ರಷ್ಯಾಕ್ಕೆ ಸಣ್ಣದೊಂದು ಬಿಸಿ, ಸ್ವದೇಶಿ ಅಣುಶಕ್ತಿ ಸ್ಥಾವರ ಗುರಿ ಚುರುಕು: ಕೇಂದ್ರದ ನ್ಯೂಕ್ಲಿಯರ್ ನಡೆಗಳು

ಡಿಜಿಟಲ್ ಕನ್ನಡ ಟೀಮ್

ಸ್ವದೇಶಿ ನಿರ್ಮಿತಿಯಲ್ಲಿ ಹತ್ತು ಅಣು ವಿದ್ಯುತ್ ಸ್ಥಾವರಗಳನ್ನು ಹೊಂದುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ನೀಡಿದೆ. ಪ್ರತಿ ಸ್ಥಾವರವೂ 700 ಮೆಗಾವ್ಯಾಟ್ ಸಾಮರ್ಥ್ಯ ಹೊಂದಲಿದ್ದು ಈ ಮೂಲಕ 7000 ಮೆಗಾವ್ಯಾಟ್ ಶಕ್ತಿ ಹೆಚ್ಚಲಿದೆ ಎಂದು ಇಂಧನ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.

2014ರಲ್ಲಿ ಎನ್ಡಿಎ ಸರ್ಕಾರವು ಕೇಂದ್ರದ ಅಧಿಕಾರ ಸೂತ್ರ ಹಿಡಿದಾಗ ಭಾರತದ ಅಣುವಿದ್ಯುತ್ ಉತ್ಪಾದನೆ 4780 ಮೆಗಾವ್ಯಾಟ್ ಸಾಮರ್ಥ್ಯದ್ದಾಗಿತ್ತು. 2024ರ ವೇಳೆಗೆ ಇದು 15,000 ಮೆಗಾವ್ಯಾಟ್ ಆಗಬೇಕು ಎಂಬುದು ಸರ್ಕಾರದ ಗುರಿ. ಇದೇ ನಿಟ್ಟಿನಲ್ಲೇ ಹೊಸ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ ಹಾಗೂ ಈ ಹಿಂದ ಯೋಜಿತಗೊಂಡು ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ತ್ವರಿತಗೊಳಿಸುವುದು ಈ ಎರಡೂ ಮಾರ್ಗಗಳ ಬಗ್ಗೆ ಕೇಂದ್ರ ಅತೀವ ಆಸಕ್ತಿ ವಹಿಸಿದೆ.

ಇದು ಒಂದೆಡೆಯಾದರೆ, ಇನ್ನೊಂದು ಬೆಳವಣಿಗೆಯಲ್ಲಿ ಭಾರತವು ರಷ್ಯಾದೊಂದಿಗೆ ಅಖೈರುಗೊಳಿಸಿಕೊಳ್ಳಬೇಕಿದ್ದ ಅಣುಸ್ಥಾವರ ಒಪ್ಪಂದಗಳೆರಡನ್ನು ಮುಂದೂಡುತ್ತ ಬಂದಿರುವುದೂ ಗಮನಾರ್ಹ. ಕೂಡಂಕುಲಂನ 5 ಮತ್ತು 6ನೇ ಹಂತದ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಕಳೆದ ವರ್ಷ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲೇ ಭಾರತ ಸಹಿ ಹಾಕಬೇಕಿತ್ತು. ಆದರೆ ಅದನ್ನು ಭಾರತವೇ ವಿಳಂಬಿಸುತ್ತಿದೆ. ಇದರ ಹಿಂದೊಂದು ಕಾರ್ಯತಂತ್ರವಿದೆ ಎಂದು ಪರಿಣತರೀಗ ವಿಶ್ಲೇಷಿಸುತ್ತಿದ್ದಾರೆ.

ರಷ್ಯಾ ಇತ್ತೀಚೆಗೆ ಚೀನಾದ ಜತೆ ಅತಿ ಸ್ನೇಹದಿಂದ ಹೆಜ್ಜೆ ಹಾಕುತ್ತಿರುವುದು ಸರಿಯಷ್ಟೆ. ಇದೇ ಚೀನಾ ಭಾರತವು ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪನ್ನು (ಎನ್ಎಸ್ಜಿ) ಸೇರುವುದಕ್ಕೆ ಅಡ್ಡಗಾಲಾಗಿದೆ. ಇದೀಗ ಭಾರತವು ಕೂಡಂಕುಲಂ ಯೋಜನೆಯನ್ನು ವಿಳಂಬಿಸುತ್ತ ರಷ್ಯಾಕ್ಕೆ ಕೊಡುತ್ತಿರುವ ಸೂಚನೆ ಸ್ಪಷ್ಟ. ಭಾರತದ ಎನ್ಎಸ್ಜಿ ಸೇರ್ಪಡೆಗೆ ಚೀನಾದ ಮೇಲೆ ರಷ್ಯಾ ಒತ್ತಡ ಹೇರಲಿ ಅನ್ನೋದು. ಒಬಿಒಆರ್ ಸೇರಿದಂತೆ ಚೀನಾದ ಹಲವು ಮಹಾತ್ವಾಕಾಂಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ರಷ್ಯ, ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ದೊರಕಿಸುವುದಕ್ಕೆ ಇನ್ನಷ್ಟು ಒತ್ತಡ ತರಬೇಕು ಎಂಬುದು ಭಾರತದ ಅಪೇಕ್ಷೆಯಾಗಿದೆ. ಅದಿಲ್ಲವಾದರೆ ನಾವು ದೇಶೀಯವಾಗಿಯೇ ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುತ್ತ ಹೋಗುತ್ತೇವಾಗಲೀ ನಿಮ್ಮೊಂದಿಗೆ ಒಪ್ಪಂದದಿಂದ ದೂರ ಉಳಿಯುತ್ತೇವೆ ಎಂಬ ಸೂಕ್ಷ್ಮ ಸಂದೇಶವೊಂದರ ಮೂಲಕ ರಷ್ಯಾಕ್ಕೆ ಬಿಸಿ ಮುಟ್ಟಿಸುತ್ತಿದೆ ಭಾರತ.

Leave a Reply