ಎಸ್ಐಟಿ ವಿಚಾರಣೆಗೆ ಹಾಜರಾದ ನಂತರ ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ನನ್ನ ರಾಜಕೀಯ ವೇಗಕ್ಕೆ ಕಡಿವಾಣ ಹಾಕುವ ದುರುದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಧಾರವಿಲ್ಲದ ಮೊಕದ್ದಮೆಗಳನ್ನು ತಮ್ಮ ಮೇಲೆ ಹೂಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಅವರು ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳ ಮುಂದೆ ಗುರುವಾರ ವಿಚಾರಣೆಗೆ ಹಾಜರಾದರು. ವಿಚಾರಣೆ ಮುಗಿದ ನಂತರ ಹೊರಬಂದ ಎಚ್ಡಿಕೆ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ಹೀಗಿತ್ತು…

‘ನನ್ನ 20 ತಿಂಗಳ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಹಗರಣಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ವಿವೇಚನೆಗೆ ತಿಳಿದಂತೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆಯೇ ಹೊರತು ಕಾನೂನು ವಿರುದ್ಧವಾಗಿ ನಡೆದುಕೊಂಡಿಲ್ಲ. ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಕಳುಹಿಸಲು ಆಡಳಿತದಲ್ಲಿರುವವರು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಆರೋಪದಡಿ ಸಿಲುಕಿರುವ ಅಧಿಕಾರಿ ನನ್ನ ಹೆಸರು ಹೇಳಿದ ಮಾತ್ರಕ್ಕೆ ನಾನು ಆರೋಪಿಯಾಗುವುದಿಲ್ಲ. ವಿಚಾರಣೆ ವೇಳೆ ಎಲ್ಲವನ್ನು ಹೇಳಿದ್ದೇನೆ. ಆ ಅಧಿಕಾರಿ ಆರೋಪಗಳನ್ನು ಸಾಬೀತು ಪಡಿಸಲು ದಾಖಲೆಗಳನ್ನು ನೀಡಲಿ. ಇಲ್ಲದಿದ್ದನ್ನು ಕೆದಕಿ-ಹುಡುಕಿ ರಾಜಕೀಯ ಮಾಡಲು ಬಂದರೆ ಅದನ್ನು ಎದುರಿಸಲು ಸಿದ್ಧನಿದ್ದೇನೆ. ನನ್ನ ವಿಚಾರಣೆ ಅಗತ್ಯ ಬಿದ್ದರೆ ಎರಡು ದಿನ ಮೊದಲೇ ತಮಗೆ ಮಾಹಿತಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ.’

Leave a Reply