ಉಗ್ರರು ಮೊದಲಿನಿಂದ ಇದ್ದಾರಾದ್ದರಿಂದ ಅವರನ್ನು ವಿರೋಧಿಸಬಾರದಾ?- ತ್ರಿವಳಿ ತಲಾಖ್ ಪುರಾತನವಾದ್ದರಿಂದ ರದ್ದು ಬೇಡ ಎಂದು ವಾದಿಸಿದ ಕಪಿಲ್ ಸಿಬಲ್ ಗೆ ಟ್ವೀಟಿಗರ ತರಾಟೆ

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಆಚರಣೆ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಾಲ್ಕನೇ ದಿನ ವಿಚಾರಣೆ ನಡೆಯಿತು. ಮಂಗಳವಾರ ತ್ರಿವಳಿ ತಲಾಖ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ‘ಇದು ಒಂದು ಸಮುದಾಯದ ನಂಬಿಕೆಯ ವಿಷಯವಾಗಿದ್ದು, ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಏಕೆ?’ ಎಂಬ ಪ್ರಶ್ನೆಯನ್ನು ಕೋರ್ಟ್ ಮುಂದಿಟ್ಟರು. ಮುಂದುವರಿದು ಅವರ ವಾದ ಹೀಗಿತ್ತು- ‘ಕ್ರಿಸ್ತಶಕ 637ರಿಂದಲೂ ತ್ರಿವಳಿ ತಲಾಖ್ ಆಚರಣೆ ಜಾರಿಯಲ್ಲಿದೆ. ಈ ಒಂದು ಸಂಪ್ರದಾಯವನ್ನು ಇಸ್ಲಾಂಬಾಹೀರ ಎಂದು ಹೇಳಲು ನಾವು ಯಾರು? ಮುಸಲ್ಮಾನರು 1400 ವರ್ಷಗಳಿಂದಲೂ ಈ ಆಚರಣೆ ಪಾಲಿಸಿಕೊಂಡು ಬಂದಿದ್ದಾರೆ. ತ್ರಿವಳಿ ತಲಾಖ್ ನ್ಯಾಯ- ಅನ್ಯಾಯ, ಒಳ್ಳೆಯದು- ಕೆಟ್ಟದ್ದು ಎಂದು ಚರ್ಚಿಸುವ ವಿಷಯವಲ್ಲ. ಅದೊಂದು ನಂಬಿಕೆಯ ವಿಚಾರವಾಗಿದೆ. ಹೀಗಾಗಿ ಅದನ್ನು ನಾವೇಕೆ ಪ್ರಶ್ನಿಸಬೇಕು?

ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ಜನಿಸಿದ ಎಂದು ನಾನು ನಂಬಿದರೆ ಅದು ನನ್ನ ನಂಬಿಕೆಯ ವಿಷಯವಾಗುತ್ತದೆ. ಅದನ್ನು ಸಂವಿಧಾನದ ಚೌಕಟ್ಟಿನಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಅದೇರೀತಿ ತ್ರಿವಳಿ ತಲಾಖ್ ಸಹ ಇಸ್ಲಾಂ ಸಮುದಾಯದ ನಂಬಿಕೆಯಾಗಿದ್ದು, ಅದನ್ನು ಪ್ರಶ್ನೆ ಮಾಡುವುದೇಕೆ?’

ಸಿಬಲ್ ಹೀಗೆ ತ್ರಿವಳಿ ತಲಾಖ್ ಪರವಾಗಿ ವಕಾಲತ್ತು ನಡೆಸುತ್ತಿದ್ದಂತೆ ಟ್ವಿಟರ್ ನಲ್ಲಿ ಸಿಬಲ್ ವಿರುದ್ಧ ಟೀಕೆಯ ಟ್ರೆಂಡ್ ಸೃಷ್ಟಿಯಾಯಿತು. ಸಿಬಲ್ ಅವರ ವಾದವನ್ನು ಮುಂದಿಟ್ಟುಕೊಂಡು ಜನರು ಹೇಗೆಲ್ಲಾ ಟೀಕೆ ನಡೆಸಿದರು ಎಂಬುದು ಇಲ್ಲಿದೆ ನೋಡಿ…

  • ಸೋನಮ್ ಮಹಾಜನ್: ಕಪಿಲ್ ಸಿಬಲ್ ಅವರೆ ನಿಮ್ಮ ಪ್ರಕಾರ ಚಿಂತಿಸುವುದಾದರೆ, ಭಯೋತ್ಪಾದಕರು 1400 ವರ್ಷಗಳಿಂದ ಜನರನ್ನು ಹತ್ಯೆ ಮಾಡುತ್ತಾ ಬಂದಿದ್ದಾರೆ. ಅದನ್ನು ಉಗ್ರಗಾಮಿಗಳ ಜೀವನ ಶೈಲಿ ಎಂದು ನಾವು ಒಪ್ಪಿಕೊಳ್ಳಬೇಕೆ?
  • ಅಂಶುಲ್ ಸಕ್ಸೇನಾ: ಕಪಿಲ್ ಸಿಬಲ್ ಅವರೆ, 20ಕ್ಕೂ ಹೆಚ್ಚು ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ನಿಷೇಧಿಸಿದವರಾರು? ಹಾಗಾದರೆ ಭಾರತದಲ್ಲಿನ ಮುಸಲ್ಮಾನರು ಬೇರೆಯದೇ ಕುರಾನ್ ಅನ್ನು ಅನುಸರಿಸುತ್ತಿದ್ದಾರೆಯೇ?
  • ರಾ ಬೀಸ್: ಜನರು 5000 ವರ್ಷಗಳಿಂದಲೂ ಪರಸ್ಪರ ಕೊಲೆ ಮಾಡುತ್ತಾ ಬಂದಿದ್ದಾರೆ. ಹಾಗೆಂದು ಕೊಲೆಯನ್ನು ಅಪರಾಧವಾಗಿ ನೋಡುವುದು ಬೇಡವೇ?
  • ಗೀತಿಕಾ: ಕಪಿಲ್ ಸಿಬಲ್ ಅವರೇ ಕೇವಲ 1400 ವರ್ಷದ ಹಿಂದಕಷ್ಟೇ ಯಾಕೆ ಹೋದಿರಿ. ಅದಕ್ಕೂ ಹಿಂದೆ ಹೋಗಿ. ಆಗ ಇಸ್ಲಾಂ ಧರ್ಮವೇ ಇರಲಿಲ್ಲ. ಹಾಗೆಂದು ಇಸ್ಲಾಂ ಧರ್ಮವನ್ನು ಸಂವಿಧಾನ ವಿರೋಧಿ ಎಂದು ಕರೆಯುತ್ತೀರಾ?
  • ರಾಹುಲ್ ಪಾಂಡೆ: ತ್ರಿವಳಿ ತಲಾಖ್ ವಿಷಯದಲ್ಲಿ ಕಪಿಲ್ ಸಿಬಲ್ ವಾದ ಕೇಳುತ್ತಿದ್ದರೆ, ಭಾರತದಲ್ಲಿ ಅನೆಕ ವರ್ಷಗಳಿಂದ ಇದ್ದ ಅಸ್ಪೃಶ್ಯತೆ ಆಚರಣೆ ಮತ್ತೆ ಬರಬೇಕು ಎನ್ನುವಂತಿದೆ.
  • ಲಕ್ಷ್ಮಿ ಐಯ್ಯರ್: ಥ್ಯಾಂಕ್ ಗಾಡ್… ಸಧ್ಯ ಸತಿಸಹಗಮನ ಪದ್ಧತಿ ರದ್ದಾದ ಸಂದರ್ಭದಲ್ಲಿ ಕಪಿಲ್ ಸಿಬಲ್ ಇರಲಿಲ್ಲ! ತ್ರಿವಳಿ ತಲಾಖ್ 1400 ವರ್ಷಗಳ ಆಚರಣೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಕಪಿಲ್ ಸಿಬಲ್ ಬಾಲ್ಯವಿವಾಹವನ್ನು ಸಮರ್ಥಿಸಿಕೊಳ್ಳುತ್ತಾರಾ?
  • ವೈಭವ್ ಅರೋರಾ: ಕಪಿಲ್ ಸಿಬಲ್ ಅವರ ಬಗ್ಗೆ ಮಾತನಾಡಲು ಪದಗಳಿಲ್ಲ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಭಾರತ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ ಏಕೆ ಎಂದು ಈಗ ಅರ್ಥವಾಗುತ್ತಿದೆ.
  • ಪಂಕಜ್ ಚೌಧರಿ: ಕಪಿಲ್ ಸಿಬಲ್ ತ್ರಿವಳಿ ತಲಾಖ್ ಪರ ನೀಡುತ್ತಿರುವ ಸಮರ್ಥನೆ ವೈಯಕ್ತಿಕ ಕಾನೂನು ಬೆಂಬಲಿಸುವ ಜನರಿಗಿಂತ ಕೆಟ್ಟದಾಗಿದೆ.
  • ಸುರೀಂದರ್: ಕಪಿಲ್ ಸಿಬಲ್ ಅವರ ವಾದ ಕೇಳುತ್ತಿದ್ದರೆ, ಈಗಾಗಲೇ ರದ್ದಾಗಿರುವ ಸತಿ ಪದ್ಧತಿ, ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗಿನ ಆಚರಣೆಗಳಿಗೆ ಮತ್ತೆ ಕಾನೂನಿನ ಮಾನ್ಯತೆ ನೀಡಬೇಕು ಎನ್ನುವಂತಿದೆ.

Leave a Reply