ಕುಲಭೂಷಣ್ ಪ್ರಕರಣ: ಪಾಕಿಸ್ತಾನ ಅಂತಾರಾಷ್ಟ್ರೀಯ ಕೋರ್ಟ್ ಆದೇಶ ಪಾಲಿಸುತ್ತಾ? ಭಾರತದ ಮುಂದಿರುವ ಆಯ್ಕೆ ಏನು?

ಡಿಜಿಟಲ್ ಕನ್ನಡ ಟೀಮ್:

ಕುಲಭೂಷಣ್ ಜಾಧವ್ ಅವರ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ಕೋರ್ಟ್, ‘ಜಾಧವ್ ಅವರಿಗೆ ವಕೀಲರ ನೇಮಕಾತಿಗೆ ಅವಕಾಶ ಕೊಟ್ಟು ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಗಲ್ಲಿಗೇರಿಸಬಾರದು’ ಎಂದು ತೀರ್ಪು ನೀಡಿದೆ. ಆದರೆ ಪಾಕಿಸ್ತಾನ ಈ ತೀರ್ಪನ್ನು ಒಪ್ಪಿ ಪಾಲಿಸುತ್ತದೆಯೇ? ಎಂಬುದು ಸದ್ಯ ಉದ್ಭವಿಸಿರುವ ಪ್ರಶ್ನೆ. ಒಂದು ವೇಳೆ ಪಾಕಿಸ್ತಾನ ಈ ತೀರ್ಪನ್ನು ಪಾಲಿಸದಿದ್ದರೆ ಭಾರತದ ಮುಂದಿನ ಆಯ್ಕೆಗಳೇನು? ಎಂಬ ಪ್ರಶ್ನೆ ಕಾಡಲಾರಂಭಿಸಿವೆ.

ಪಾಕಿಸ್ತಾನ ಈ ಆದೇಶವನ್ನು ಉಲ್ಲಂಘಿಸಬಹುದು ಎಂಬ ಅನುಮಾನ ಹುಟ್ಟಲು ಕಾರಣ ಇದೆ. ಅದೇನೆಂದರೆ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪಾಲೀಸಲೇಬೇಕು ಎಂದು ಇರುವ ಒತ್ತಡಗಳು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಲ್ಲಿ ಇಲ್ಲ. ಇದರ ಜತೆಗೆ ಈ ಪ್ರಕರಣದ ವಿಚಾರಣೆಗೆ ತನ್ನ ಒಪ್ಪಿಗೆಯೇ ಇರಲಿಲ್ಲ ಎಂದು ಪಾಕಿಸ್ತಾನ ವಿಶ್ವಸಂಸ್ಥೆ ನ್ಯಾಯಾಂಗ ವಿಭಾಗದಲ್ಲಿ ವಾದ ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಕೋರ್ಟ್ ತೀರ್ಪಿನ ಪಾಲನೆ ಬಗ್ಗೆ ಅನುಮಾನವಿದೆ.

ಪಾಕಿಸ್ತಾನ ಈ ತೀರ್ಪಿನಿಂದ ತಪ್ಪಿಸಿಕೊಳ್ಳುವ ಅವಕಾಶವಿದೆ. ಆ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ತಜ್ಞರು ಹೇಳುವುದು ಹೀಗೆ…

‘ಅಂತಾರಾಷ್ಟ್ರೀಯ ನ್ಯಾಯಾಲಯವು ಪರಸ್ಪರ ಒಡಂಬಡಿಕೆಯ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆ. ಹೀಗಾಗಿ ಪಾಕಿಸ್ತಾನ ಈ ವಿಚಾರಣಗೆ ತನ್ನ ಒಪ್ಪಿಗೆಯೇ ಇರಲಿಲ್ಲ ಎಂಬ ವಾದ ಮುಂದಿಟ್ಟು ಈ ತೀರ್ಪನ್ನು ಉಲ್ಲಂಘಿಸುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕರಣದಲ್ಲಿ ಪಾಕಿಸ್ತಾನ ಕಾನೂನು ವ್ಯಾಪ್ತಿಯನ್ನು ತನ್ನ ಅಸ್ತ್ರವನ್ನಾಗಿ ಬಳಸಲು ಎದುರುನೋಡುತ್ತಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ತೀರ್ಪನ್ನು ಉಲ್ಲಂಘಿಸಿದರೆ ಭಾರತವು ಪಾಕಿಸ್ತಾನದೊಂದಿಗಿನ ತನ್ನ ರಾಜತಾಂತ್ರಿಕತೆಯ ಮೂಲಕ ಪಾಕಿಸ್ತಾನಕ್ಕೆ ಉತ್ತರಿಸಬೇಕಾಗುತ್ತದೆ’

ಇನ್ನು ಭಾರತದ ಮುಂದಿರುವ ಮತ್ತೊಂದು ಆಯ್ಕೆ ಎಂದರೆ, ವಿಶ್ವಸಂಸ್ಥೆ ಭದ್ರತಾ ಸಮಿತಿ ಮುಂದೆ ಪಾಕಿಸ್ತಾನ ವಿರುದ್ಧ ದೂರು ನೀಡಿ, ತೀರ್ಪು ಉಲ್ಲಂಘನೆಗೆ ಶಿಕ್ಷೆ ನೀಡುವಂತೆ ಒತ್ತಾಯ ಹಾಕುವುದು. ಈ ಬಗ್ಗೆ ಭಾರತ ಸರ್ಕಾರದ ಪ್ರತಿನಿಧಿಗಳು ಹೇಳುವುದಿಷ್ಟು… ‘ಗುರುವಾರ ಅಂತಾರಾಷ್ಟ್ರೀಯ ಕೋರ್ಟ್ ಒಮ್ಮತದ ತೀರ್ಪನ್ನು ಪ್ರಕಟಿಸಿದ್ದು ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಹೀಗಾಗಿ ಪಾಕಿಸ್ತಾನ ಇದನ್ನು ಉಲ್ಲಂಘಿಸುವಂತಿಲ್ಲ. ಅಂತಿಮ ತೀರ್ಪು ಬರುವ ತನಕ ಜಾಧವ್ ಸುರಕ್ಷಿತವಾಗಿರಬೇಕು. ಈ ತೀರ್ಪಿನಿಂದ ಜಾಧವ್ ರಿಂದ ಕಸಿದುಕೊಳ್ಳಲಾಗಿದ್ದ ಹಕ್ಕನ್ನು ಮತ್ತೆ ನೀಡುವಂತಾಗಿದೆ. ಈ ತೀರ್ಪನ್ನು ಪ್ರಕರಣಕ್ಕೆ ಸಂಬಂಧ ಪಟ್ಟ ಪಾಕಿಸ್ತಾನ ಅಧಿಕಾರಿಗಳು ಕೇಳಿಸಿಕೊಂಡಿದ್ದಾರೆ ಎಂಬ ವಿಶ್ವಾಸವಿದೆ.’

Leave a Reply