ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಿಂಚಿದೆ ದೀದಿಯ ತೃಣಮೂಲ, ಬಿಜೆಪಿಯ ಅಬ್ಬರದ ಪ್ರತಿರೋಧಕ್ಕೆ ಸಿಗದಾಯ್ತು ಬಲ

ಡಿಜಿಟಲ್ ಕನ್ನಡ ಟೀಮ್:

ಏಳರಲ್ಲಿ ನಾಲ್ಕು ಮುನ್ಸಿಪಾಲಿಟಿಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಬಿಗಿ ಹಿಡಿತವನ್ನು ಸಾಬೀತುಪಡಿಸಿದೆ. ಉಳಿದ ಮೂರನ್ನು ಬಿಜೆಪಿ ಮೈತ್ರಿಯ ಗೋರ್ಖಾ ಜನಮುಕ್ತಿ ಮೋರ್ಚಾ ಗೆದ್ದಿದೆಯಾದರೂ ಅದು ತೀರ ಸಂಭ್ರಮದ ವಿಷಯವಲ್ಲ. ಏಕೆಂದರೆ ಗೋರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿರುವ ಪ್ರದೇಶದಲ್ಲಿ ಮಿರಿಕ್ ಪಟ್ಟಣ ಪಂಚಾಯತಿಯನ್ನೂ ಟಿಎಂಸಿ ಗೆದ್ದುಕೊಂಡಿದೆ. 1986ರಿಂದ ಮುಖ್ಯವಾಹಿನಿ ರಾಜಕೀಯ ಪಕ್ಷಗಳ್ಯಾವವೂ ಗೆಲ್ಲಲು ಆಗದಿದ್ದ ಪ್ರದೇಶವನ್ನು ಗೆದ್ದುಕೊಳ್ಳುವ ಮೂಲಕ, ಪಶ್ಚಿಮ ಬಂಗಾಳದಲ್ಲಿ ಮಮತಾಗೆ ಪರ್ಯಾಯವಾಗಿ ಹೊಮ್ಮುವ ಪ್ರಯತ್ನದಲ್ಲಿದ್ದ ಬಿಜೆಪಿಗೆ ಭರ್ಜರಿ ಏಟನ್ನೇ ನೀಡಿದೆ ತೃಣಮೂಲ.

ಈ ಹಿಂದೆ ಕಾಂಗ್ರೆಸ್ ವಶದಲ್ಲಿದ್ದ ರೈಗನಿ ಮುನ್ಸಿಪಾಲಿಟಿಯನ್ನು ಸಹ ತೃಣಮೂಲ ತನ್ನದಾಗಿಸಿಕೊಂಡಿದೆ. ಡಾರ್ಜಿಲಿಂಗ್, ಕಮಿಮ್ಪಾಂಗ್, ಕುರ್ಸೆಯಾಂಗ್ ಸ್ಥಳೀಯ ಸಂಸ್ಥೆಗಳು ಬಿಜೆಪಿ-ಜಿಜೆಎಂ ಬಳಿ ಉಳಿದುಕೊಂಡಿವೆ.

ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಬೂತ್ ಮಟ್ಟದ ಸಂಘಟನೆಯಲ್ಲಿ ಭಾರಿ ಶ್ರಮವನ್ನೇ ವಹಿಸಿದ್ದರು. ‘ವಿಸ್ತಾರ ಯಾತ್ರಾ’ ಹಮ್ಮಿಕೊಂಡು, ಹಲವು ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿದ್ದು, ನಕ್ಸಲೀಯ ಹಿಂಸಾಚಾರದ ಉಗಮವಾಗಿದ್ದ ನಕ್ಸಲ್ಬಾರಿ ಪ್ರದೇಶಕ್ಕೂ ಭೇಟಿ ಕೊಟ್ಟು ಭಾಷಣ ಮಾಡಿದ್ದರು.

ಮಮತಾ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಚುನಾವಣೆಯಲ್ಲಿ ಕೆಲಸ ಮಾಡದೇ ಇರುವುದು ಸ್ಪಷ್ಟ. ಅಂದಂತೆ, ಈ ಬಾರಿಯ ಚುನಾವಣೆಗಳಲ್ಲಿ ದೊಡ್ಡಮಟ್ಟದ ಹಿಂಸಾಚಾರವೂ ಸಂಭವಿಸಿತ್ತು.

Leave a Reply