಮನಕ್ಕೆ-

  • ಒಂದೆಡೆ ಗುಜರಾತ್ ದಂಗೆ ಸಂತ್ರಸ್ತೆ ಬಿಲ್ಕಿಸ್ ಬಾನೊ ಪರ ಆಗಿನ ಮೋದಿ ಸರ್ಕಾರದ ವಿರುದ್ಧ ಪ್ರಕರಣ ನಡೆಸಿದ ಇವರು, ಇನ್ನೊಂದೆಡೆ ಗುಜರಾತ್ ಸರ್ಕಾರದ ಪರ ಪ್ರಕರಣಗಳ ವಕೀಲಿಕೆಯನ್ನೂ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ನರೇಂದ್ರ ಮೋದಿ ಕುಕೃತ್ಯಗಳನ್ನು ವಿರೋಧಿಸಿ, ಗುಜರಾತಿಗೆ ಒಳ್ಳೆಯದಾಗುವ ಉತ್ತಮ ಕಾರ್ಯಗಳನ್ನು ಬೆಂಬಲಿಸುತ್ತಿದ್ದೇನೆ ಅನ್ನೋದು ಸಾಳ್ವೆ ಅವರ ಸಮರ್ಥನೆ ಆಗಿತ್ತು.
  • ರಾಡಿಯಾ ಟೇಪ್ ಹಗರಣದಲ್ಲಿ ಟಾಟಾ ಪರ, ಭಾರತ ಸರ್ಕಾರದ ವಿರುದ್ಧ 2.5 ಬಿಲಿಯನ್ ಡಾಲರ್ ಗಳ ತೆರಿಗೆ ವ್ಯವಹಾರದಲ್ಲಿ ವೊಡಾಫೋನ್ ಕಂಪನಿ ಪರ, ಸಲ್ಮಾನ್ ಖಾನ್ ಗೆ  ಕೆಳಹಂತದ ನ್ಯಾಯಾಲಯದಲ್ಲಿ ಗುದ್ದೋಡು ಪ್ರಕರಣದಲ್ಲಿ 5 ವರ್ಷ ಜೈಲು ಸಜೆಯಾದಾಗ ಹೈಕೋರ್ಟಿನಲ್ಲಿ ಅವರ ಪರ ವಾದಿಸಿ ಒಂದು ದಿನವೂ ಜೈಲಿಗೆ ಹೋಗದಂತೆ ಮರು ಆದೇಶ ಪಡೆದ ಖ್ಯಾತಿ.. ಇವೆಲ್ಲವೂ ಸಾಳ್ವೆ ಅವರಿಗಿದೆ.

Leave a Reply