‘ಒಂದಾನೊಂದು ಕಾಲದಲ್ಲಿ’ ಎಂಬ ಕಥನ ಕುತೂಹಲದೊಂದಿಗೆ ಕರ್ನಾಟಕದ ಮ್ಯೂಸಿಯಂ ದಿನಾಚರಣೆ

ಸಾಂದರ್ಭಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ವಿಶ್ವದಾದ್ಯಂತ ಮೇ 18ನ್ನು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕ ಸಹ ಇದಕ್ಕೆ ಉತ್ಸುಕತೆಯಿಂದಲೇ ಸಿದ್ಧವಾಗಿದೆ.

ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಎಚ್ಎಎಲ್ ಸಾಂಸ್ಕೃತಿಕ ಕೇಂದ್ರ ಮತ್ತು ಬಾಹ್ಯಾಕಾಶ ಮ್ಯೂಸಿಯಂ, ಚಿತ್ರಕಲಾ ಪರಿಷದ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಗಾಂಧಿ ಭವನ ಮತ್ತು ನಿಮ್ಹಾನ್ಸ್ ನ ಹ್ಯೂಮನ್ ಬ್ರೈನ್ಸ್ ಮ್ಯೂಸಿಯಂ ಇಲ್ಲೆಲ್ಲ ಸಂವಾದ, ಕಾರ್ಯಾಗಾರ, ಚಲನಚಿತ್ರ ವೀಕ್ಷಣೆ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮ್ಯೂಸಿಯಂ ದಿನಾಚರಣೆಯನ್ನು ಆಕರ್ಷಕ ಕಥನವಾಗಿ ಕಟ್ಟಿಕೊಡುವುದಕ್ಕೆ ಯತ್ನಿಸಿರುವುದು ವಿಶೇಷ. ‘ಒಂದಾನೊಂದು ಕಾಲದಲ್ಲಿ’ ಎಂಬ ಥೀಮ್ ಇರಿಸಿಕೊಳ್ಳಲಾಗಿದ್ದು, ಇದರ ಸುತ್ತಲೇ ಆಸಕ್ತಿಕರ ಪ್ರಚಾರ ಕೈಗೊಳ್ಳಲಾಗಿದೆ. ಒಂದಾನೊಂದು ಕಾಲದಲ್ಲಿ ಶಕ್ತಿಯುತ ಎಂಜಿನ್ ಗಳು ಕೂಡ ಶಕ್ತಿಗಾಗಿ ಅಕ್ಕಿಯ ಹೊಟ್ಟು, ಇದ್ದಿಲು ಸೌದೆಯನ್ನೇ ಅವಲಂಬಿಸಿದ್ದವು… ವಲಸೆಯಲ್ಲಿರುವವರು ಅಡುಗೆ ಮಾಡುವಾಗ ಮಡಕೆಯ ಕೆಳಗೆ ಕಲ್ಲುಗಳನ್ನಿಟ್ಟು ಒಲೆ ಸಿದ್ಧಪಡಿಸಿಕೊಳ್ಳಬೇಕಿತ್ತಲ್ಲವೇ? ನಮಗೆ ಲಭ್ಯವಿರುವ ಕಾಲುಗಳುಳ್ಳ ಮಡಕೆ ಹಿಂದಿನವರ ಅನ್ವೇಷಣ ಬುದ್ಧಿಯನ್ನು ತಿಳಿಸುತ್ತದೆ! ಕನ್ನಡದ ಪುರಾತನ ಶಾಸನಗಳನ್ನು ಮರಳುಗಲ್ಲಿನಲ್ಲಿ ಕೆತ್ತಲಾಗಿತ್ತು ಎಂಬುದೊಂದು ಸ್ವಾರಸ್ಯ.

‘ಒಂದು ಜನಾಂಗವಾಗಿ ನಾವು ಸಾಧಿಸಿದ ಅಭಿವೃದ್ಧಿ ಹಾಗೂ ಕಲೆ, ಸಂಸ್ಕೃತಿ, ತಂತ್ರಜ್ಞಾನಗಳಲ್ಲಿ ನಮ್ಮ ಶ್ರೀಮಂತಿಕೆಯನ್ನು ಈಗಿನ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ತಿಳಿಸಿಕೊಡುವುದು ತುಂಬ ಮುಖ್ಯ. ಆ ನಿಟ್ಟಿನಲ್ಲಿ ಮ್ಯೂಸಿಯಂಗಳು ಬಹುದೊಡ್ಡ ಆಸ್ತಿ’ ಎನ್ನುತ್ತಾರೆ ಪ್ರವಾಸೋದ್ಯಮ ಹಾಗೂ ಐಟಿ-ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ.

#MyMuseumStory ಎಂಬ ಟ್ರೆಂಡ್ ಬಳಸಿ ನೀವೂ ಸಹ ವಸ್ತು ಸಂಗ್ರಹಾಲಯದೊಂದಿಗೆ ಬೆರೆತ ಕತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಬಹುದು.

Leave a Reply