ಶರಣಾಗತ ಮಾವೋವಾದಿ ಬೊಟ್ಟು ಮಾಡುತ್ತಿರುವುದು ಪ್ರೊಫೆಸರ್, ಮಾನವ ಹಕ್ಕು ಕಾರ್ಯಕರ್ತರತ್ತ… ತೆರೆದುಕೊಳ್ಳುತ್ತಿದೆ ನಗರ ನಕ್ಸಲರ ಅಧ್ಯಾಯ

 

ಡಿಜಿಟಲ್ ಕನ್ನಡ ವಿಶೇಷ:

ಪೊಡಿಯಾ ಪಾಂಡು ಆಲಿಯಾಸ್ ಪಾಂಡಾ. 25 ಸಿಆರ್ ಪಿಎಫ್ ಯೋದರನ್ನು ಚತ್ತೀಸ್ಗಢದಲ್ಲಿ ಕೊಂದ ನಕ್ಸಲ್ ತಂಡದಲ್ಲಿದ್ದವ ತಾನು ಎಂದು ಶರಣಾಗಿರುವ ಮಾವೋವಾದಿಯ ಹೆಸರು.

ರಾಯ್ಪುರದ ಪತ್ರಿಕಾಗೋಷ್ಟಿಯಲ್ಲಿ ಈತ ಹೇಳಿದ್ದು- ತಾನು ಕಾಡಿನಲ್ಲಿರುವ ಮಾವೋವಾದಿ ಅಗ್ರ ನಾಯಕರಿಗೂ ಹಾಗೂ ನಗರದಲ್ಲಿರುವ ನಕ್ಸಲ್ ಬೆಂಬಲಿಗರಿಗೂ ಸೇತುವಾಗಿ ಕೆಲಸ ಮಾಡುತ್ತಿದ್ದೆ ಎನ್ನೋದು. ಇವರಿಬ್ಬರ ನಡುವಿನ ಭೇಟಿಗಳನ್ನು ಸಂಪನ್ನಗೊಳಿಸುತ್ತಿದ್ದದ್ದು ತಾನೇ ಎಂದಿದ್ದಾನೀತ. ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ನಂದಿನಿ ಸುಂದರ್ ಹಾಗೂ ಮಾನವ ಹಕ್ಕು ಹೋರಾಟಗಾರ ಬೆಲಾ ಭಾಟಿಯಾ ಇಬ್ಬರೂ ಈ ನಕ್ಸಲ್ ಜಾಲದಲ್ಲಿದ್ದಾರೆ ಎಂಬುದು ಪಾಂಡಾ ಮಾಹಿತಿ.

ಇದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ಬುದ್ಧ ಇನ್ ಟ್ರಾಫಿಕ್ ಜಾಮ್’ ಚಿತ್ರವನ್ನು ನೆನಪಿಸುವಂಥ ನಿಜಘಟನೆಯಾಗಿ ಗೋಚರಿಸುತ್ತಿದೆ. ಈ ಚಿತ್ರದಲ್ಲಿ ವಿಶ್ವವಿದ್ಯಾಲಯದಲ್ಲಿರುವ ಪ್ರೊಫೆಸರ್ ಒಬ್ಬ ನಗರ ನಕ್ಸಲನಾಗಿರುತ್ತಾನೆ. ಕಾಡಿನಲ್ಲಿರುವ ನಕ್ಸಲ್ ನಾಯಕ ಹಾಗೂ ಈತ ಒಂದೇ ವಿಚಾರಧಾರೆಯಿಂದ ಬಂದವರು. ನೀನು ಕಾಡಿನಲ್ಲಿರು ಹಾಗೂ ನಾನು ನಾಡಿನಲ್ಲಿದ್ದು ಸಂಭಾಳಿಸುವೆ ಎಂಬ ಒಪ್ಪಂದವಾಗಿರುತ್ತದೆ. ಹಾಗೆಂದೇ ಈತನ ವಿದ್ಯಾರ್ಥಿಯು ಬುಡಕಟ್ಟಿನ ಜನರ ಉತ್ಪನ್ನಗಳಿಗೆ ಬೆಲೆ ಒದಗಿಸುವ ಯೋಜನೆ ಮಾಡಹೊರಟಾಗ ಅದನ್ನು ತಡೆಯುತ್ತಾನೆ. ಏಕೆಂದರೆ ಬುಡಕಟ್ಟು ಮಂದಿಯ ಬಂಡವಾಳ ಹಾಗೂ ಹೆದರಿಕೆಗಳೇ ನಕ್ಸಲ್ ಹಿಂಸಾ ಸಾಮ್ರಾಜ್ಯದ ಬಂಡವಾಳ. ಸ್ವಯಂಸೇವಾ ಸಂಸ್ಥೆಗಳು, ಸ್ಥಳೀಯ ಸಂಪತ್ತಿನ ಮೇಲೆ ಹಿಡಿತ, ಹಫ್ತಾ ಇತ್ಯಾದಿಗಳ ನಕ್ಸಲ್ ಸಾಮ್ರಾಜ್ಯ ಕೇವಲ ಕಾಡಿನ ವಿದ್ಯಮಾನವಾಗಿರದೇ ನಗರದಲ್ಲಿ ಹೇಗೆ ವ್ಯವಸ್ಥಿತ ಜಾಲವಾಗಿದೆ ಎಂಬುದನ್ನು ಚಿತ್ರವು ಪರಿಚಯಿಸಿತ್ತು.

ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಪ್ರಗತಿಪರರೆನಿಸಿಕೊಳ್ಳುವ ಬಹುತೇಕರು ನಕ್ಸಲ್ ಸಶಸ್ತ್ರ ಬಂಡಾಯಕ್ಕೆ ನಾಜೂಕಿನ ಬೆಂಬಲ ನೀಡುತ್ತಿದ್ದಾರೆಂಬುದು ತೆರೆದಿಟ್ಟ ರಹಸ್ಯ.

ಪಾಂಡಾ ಹೇಳಿರುವುದು- ನಂದಿನಿ ಸುಂದರ್, ಭಾಟಿಯಾ ಸೇರಿದಂತೆ ಹಲವರನ್ನು ನಾನು ದೆಹಲಿಯಿಂದ ಹಲವು ಬಾರಿ ದಕ್ಷಿಣ ಬಸ್ತಾರ್ ಗೆ ಕರೆದುಕೊಂಡುಹೋಗಿದ್ದೇನೆ. ಮಾವೋವಾದಿ ಉಗ್ರ ನಾಯಕರಾದ ರಾಮಣ್ಣ, ಹಿದ್ಮಾ, ಅರ್ಜುನ್ ಬಳಿ ಸೇರಿಸಿ ಸುಕ್ಮಾದಲ್ಲಿ ಮೀಟಿಂಗ್ ಆಗುವಂತೆ ಸೇತುವಾಗಿದ್ದು ನಾನೇ.

ಹೀಗೆ ಮಾವೋವಾದಿಯೊಬ್ಬ ನೇರವಾಗಿ ಪ್ರೊಫೆಸರ್ ನಂದಿನಿ ಸುಂದರ್ ಹೆಸರು ಉಲ್ಲೇಖಿಸಿರುವುದಕ್ಕೆ ‘ನಗರ ನಕ್ಸಲ್’ಗಳ ಪ್ರತಿಕ್ರಿಯೆ ಏನು?

ಪೊಲೀಸರು ಬಲಾತ್ಕಾರವಾಗಿ ಪಾಂಡಾನಿಂದ ಈ ಹೇಳಿಕೆ ಹೊರಹಾಕಿಸಿದ್ದಾರೆ ಎಂಬುದು ಪ್ರೊಫೆಸರ್ ನಂದಿನಿ ಸುಂದರ್ ಪ್ರತಿಕ್ರಿಯೆ. ಪಾಂಡಾ ಶರಾಗತನಾಗಿದ್ದಲ್ಲ, ಪೊಲೀಸರು ಬಲವಂತದಿಂದ ಒಯ್ದು ಆತನ ತಲೆಗೆ ಪ್ರಕರಣಗಳನ್ನು ಕಟ್ಟುತ್ತಿದ್ದಾರೆ ಎಂದು ಪಾಂಡಾ ಹೆಂಡತಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿರುವುದಾಗಿಯೂ ವರದಿಯಾಗಿದೆ.

ಇದೇ ನಂದಿನಿ ಸುಂದರ್ ವಿರುದ್ಧ ನವೆಂಬರ್ 2016ರಲ್ಲಿ ಹತ್ಯೆಗೆ ಯತ್ನ ಹಾಗೂ ದೊಂಬಿ ಪ್ರಯತ್ನಗಳ ಸಂಬಂಧ ದೂರೂ ದಾಖಲಾಗಿತ್ತು. ಮಾವೋವಾದಿಗಳ ವಿರುದ್ಧ ಹೋರಾಟದ ಸಂಘಟನೆಯಲ್ಲಿದ್ದ ಸುಕ್ಮಾದ ಬುಡಕಟ್ಟು ನೇತಾರ  ಶಮಂತ ಬಗ್ಹೆಲ್ ಆಗಸ್ಟ್ 2016ರಲ್ಲಿ ಹತ್ಯೆಯಾದರು. ಇದನ್ನು ಪ್ರೇರೇಪಿಸಿದ್ದು ನಂದಿನಿ ಸುಂದರ್ ಗ್ಯಾಂಗೇ ಅನ್ನೋದು ಆರೋಪ.

‘ನಾವು ಪೊಲೀಸರ ದೌರ್ಜನ್ಯ, ನಕಲಿ ಎನ್ಕೌಂಚರ್ ಗಳನ್ನೆಲ್ಲ ಪ್ರಶ್ನಿಸುತ್ತೇವಾದ್ದರಿಂದ ಇಂಥ ಸುಳ್ಳು ಕೇಸುಗಳು ದಾಖಲಾಗುತ್ತಿರುತ್ತವೆ’ ಎಂಬುದು ನಂದಿನಿ ಸುಂದರ್ ಸಮರ್ಥನೆಯಾಗಿತ್ತು.

ಈ ಸಮರ್ಥನೆಗಳ ಕತೆ ಹಾಗಿರಲಿ. ಇತ್ತೀಚಿನ ಭದ್ರತಾ ಪಡೆಯ ಜೀವಹಾನಿ ಹೊರತಾಗಿಯೂ ನಕ್ಸಲ್ ನಿಗ್ರಹದಲ್ಲಿ ಅಪೂರ್ವ ಪ್ರಗತಿಯಾಗಿದೆ. ಕಾಡಿನ ನಕ್ಸಲ್ ಉಗ್ರರನ್ನು ಹೊಸಕಿಹಾಕುವ ಕಾರ್ಯ ಕೆಲ ವರ್ಷಗಳಲ್ಲಿ ಮುಕ್ತಾಯವಾದೀತೇನೋ. ಆದರೆ ನಾಡಿನ ನಕ್ಸಲರನ್ನು ಮಟ್ಟಹಾಕುವುದಕ್ಕೆ ಹೊಸದೇ ಕಾರ್ಯತಂತ್ರವೊಂದು ರೂಪುಗೊಳ್ಳಬೇಕಿರುವ ಅಗತ್ಯವನ್ನು ಈ ವಿದ್ಯಮಾನಗಳು ಸಾರುತ್ತಿವೆ.

Leave a Reply