ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದಾವೆ ವಿಧಿವಶ, ಪ್ರಧಾನಿ ಸಂತಾಪ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದಾವೆ ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

60 ವರ್ಷದ ದಾವೆ ಅವರು ಕಳೆದ ಕೆಲವು ತಿಂಗಳಿನಿಂದ ಪದೇ ಪದೇ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ನಿನ್ನೆ ಸಂಜೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಸಭೆಯಲ್ಲಿ ದಾವೆ ಭಾಗವಹಿಸಿದ್ದರು. ಆದರೆ, ಇಂದು ಬೆಳಗ್ಗೆ ಮತ್ತೆ ಆರೋಗ್ಯದಲ್ಲಿ ಸಮಸ್ಯೆಯಾದ್ದರಿಂದ ಅವರನ್ನು ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಧ್ಯಪ್ರದೇಶ ಮೂಲದ ದಾವೆ ಅವರು 2009ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ನಂತರ ಜಲಸಂಪನ್ಮೂಲ ಸಮಿತಿಯ ನೇಮಕ ಸದಸ್ಯರಾಗಿದ್ದರು. 2010ರಲ್ಲಿ ಮಾಹಿತಿ ಹಾಗೂ ಪ್ರಸರಣ ಇಲಾಖೆಯ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು. ಕಳೆದ ವರ್ಷ ಜುಲೈ 6ರಂದು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ಸ್ವತಂತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ದಾವೆ ಅವರ ಸಾವಿಗೆ ಪ್ರಧಾನಿ ಸೇರಿದಂತೆ ದೇಶದ ಅನೇಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದು, ನರೇಂದ್ರ ಮೋದಿ ತಮ್ಮ ಟ್ವಿಟರ್ ನಲ್ಲಿ ಹೇಳಿರುವುದಿಷ್ಟು…

‘ಕಳೆದ ಸಂಜೆಯಷ್ಟೇ ದಾವೆ ಅವರ ಜತೆ ಸಭೆ ನಡೆಸಿ ಪ್ರಮುಖ ನೀತಿಗಳ ಬಗ್ಗೆ ಚರ್ಚೆ ಮಾಡಿದ್ದೆ. ಅವರ ಸಾವು ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ. ಅವರನ್ನು ನಾವು ಸಾರ್ವಜನಿಕ ಸೇವೆಯ ಆರಾಧಕ ಎಂದೇ ಸ್ಮರಿಸುತ್ತೇವೆ. ಪರಿಸರ ರಕ್ಷಣೆಯ ಬಗ್ಗೆ ಅವರಿಗಿದ್ದ ಆಸಕ್ತಿ ಅಪಾರ. ನನ್ನ ಸ್ನೇಹಿತ ಹಾಗೂ ಉತ್ತಮ ಸಹೊದ್ಯೋಗಿಯಾಗಿದ್ದ ದಾವೆ ಅವರ ಆಕಸ್ಮಿಕ ನಿಧನಕ್ಕೆ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.’

Leave a Reply