ಪರಿಷ್ಕೃತ ಜಿಎಸ್ಟಿ ಪಟ್ಟಿಯಲ್ಲಿ ಯಾವ ಸರಕಿನ ಮೇಲೆ ಎಷ್ಟು ತೆರಿಗೆ? ನೀವು ತಿಳಿದುಕೊಂಡಿರಬೇಕಾದ ಮಾಹಿತಿ ಇದು

ಡಿಜಿಟಲ್ ಕನ್ನಡ ಟೀಮ್:

ದರ ನಿಗದಿಗೆ ಸಂಬಂಧಿಸಿದ ಗೊಂದಲದಿಂದ ಹಲವು ತಿಂಗಳಿನಿಂದ ಮುಂದೂಡುತ್ತಾ ಬಂದಿರುವ ಜಿಎಸ್ಟಿ ಕಾಯ್ದೆಯ ಅನುಷ್ಟಾನವನ್ನು ಶತಾಯಗತಾಯ ಜುಲೈ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ದರ ನಿಗದಿಗೆ ಸಂಬಂಧಿಸಿದಂತೆ ಇದ್ದ ಹಲವು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಾರ ಮತ್ತು ಶುಕ್ರವಾರ ಜಮ್ಮು ಕಾಶ್ಮೀರದಲ್ಲಿ ಜಿಎಸ್ಟಿ ಸಮಿತಿ ಸಭೆ ನಡೆಸಿ, ಯಾವ ಸರಕಿನ ಮೇಲೆ ಎಷ್ಟು ತೆರಿಗೆ ಹಾಕಬೇಕು ಎಂಬುದನ್ನು ಪರಿಷ್ಕರಿಸಲಾಗಿದೆ.

ಈವರೆಗೂ ಒಟ್ಟು 1211 ಪದಾರ್ಥಗಳ ಮೇಲಿನ ತೆರಿಗೆ ಹಾಗೂ ಸೆಸ್ ಪ್ರಮಾಣವನ್ನು ಅಂತಿಮಗೊಳಿಸಲಾಗಿದೆ. ಹಾಗಾದರೆ, ಅಂತಿಮವಾಗಿರುವ ಪಟ್ಟಿಯಲ್ಲಿ ಯಾವ ಯಾವ ಪದಾರ್ಥಗಳ ಮೇಲೆ ಎಷ್ಟು ತೆರಿಗೆ ಬೀಳಲಿದೆ ನೋಡೋಣ ಬನ್ನಿ…

 • ತೆರಿಗೆ ವಿನಾಯಿತಿ ಪಡೆದಿರುವ ಸರಕುಗಳು
  ಕೆಲವು ಮೂಲಭೂತ ಆಹಾರ ಪದಾರ್ಥ ಹಾಗೂ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಆ ಪದಾರ್ಥಗಳೆಂದರೆ ಹಾಲು, ಮೊಸರು, ಮಾಂಸ, ಮೀನು, ಕೋಳಿ, ಮೊಟ್ಟೆ, ತಾಜಾ ಹಣ್ಣು, ತರಕಾರಿಗಳು, ಜೇನುತುಪ್ಪ, ಬೆಲ್ಲ, ಪ್ರಸಾದ, ಹಿಟ್ಟು, ಹಪ್ಪಳ, ಬ್ರೆಡ್, ಉಪ್ಪು. ಇನ್ನು ಇತರೆ ಪದಾರ್ಥಗಳು ಕುಂಕುಮ, ಬಿಂದಿ, ಗರ್ಭನಿರೋಧಕ, ಸ್ಟಾಂಪ್, ನ್ಯಾಯಾಂಗ ಪತ್ರಗಳು, ಮುದ್ರಿತ ಪುಸ್ತಕ, ದಿನಪತ್ರಿಕೆ, ಬಳೆ ಮತ್ತು ಕೈ ಮಗ್ಗ ವಸ್ತುಗಳು.
 • ಸಾಮಾನ್ಯ ಬಳಕೆ ಪದಾರ್ಥಗಳು
  ಸಕ್ಕರೆ, ಟೀ, ಕಾಫಿ (ಇನ್ಸ್ಟಾಂಟ್ ಕಾಫಿ ಹೊರತುಪಡಿಸಿ), ಅಡುಗೆ ಎಣ್ಣೆ, ಮಿಠಾಯಿ, ಪಿಜಾ ಬ್ರೆಡ್, ಶಾವಿಗೆ, ಸಂರಕ್ಷಿತ ತರಕಾರಿಗಳ ಮೇಲೆ ಶೇ.5 ರಷ್ಟು ತೆರಿಗೆ. ಕೂದಲಿನ ಎಣ್ಣೆ, ಸಾಬೂನು, ಟೂತ್ ಪೇಸ್ಟ್ ಮೇಲೆ ಶೇ.18 ರಷ್ಟು ತೆರಿಗೆ. ಆಯುರ್ವೇದಿಕ್ ಮತ್ತು ಹೊಮಿಯೋಪತಿ ಮದ್ದು, ಅಗರ್ ಬತ್ತಿ, ವಿದ್ಯುತ್ ವಾಹನಗಳ ಮೇಲೆ ಶೇ.12 ರಷ್ಟು ತೆರಿಗೆ ನಿಗದಿಯಾಗಿದೆ.
 • ಮೊಬೈಲ್ ಫೋನುಗಳು
  ಮೊಬೈಲ್ ಫೋನುಗಳ ಮೇಲೆ ಶೇ.12 ರಷ್ಟು ತೆರಿಗೆ ಹೇರುತ್ತಿರುವುದರಿಂದ ಮೊಬೈಲ್ ಬೆಲೆ ಏರಿಳಿತವಾಗಲಿವೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ವಿದೇಶದಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟವಾಗುತ್ತಿದ್ದ ಮೊಬೈಲ್ ಗಳ ಬೆಲೆ ಕಡಿಮೆಯಾಗಿ, ಭಾರತದಲ್ಲೇ ತಯಾರಾಗಿ ಮಾರಾಟವಾಗುವ ಮೊಬೈಲ್ ಗಳ ಬೆಲೆ ಹೆಚ್ಚಾಗಲಿದೆ. ಈ ಹಿಂದೆ ಆಮದು ಮಾಡಿಕೊಳ್ಳುವ ಮೊಬೈಲ್ ಗಳ ಮೇಲಿನ ತೆರಿಗೆ ಪ್ರಮಾಣ ಶೇ. 17ರಿಂದ ಶೇ.27ರವರೆಗು ಇತ್ತು. ಈಗ ಅದು ಶೇ.12ಕ್ಕೆ ಇಳಿಕೆಯಾಗಿದೆ. ಇನ್ನು ಭಾರತದಲ್ಲೇ ತಯಾರಾಗುವ ಮೊಬೈಲ್ ಮೇಲಿನ ದರ ಶೇ.7.5ರಿಂದ ಶೇ.17ರವರೆಗು ಇತ್ತು. ಈಗ ಇದರ ಪ್ರಮಾಣ ಹೆಚ್ಚಾದಂತಾಗಿದೆ. ಇನ್ನು ಕರ್ನಾಟಕದಂತಹ ಕಡಿಮೆ ವ್ಯಾಟ್ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಆನ್ ಲೈನ್ ಮೂಲಕ ಖರೀದಿಸುವ ಮೊಬೈಲ್ ಬೆಲೆ ಏರಿಕೆಯಾಗಲಿದೆ.
 • ವಾಹನಗಳು
  ಸಣ್ಣ ಕಾರನ್ನು ಕೊಳ್ಳುವ ಯೋಚನೆ ಮಾಡುತ್ತಿರುವವರು ಜಿಎಸ್ಟಿ ಜಾರಿಯಾದ ಮೇಲೆ ಸ್ವಲ್ಪ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆಟೊಮೊಬೈಲ್ ಉತ್ಪನ್ನಗಳ ಮೇಲೆ ಶೇ.28 ರಷ್ಟು ತೆರಿಗೆಯನ್ನು ಹಾಕಲಾಗಿದೆ. ಇದರ ಜತೆಗೆ ವಾಹನ ಖರೀದಿ ಮೇಲೆ ಹೆಚ್ಚುವರಿ ಸೆಸ್ ವಿಧಿಸಲಾಗುವುದರಿಂದ ಬೆಲೆ ಹೆಚ್ಚಾಗಲಿದೆ. ಐಶಾರಾಮಿ ಕಾರುಗಳ ಮೇಲೆ ಶೇ.15 ರಷ್ಟು ಹೆಚ್ಚುವರಿ ಸೆಸ್ ವಿಧಿಸಿದರೆ, ಸಣ್ಣ ಮಟ್ಟದ ಪೆಟ್ರೋಲ್ ಕಾರಿನ ಮೇಲೆ ಶೇ.1 ರಷ್ಟು ಸೆಸ್ ಹೇರಲಾಗಿದೆ. ಇನ್ನು ಸಣ್ಣ ಪ್ರಮಾಣದ ಡಿಸೇಲ್ ಕಾರಿನ ಮೇಲೆ ಶೇ.3 ರಷ್ಟು ಸೆಸ್ ನಿಗದಿ ಮಾಡಲಾಗಿದೆ. ಇನ್ನು ಮೊಟಾರ್ ಸೈಕಲ್ 350 ಸಿಸಿಗಿಂತಲೂ ಹೆಚ್ಚಿನದ್ದಾಗಿದ್ದರೆ ಹೆಚ್ಚುವರಿಯಾಗಿ ಶೇ.3 ರಷ್ಟು ಸೆಸ್ ವಿಧಿಸಲಾಗಿದೆ. ಇದೇ ಪ್ರಮಾಣದಲ್ಲಿ ವೈಯಕ್ತಿಕ ಬಳಕೆಯ ವಿಮಾನ ಹಾಗೂ ಹಡಗಿನ ಮೇಲೂ ಸೆಸ್ ವಿಧಿಸಲಾಗುವುದು.
 • ಪಾನ್ ಹಾಗೂ ತಂಬಾಕು ಉತ್ಪನ್ನ
  ಪಾನ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದ ತೆರಿಗೆ ಬೀಳಲಿದೆ. ಈ ಪದಾರ್ಥಗಳ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಿದ್ದು, ಇದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಸೆಸ್ ಸಹ ವಿಧಿಸಲಾಗುತ್ತಿದೆ. ಪಾನ್ ಮಸಾಲ ಮೇಲಿನ ಸೆಸ್ ಪ್ರಮಾಣ ಶೇ.60 ರಷ್ಟಿದ್ದರೆ, ತಂಬಾಕು ಉತ್ಪನ್ನಗಳ ಮೇಲಿನ ಸೆಸ್ ಪ್ರಮಾಣ ಶೇ.71 ರಿಂದ ಶೇ.204ವರೆಗೂ ನಿಗದಿಯಾಗಿದೆ. ಜರ್ದಾ ಹಾಗೂ ಗುಟ್ಕಾ ಮೇಲಿನ ಸೆಸ್ ಶೇ.160, ಪಾನ್ ಮಸಾಲ ಗುಟ್ಕಾ ಮೇಲೆ ಶೇ.204 ಸೆಸ್ ಹಾಕಲಾಗುವುದು. ಇನ್ನು ಧೂಮಪಾನ ಹಾಗೂ ಸಿಗರೇಟಿನ ಮೇಲೆ ಶೇ.290 ರಷ್ಟು ಸೆಸ್ ವಿಧಿಸಲು ನಿರ್ಧರಿಸಲಾಗಿದೆ.

Leave a Reply