ಮೊದಲ ವಾರದಲ್ಲೇ ನಂಬರ್ ಒನ್ ಪಟ್ಟಕ್ಕೇರಿತು ರಿಪಬ್ಲಿಕ್ ಟಿವಿ, ಯಶಸ್ಸಿನ ಬಗ್ಗೆ ಅರ್ನಾಬ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆಗಳೊಂದಿಗೆ ಜನರ ಮುಂದೆ ಬಂದ ರಿಪಬ್ಲಿಕ್ ಇಂಗ್ಲೀಷ್ ಸುದ್ದಿ ವಾಹಿನಿ ಭರ್ಜರಿ ಆರಂಭ ಪಡೆದುಕೊಂಡಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ನೀಡಿರುವ ಅಂಕಿ ಅಂಶಗಳ ಪ್ರಕಾರ ರಿಪಬ್ಲಿಕ್ ಟಿವಿ ತನ್ನ ಆರಂಭಿಕ ವಾರದಲ್ಲೇ ದೇಶದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಸುದ್ದಿ ವಾಹಿನಿ ಎಂಬ ಸ್ಥಾನ ಅಲಂಕರಿಸಿದೆ. ಅಷ್ಟೇ ಅಲ್ಲ, ಅರ್ಧದಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಮೊದಲ ವಾರದ ಮುಕ್ತಾಯ ಅಂದರೆ ಮೇ 12ರವರೆಗೆ ರಿಪಬ್ಲಿಕ್ ಟಿವಿ ಆರಂಭಿಕ ವಾರದಲ್ಲಿ 2.11 ಮಿಲಿಯನ್ ಇಂಪ್ರೆಷನ್ ಅಥವಾ ಟೆವಿವಿಷನ್ ವ್ಯೂವರ್ ಶಿಪ್ ಇನ್ ಥೌಸೆಂಡ್ (ಟಿವಿಟಿ) ಗಳನ್ನು ಪಡೆದಿದೆ. ಆ ಮೂಲಕ ಗೋಸ್ವಾಮಿ ತಾವು ಈ ಹಿಂದೆ ಕೆಲಸ ಮಾಡಿದ್ದ ಸುದ್ದಿ ವಾಹಿನಿ ಟೈಮ್ಸ್ ನೌ ಅನ್ನು ಹಿಂದಿಕ್ಕಿ ಶೇ.84.4ರಷ್ಟು ಹೆಚ್ಚಿನ ಮುನ್ನಡೆ ಪಡೆದುಕೊಂಡಿದೆ.

2017ರ 18 ವಾರಗಳ ಕಾಲ ಟೈಮ್ಸ್ ನೌ ಸುದ್ದಿ ವಾಹಿನಿ ಅತಿ ಹೆಚ್ಚು ವೀಕ್ಷಣೆಯಾದ ವಾಹಿನಿ ಎಂದು ಕರೆಯಲ್ಪಟ್ಟಿತ್ತು. ಆದರೆ ರಿಪಬ್ಲಿಕ್ ಟಿವಿ ತನ್ನ ಮೊದಲ ವಾರದಲ್ಲೇ ಟೈಮ್ಸ್ ನೌ ಅನ್ನು ಹಿಂದಕ್ಕೆ ಹಾಕಿದೆ. 19ನೇ ವಾರದಲ್ಲಿ ಟೈಮ್ಸ್ ನೌ ವಾಹಿನಿ 1.14 ಮಿಲಿಯನ್ ವೀಕ್ಷಣೆ ಪಡೆದರೆ, ಎನ್ ಡಿಟಿವಿ 0.35 ಮಿಲಿಯನ್ ವೀಕ್ಷಣೆ ಪಡೆದಿದೆ. ತಮ್ಮ ವಾಹಿನಿಯ ಈ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಅರ್ನಾಬ್ ಗೋಸ್ವಾಮಿ ಪ್ರತಿಕ್ರಿಯೆ ನೀಡಿರುವುದು ಹೀಗೆ…

‘ರಿಪಬ್ಲಿಕ್ ಟಿವಿ ಮೊದಲ ವಾರದಲ್ಲೇ ದೊಡ್ಡ ಮಟ್ಟದ ವೀಕ್ಷಣೆಯನ್ನು ಗಳಿಸಿದೆ. ಜನರ ಪ್ರೀತಿ, ಬೆಂಬಲದಿಂದ ಧನ್ಯನಾಗಿದ್ದೇನೆ. ಜನರು ವಿಶ್ವಾಸಾರ್ಹ ಸುದ್ದಿ ಎನಿಸಿದ್ದನ್ನು ನೋಡೇ ನೋಡುತ್ತಾರೆ ಎಂಬ ನಂಬಿಕೆ ನಿಜವಾಗಿದೆ. ರಿಪಬ್ಲಿಕ್ ಟಿವಿಯನ್ನು ದೇಶದ ನಂಬರ್ ಒನ್ ಸುದ್ದಿವಾಹಿನಿಯನ್ನಾಗಿ ಮಾಡಿದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ.’

ಅರ್ನಾಬ್ ಗೋಸ್ವಾಮಿ ರಿಪಬ್ಲಿಕ್ ಟೀವಿಯ ಭರ್ಜರಿ ಓಪನಿಂಗ್ ಸಂತೋಷದಲ್ಲಿದ್ದು, ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದವರಿಗೆ ಈ ಯಶಸ್ಸಿನ ಮೂಲಕ ತಿರುಗೇಟು ನೀಡಿದ್ದಾರೆ. ಆದರೆ ಇದನ್ನು ಸಾಧಿಸಿರುವ ಮಾರ್ಗದ ಬಗ್ಗೆಯೂ ಚರ್ಚೆಯಾಗುತ್ತಿದೆ. ಅದೇನೆಂದರೆ, ರಿಪಬ್ಲಿಕ್ ಟೀವಿಯು ಕೇಬಲ್ ಆಪರೇಟರ್ ಗಳ ಜತೆ ಒಪ್ಪಂದ ಮಾಡಿಕೊಂಡು ರಿಪಬ್ಲಿಕ್ ವಾಹಿನಿಯು ಹಲವು ನಂಬರುಗಳಲ್ಲಿ ಪುನರಾವರ್ತಿತವಾಗಿ ಪ್ರಸಾರವಾಗುವಂತೆ ಮಾಡಿದೆ. ಇದೊಂದು ಅನೈತಿಕ ಪ್ರಸಾರ ಮಾರ್ಗವಾಗಿದ್ದು, ರಿಪಬ್ಲಿಕ್ ಟಿವಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ಎನ್ ಬಿಎ ದೂರು ನೀಡಿದೆ. ಇದರ ಜತೆಗೆ ರಿಪಬ್ಲಿಕ್ ಟಿವಿ ಈ ಅಡ್ಡ ದಾರಿಯನ್ನು ಬಿಡುವವರೆಗೂ ಈ ವಾಹಿನಿಯ ವೀಕ್ಷಣಾ ಪ್ರಮಾಣದ ಅಂಕಿ ಅಂಶವನ್ನು ಬಿಡುಗಡೆ ಮಾಡಬಾರದು ಎಂದು ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಗೆ ಮನವಿ ಮಾಡಿತ್ತು. ಆದರೆ ಅದಕ್ಕೆ ಪುರಸ್ಕಾರ ಸಿಕ್ಕಿಲ್ಲ.

ರಿಪಬ್ಲಿಕ್ ಟಿವಿ ವಾಹಿನಿಯ ಅದ್ಭುತ ರೇಟಿಂಗ್, ಸೈದ್ಧಾಂತಿಕವಾಗಿ ಬಲದತ್ತ ಹೊರಳುವ ಒತ್ತಡವನ್ನು ಎಲ್ಲ ಸುದ್ದಿವಾಹಿನಿಗಳ ಮೇಲೆ ಹೇರಲಿರುವುದು ಸ್ಪಷ್ಟ.

Leave a Reply