ಬೆಲ್ಟು ರಸ್ತೆಯ ಕನಸು ಮಾರಿಯೇಬಿಟ್ಟೆ ಎಂದುಕೊಂಡ ಚೀನಾಕ್ಕೆ ನಿಧಾನಕ್ಕೆ ಶುರುವಾಯ್ತೇ ತಲೆನೋವು?

ಚೈತನ್ಯ ಹೆಗಡೆ

29 ರಾಷ್ಟ್ರಗಳ ಮುಖ್ಯಸ್ಥರ ಖುದ್ದು ಹಾಜರಿ, 139 ರಾಷ್ಟ್ರಗಳ ಪ್ರಾತಿನಿಧ್ಯ… ಹಿಂದಿನವಾರ ಚೀನಾವು ಒನ್ ಬೆಲ್ಟ್ ಒನ್ ರೋಡ್ ಸಮಾವೇಶ ನಡೆಸಿದಾಗ ಅದರಲ್ಲಿ ಭಾಗವಹಿಸಿದ್ದ ಈ ಸಂಖ್ಯೆಗಳನ್ನು ನೋಡಿದರೆ, ಚೀನಾ ಜಗತ್ತಿನ ದೊಡ್ಡಣ್ಣನಾಗಿಯೇಬಿಟ್ಟಿತು ಎಂಬಂತಿತ್ತು. ಭಾರತ ಮಾತ್ರ ಇದರಿಂದ ತನ್ನ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆಯೆಂದು ಹೊರಗುಳಿಯಿತು. ‘ನಂತರದಲ್ಲಿ ಈ ಯೋಜನೆಯನ್ನು ಸೇರಿಕೊಳ್ಳುವುದಕ್ಕೆ ಬಂದರೆ ನಿಮ್ಮ ಪಾತ್ರ ಗೌಣವಾಗಿರುತ್ತದೆ ಹುಷಾರ್’ ಅಂತೆಲ್ಲ ಚೀನಾ ಅದೇ ಸಭೆಯಲ್ಲಿ ಭಾರತವನ್ನು ಕೆಣಕಿತು.

ಎಲ್ಲರೂ ಗೋಣು ಹಾಕುತ್ತಿರುವಾಗ ಭಾರತ ಮಾತ್ರ ಹೊರಗುಳಿದಿದ್ದು ಸರಿಯಾ, ಇದನ್ನು ಅದು ದಕ್ಕಿಸಿಕೊಂಡೂತಾ ಎಂಬ ಪ್ರಶ್ನೆಗಳು ಸಹಜವಾಗಿ ಎದ್ದಿದ್ದವು. ಭಾರತ ಮಾತ್ರ, ‘ಇಂಥದೊಂದು ವ್ಯಾಪಕ ಯೋಜನೆಗೆ ಬೇಕಾದ ಪಾರದರ್ಶಕತೆ, ಮುಕ್ತತೆ ಯಾವುದೂ ಚೀನಾ ಬಳಿ ಇಲ್ಲ, ಇದು ದೀರ್ಘಾವಧಿಯಲ್ಲಿ ಸ್ಥಳೀಯ ಸಮುದಾಯಗಳನ್ನು ಸಾಲದಲ್ಲಿ ಮುಳುಗಿಸಿ ಪರಿಸರಕ್ಕೆ ಘಾಸಿ ಮಾಡುವ ಯೋಜನೆಯಾಗುತ್ತದೆ’ ಎಂದಿತ್ತು.

ಅದಾಗಿ ಕೆಲ ದಿನಗಳ ನಂತರ ಯುರೋಪಿಯನ್ ಒಕ್ಕೂಟದ ರಾಜತಾಂತ್ರಿಕರೆಲ್ಲ ಭಾರತದ ಧ್ವನಿಯಲ್ಲೇ ಮಾತಾಡಲು ತೊಡಗಿದ್ದಾರೆ. ಬೀಜಿಂಗ್ ಗೆ ಹೋಗಿ ಭರ್ಜರಿ ಊಟ ಮಾಡಿ ಬಂದಿದ್ದೇನೋ ಹೌದು. ಆದರೆ ಒಬಿಒಆರ್ ಕನಸಿನಲ್ಲಿ ಯುರೋಪಿನ ಸಹಭಾಗಿತ್ವ ಮುಖ್ಯವಾಗಿ ಸಹ ಮಾಲೀಕತ್ವದ ಬಗ್ಗೆ ಚೀನಾ ಸ್ಪಷ್ಟತೆ ಹೊಂದಿಲ್ಲ ಎಂಬ ಆತಂಕ ಅವರನ್ನು ಕಾಡತೊಡಗಿದೆ. ಹಾಗೆಂದೇ ಪ್ರಖ್ಯಾತ ಗಾರ್ಡಿಯನ್ ಪತ್ರಿಕೆಯ ಜತೆ ತಮ್ಮೆಲ್ಲ ಆತಂಕಗಳನ್ನು ಹರವಿಡುತ್ತಿರುವ ಐರೋಪ್ಯ ರಾಜತಾಂತ್ರಿಕರು ಚೀನಾದ ಪ್ರಸ್ತಾವಿತ ದಾಖಲೆಗಳಲ್ಲಿ ಪಾರದರ್ಶಕತೆಯ ಕೊರತೆ ಇದೆ ಎನ್ನುತ್ತಿದ್ದಾರೆ. ಒಬಿಒಆರ್ ಸಮಾವೇಶದಲ್ಲಿ ಚೀನಾ ಕನಸು ಹರವಿಡುತ್ತಿದ್ದಾಗ ಚೆಂದವಾಗಿಯೇ ಕಂಡಿದ್ದರೂ ಬಹುಶಃ ಅದರ ವಿವರಗಳನ್ನು ಓದಿದ ನಂತರ ಆತಂಕ ಶುರುವಾಗಿದ್ದಿರಬೇಕು!

ಬಹಳ ಮುಖ್ಯವಾಗಿ, ಒಬಿಒಆರ್ ಗೆ ಆಧಾರಸ್ತಂಭದಂತಿರುವ ಚೀನಾ-ಪಾಕ್ ಆರ್ಥಿಕ ಕಾರಿಡಾರಿಗೆ ಪಾಕಿಸ್ತಾನದಲ್ಲೇ ಅಪಸ್ವರಗಳೆದ್ದಿವೆ. ಈ ಆರ್ಥಿಕ ಕಾರಿಡಾರ್ ಕೇವಲ ಹೆದ್ದಾರಿಯಾಗಿರದೇ, ಪಾಕಿಸ್ತಾನವನ್ನು ಹೇಗೆ ವಸಾಹತು ದೇಶವನ್ನಾಗಿಸುತ್ತಿದೆ ಅಂತ ವಿವರಿಸುತ್ತ, ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್, ಸರಣಿ ಲೇಖನಗಳನ್ನೇ ಶುರುಮಾಡಿದೆ. ಆರ್ಥಿಕ ಕಾರಿಡಾರ್ ಒಪ್ಪಂದದ ದಾಖಲೆಗಳನ್ನು ಅಧ್ಯಯನ ಮಾಡಿರುವುದಾಗಿ ಹೇಳಿರುವ ಪತ್ರಿಕೆ ಈ ಕೆಳಗಿನ ಆಕ್ಷೇಪಕಾರಿ ಅಂಶಗಳನ್ನು ಅಲ್ಲಿ ಕಾಣುತ್ತಿದೆ.

  • ಇದು ಪಾಕಿಸ್ತಾನದ ಮುಖ್ಯ ನಗರಗಳನ್ನು ನಿರಂತರ ಕೆಮರಾ ಗ್ರಹಣದಲ್ಲಿ ಬಂಧಿಸಿಡುವ ಪ್ರಸ್ತಾವವನ್ನು ಹೊಂದಿದೆ. ಅಂದರೆ ಕರಾಚಿ ಸೇರಿದಂತೆ ಕಾರಿಡಾರ್ ಹಾದುಹೋಗುವ ಎಲ್ಲ ನಗರಗಳು ಚೀನಿಯರ ತೀವ್ರ ನಿಗಾಕ್ಕೆ ಒಳಪಟ್ಟಂತಾಗುತ್ತದೆ.
  • ಚೀನಿಯರಿಗೆ ವೀಸಾ ರಹಿತ ಪಾಕಿಸ್ತಾನ ಪ್ರವೇಶದ ಪ್ರಸ್ತಾವವೂ ಈ ಕಾರಿಡಾರ್ ಪ್ರಸ್ತಾವದ ದಾಖಲೆಗಳಲ್ಲಿ ಸ್ಪಷ್ಟವಾಗಿದೆ.
  • ಚೀನಾ ಕಂಪನಿಗಳಿಗೆ ನೀರಾವರಿಯೇ ಮುಂತಾದ ಪ್ರಯೋಗಗಳಿಗೆಂದು ಪಾಕಿಸ್ತಾನದ ಸಾವಿರಾರು ಎಕರೆ ಕೃಷಿಭೂಮಿಯನ್ನು ಮುಕ್ತವಾಗಿರಿಸುವ ಪ್ರಸ್ತಾವವನ್ನು ಪತ್ರಿಕೆ ಪ್ರಶ್ನಿಸಿದೆ.
  • ಇಂಟರ್ನೆಟ್ ಹಾಗೂ ಟಿವಿ ಪ್ರಸಾರಕ್ಕೆ ಅನುವಾಗುವ ಫೈಬರ್ ಆಪ್ಟಿಕ್ ಜಾಲವನ್ನು ಆರ್ಥಿಕ ಕಾರಿಡಾರಿನ ಭಾಗವಾಗಿ ನಿರ್ಮಿಸುವ ಒಪ್ಪಂದ ಮಾಡಿಕೊಂಡಿದೆ ಚೀನಾ. ಸಂವಹನ ವ್ಯವಸ್ಥೆಯ ಬಹುದೊಡ್ಡ ಭಾಗ ಇದರಿಂದಾಗಿ ಚೀನಾ ಹಿಡಿತಕ್ಕೆ ಹೋಗುತ್ತದೆ. ಈ ಜಾಲವನ್ನು ‘ಚೀನಾ ಸಂಸ್ಕೃತಿಯ ಪ್ರಸರಣ’ಕ್ಕೂ ಬಳಸಿಕೊಳ್ಳುವುದಾಗಿ ಒಪ್ಪಂದ ಸಾರುತ್ತದೆ. ಹೀಗಂದರೇನು ಅಂತ ಅಲ್ಲಿನ ಅಭಿಪ್ರಾಯ ನಿರೂಪಕರು ಸಂಶಯದಿಂದ ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ, ಹೊರಗಿನಿಂದ ಭಾರಿ ವೈಭವೋಪೇತವಾಗಿ ಕಾಣಿಸುವ ಚೀನಾದ ಯೋಜನಾ ಜಾಲವು ಸ್ವಲಾಭವನ್ನೇ ಮುಖ್ಯ ವಿನ್ಯಾಸವನ್ನಾಗಿ ಹೊಂದಿರುವುದು ಖಚಿತ. ಹೀಗಾಗಿ ಒಬಿಒಆರ್ ಅಷ್ಟು ಸುಲಭಕ್ಕೆ ಅನುಷ್ಠಾನವಾಗುವುದು ಅನುಮಾನವೇ.

Leave a Reply