ಚೀನಾದಲ್ಲಿ ದಾಖಲೆ ಬರೆದ ದಂಗಲ್, ಎರಡೇ ವಾರದಲ್ಲಿ ಈ ಚಿತ್ರ ಗಳಿಸಿದ ಮೊತ್ತ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಮಹಿಳಾ ಕುಸ್ತಿಪಟುಗಳಾದ ಫೊಗತ್ ಸಹೋದರಿಯ ಜೀವನಾಧಾರಿತ ಚಿತ್ರ ‘ದಂಗಲ್’ ಭಾರತೀಯ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಸೃಷ್ಟಿಸಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ಈಗ ಈ ಚಿತ್ರ ನೆರೆಯ ಚೀನಾದಲ್ಲೂ ಸದ್ದು ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಆ ಮೂಲಕ ಚೀನಾದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ.

ಪುರುಷ ಸಮಾಜದಲ್ಲಿ ಲಿಂಗತಾರತಮ್ಯವನ್ನು ಮೆಟ್ಟಿನಿಂತು ಯಶಸ್ಸು ಸಾಧಿಸಿದ ಮಹಿಳಾ ಕುಸ್ತಿಪಟುಗಳ ಸಾಹಸಗಾಥೆಯನ್ನು ತೋರಿಸಿರುವ ದಂಗಲ್ ಚಿತ್ರ, ಚೀನಾ ಪ್ರೇಕ್ಷಕರ ಮನ ಗೆದ್ದಿದೆ. ಈ ಇಬ್ಬರು ಮಹಿಳಾ ಕುಸ್ತಿಪಟುಗಳ ತಂದೆ ಹಾಗೂ ಕೋಚ್ ಆದ ಮಹಾವೀರ್ ಫೊಗತ್ ಪಾತ್ರ ನಿರ್ವಹಿಸಿರುವ ಅಮೀರ್ ಖಾನ್ ಚೀನಿಯರ ಪ್ರಶಂಸೆ ಗಿಟ್ಟಿಸಿದ್ದಾರೆ.

ಅಂದಹಾಗೆ ಈ ಚಿತ್ರ ಮೇ 5ರಂದು ಚೀನಾದಲ್ಲಿ ತೆರೆಕಂಡಿದ್ದು, ಎರಡು ವಾರಗಳ ಅಂತರದಲ್ಲಿ 487 ಮಿಲಿಯನ್ ಯುಹಾನ್ (₹ 458 ಕೋಟಿ) ಬಾಚಿಕೊಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ ಎಂದು ಚೀನಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಭರ್ಜರಿ ಯಶಸ್ಸಿನ ಮೂಲಕ ಚೀನಾದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಹೊರತಾದ ಚಿತ್ರ ಎಂಬ ಖ್ಯಾತಿಗೂ ಭಾಜನವಾಗಿದೆ ದಂಗಲ್. ಈ ಹಿಂದೆ 2009ರಲ್ಲಿ ತೆರಕಂಡ ಅಮೀರ್ ಖಾನ್ ಅವರ ‘3 ಇಡಿಯಟ್ಸ್’ ಚಿತ್ರ ಸಹ ಚೀನಾದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.

ಭಾರತೀಯ ಚಿತ್ರಗಳು ಚೀನಾದಲ್ಲಿ ಯಶಸ್ಸು ಕಂಡಿರುವ ಉದಾಹರಣೆ ತೀರಾ ಕಡಿಮೆ. 1950ರ ರಾಜ್ ಕಪೂರ್ ಅವರ ಚಿತ್ರಗಳ ಮೂಲಕ ಮೊದಲ ಬಾರಿಗೆ ಭಾರತೀಯ ಸಿನಿಮಾಗಳು ಚೀನಾದಲ್ಲಿ ಪದಾರ್ಪಣೆ ಮಾಡಿದವು. ಅಲ್ಲಿಂದ ಇಲ್ಲಿಯವರೆಗೂ ಚೀನಾದಲ್ಲಿ ಭಾರತೀಯ ಚಿತ್ರಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿರಲಿಲ್ಲ. ಆದರೆ ಈಗ ದಂಗಲ್ ಚಿತ್ರ ಈ ಮಟ್ಟದ ಯಶಸ್ಸು ಸಾಧಿಸಿ ಚೀನಾ ಹಾಗೂ ಭಾರತೀಯ ಚಿತ್ರಗಳ ನಡುವಣ ಅಂತರವನ್ನು ಕಡಿಮೆ ಮಾಡುವ ಸೂಚನೆ ನೀಡಿದೆ.

ಚೀನಾದ ಖ್ಯಾತ ಸಾಮಾಜಿಕ ಜಾಲ ತಾಣವಾದ (ಟ್ವಿಟರ್ ಮಾದರಿಯ) ವೈಬೊದಲ್ಲೂ ದಂಗಲ್ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆ ಪೈಕಿ ಕೆಲವರು ಹೊಗಳಿದರೆ, ಮತ್ತೆ ಕೆಲವರು ತೆಗಳಿದ್ದಾರೆ. ‘ಲೆಟ್ಸ್ ವ್ರೆಸಲ್ ಡ್ಯಾಡ್’ ಎಂಬುದು ಚೀನಾದಲ್ಲಿ ಬಿಡುಗಡೆಯಾದ ದಂಗಾಲ್ ಚಿತ್ರದ ಶೀರ್ಷಿಕೆ. ಈ ಚಿತ್ರವನ್ನು ಮೆಚ್ಚಿದ ಪ್ರೇಕ್ಷಕರು ಈ ಹೆಸರಿನ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವು ಹೀಗಿವೆ…

‘ದಂಗಲ್ ನೈಜ್ಯ ಕಥೆಯನ್ನು ಕಲಾತ್ಮಕವಾಗಿ ತೋರಿಸಿದೆ. ಚಿತ್ರಕತೆಯಿಂದ ನಟ- ನಟಿಯರ ಪ್ರದರ್ಶನ ಅತ್ಯುತ್ತಮವಾಗಿದೆ. ಚೀನಾ ಸಿನಿಮಾಗಳು ಈ ಚಿತ್ರವನ್ನು ನೋಡಿ ಕಲಿಯುವುದು ಸಾಕಷ್ಟಿದೆ. ನಮ್ಮಲ್ಲಿ ಅನೇಕ ಕ್ರೀಡಾ ಸಾಧಕರಿದ್ದಾರೆ. ಆದರೂ ಇಂತಹ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಏಕೆ?’

‘ಕಳೆದ ರಾತ್ರಿ ಸುಮಾರು 20 ಜನ ಸ್ನೇಹಿತರೊಂದಿಗೆ ಈ ಚಿತ್ರ ನೋಡಲು ಹೋಗಿದ್ದೆ. ಈ ಚಿತ್ರ ಮುಕ್ತಾಯಗೊಂಡು ಚಿತ್ರ ತಂಡದ ಹೆಸರುಗಳನ್ನು ಬಿತ್ತರಿಸುವಾಗ 7-8 ಸ್ನೇಹಿತರು ಶೌಚಾಲಯಕ್ಕೆ ಓಡಿ ಹೋದರು. ಅವರೆಲ್ಲರು ಅಷ್ಟು ಆಸಕ್ತಿಯಿಂದ ಚಿತ್ರವನ್ನು ನೋಡಿದ್ದರು. ನಂತರ ಈ ಚಿತ್ರದ ಬಗ್ಗೆ ಎಲ್ಲರೂ ಮೆಚ್ಚಿಗೆಯ ಮಾತುಗಳನ್ನಾಡಿದರು.’

‘ಈ ಚಿತ್ರ ನನ್ನನ್ನು ಅಳುವಂತೆ ಹಾಗೂ ನಗುವಂತೆ ಮಾಡಿತು. ನಾನು ಅಮೀರ್ ಖಾನ್ ಅವರ ದೊಡ್ಡ ಅಭಿಮಾನಿ ಅವರು ಎಂದಿಗೂ ನನಗೆ ನಿರಾಸೆ ಮಾಡಿಲ್ಲ.’

ಈ ರೀತಿಯಾದ ಹೊಗಳಿಕೆಗಳ ಜತೆಗೆ ದಂಗಲ್ ಚಿತ್ರಕ್ಕೆ ಟೀಕೆಗಳು ವ್ಯಕ್ತವಾಗಿದ್ದು, ‘ಈ ಚಿತ್ರದಲ್ಲಿ ಒಬ್ಬ ತಂದೆ ತನ್ನ ಆಸೆ ಹಾಗೂ ಕನಸುಗಳನ್ನು ತನ್ನ ಹೆಣ್ಣು ಮಕ್ಕಳ ಮೇಲೆ ಬಲವಂತವಾಗಿ ಹೇರುವುದನ್ನು ಬಿಂಬಿಸಿದೆ’ ಎಂದಿದ್ದಾರೆ.

ಈ ಎಲ್ಲ ಅಂಶಗಳು ದಂಗಲ್ ಚಿತ್ರ ಚೀನಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹಣ ಮಾಡುವ ಸೂಚನೆ ದಟ್ಟವಾಗಿದೆ. ಭಾರತದ ಚಿತ್ರವೊಂದು ಚೀನಾದಲ್ಲಿ ಈ ಮಟ್ಟದ ಚರ್ಚೆ ಹಾಗೂ ಸ್ಫೂರ್ತಿಗೆ ಕಾರಣವಾಗಿರೋದು ಭಾರತೀಯ ಚಿತ್ರರಂಗ ಹೆಮ್ಮೆಪಡುವ ವಿಷಯ.

Leave a Reply