ನಾವು ಅಂತಿಮ ತೀರ್ಪು ನೀಡುವವರೆಗೂ ಜಾಧವಗೆ ಗಲ್ಲು ಹಾಕದಿರಿ: ಭಾರತದ ನೈತಿಕತೆ ಹೆಚ್ಚಿಸಿದ ಐಸಿಜೆ ತೀರ್ಪು

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ನ್ಯಾಯಾಲಯವು ಅಂತಿಮ ತೀರ್ಪು ನೀಡುವುದಕ್ಕೂ ಮೊದಲು ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನವು ಮರಣದಂಡನೆ ನೀಡುವಂತಿಲ್ಲ ಎಂದು ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯವು ತೀರ್ಪು ನೀಡಿದೆ.

ತೀರ್ಪಿನುದ್ದಕ್ಕೂ ಭಾರತದ ವಾದಗಳನ್ನು ನ್ಯಾಯಾಲಯ ಪುರಸ್ಕರಿಸುತ್ತಲೇ ಸಾಗಿದ್ದು ವಿಶೇಷ. ಈ ಪ್ರಕರಣವು ತನ್ನ ರಾಷ್ಟ್ರೀಯ ಭದ್ರತೆ ವಿಷಯವಾಗಿದ್ದು ಇದು ಅಂತಾರಾಷ್ಟ್ರೀಯ ನ್ಯಾಯಾಲಯ ಹಾಗೂ ವಿಯೆನ್ನಾ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪಾಕಿಸ್ತಾನದ ವಾದವನ್ನು ವಿಮರ್ಶೆಗೆ ಒಳಪಡಿಸಿದ ನ್ಯಾಯಾಲಯವು ಭಾರತ ಮತ್ತು ಪಾಕಿಸ್ತಾನಗಳೆರಡೂ ವಿಯೆನ್ನಾ ಒಪ್ಪಂದಕ್ಕೆ ಸಹಿ ಹಾಕಿವೆ ಎಂಬುದನ್ನು ನೆನಪಿಸಿತು.

ಇದು ವ್ಯಾಪ್ತಿಗೆ ಬರುವುದೋ ಇಲ್ಲವೋ ವಿಷದವಾಗಿ ಚರ್ಚಿಸಬಹುದು. ಆದರೆ ಆಗಸ್ಟ್ 2017ರ ನಂತರ ಜಾಧವ್ ಗೆ ಯಾವ ಕ್ಷಣದಲ್ಲಾದರೂ ನೇಣು ಹಾಕಬಹುದು ಎಂಬ ಸೂಚನೆ ಪಾಕಿಸ್ತಾನದ್ದಾಗಿದೆ. ಹೀಗಾದಲ್ಲಿ ನಂತರ ಭಾರತಕ್ಕೆ ಆಗಬಹುದಾದ ನಷ್ಟ ತಿರುಗಿಸಿಕೊಡಲಾಗದಂಥದ್ದು. ಆದ್ದರಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ಅಂತಿಮ ತೀರ್ಪು ಬರುವುದಕ್ಕೆ ಮುಂಚೆ ಮರಣದಂಡನೆ ಜಾರಿಗೊಳಿಸಬಾರದು ಎಂದು ಅದು ಸಾರಿದೆ.

ಅಲ್ಲದೇ ಜಾಧವ್ ಗಲ್ಲಿಗೇರಿಸುವುದಕ್ಕೆ ಅವಸರ ಮಾಡಬೇಕಾದ ಅಗತ್ಯ ಪಾಕಿಸ್ತಾನಕ್ಕಿಲ್ಲ. ಆದರೆ ಭಾರತ ಇದಕ್ಕೆ ಅವಸರಿಸದೇ ಹೋದರೆ ಕೊನೆಗೆ ಸರಿಪಡಿಸಲಾಗದ ಪೂರ್ವಾಗ್ರಹ ಕೃತ್ಯವೊಂದು ನಡೆದುಬಿಡಬಹುದಾದ ಸಂಭವವಿದೆ ಎಂದೂ ಕೋರ್ಟ್ ಹೇಳಿತು.

ಕುಲಭೂಷಣ್ ಜಾಧವ್ ರಿಗೆ ಕಾನೂನು ಸಹಾಯ ಮಾಡುವುದಕ್ಕೆ ಭಾರತವು ನಿರಂತರವಾಗಿ ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿದ್ದನ್ನೂ ಅದಕ್ಕೆ ಪಾಕಿಸ್ತಾನವು ಪೂರಕವಾಗಿ ಪ್ರತಿಕ್ರಿಯಿಸದೇ ಇರುವುದನ್ನೂ ತೀರ್ಪಿನಲ್ಲಿ ನ್ಯಾಯಾಲಯವು ಗುರುತಿಸಿದೆ.

Leave a Reply