12 ಸಾವಿರ ವಾಯುಪಡೆ ಅಧಿಕಾರಿಗಳಿಗೆ ಪತ್ರ ಬರೆದ ಏರ್ ಚೀಫ್ ಮಾರ್ಷಲ್, ಈ ಪತ್ರದಲ್ಲಿ ಬಿ.ಎಸ್ ಧನೊವಾ ರವಾನಿಸಿರುವ ಸಂದೇಶ ಏನು?

ಡಿಜಿಟಲ್ ಕನ್ನಡ ಟೀಮ್:

ದಿಢೀರ್ ಬೆಳವಣಿಗೆಯಲ್ಲಿ ಭಾರತದ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೊವಾ ವಾಯು ಪಡೆಯ ಪ್ರತಿಯೊಬ್ಬ ಅಧಿಕಾರಿಗಳಿಗೂ ವೈಯಕ್ತಿಕವಾಗಿ ಪತ್ರ ಬರೆದಿದ್ದ ಅಂಶ ಬೆಳಕಿಗೆ ಬಂದಿದೆ. ಈ ಪತ್ರದಲ್ಲಿ ‘ಶೀಘ್ರದಲ್ಲೇ ನಡೆಯಲಿರುವ ಒಂದು ಕಾರ್ಯಾಚರಣೆಗೆ ಸಿದ್ಧರಾಗಿ’ ಎಂಬ ಸಂದೇಶ ಸಹ ನೀಡಿರುವುದು ಕುತೂಹಲ ಮೂಡಿಸಿದೆ.

ಧನೊವಾ ಅವರು ವಾಯುಸೇನೆ ಮುಖ್ಯಸ್ಥರಾಗಿ 3 ತಿಂಗಳಲ್ಲಿ ಸೇನೆಯ ಸುಮಾರು 12 ಸಾವಿರ ಅಧಿಕಾರಿಗಳಿಗೆ ಈ ಪತ್ರವನ್ನು ಬರೆದಿದ್ದಾರೆ. ಮಾರ್ಚ್ 30ರಂದು ಈ ಪತ್ರವನ್ನು ಬರೆದಿದ್ದು, ಈ ಪತ್ರದಲ್ಲಿ ತಾರತಮ್ಯ, ಲೈಂಗಿಕ ಕಿರುಕುಳದಂತಹ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಅಂದಹಾಗೆ ಇದೇ ಮೊದಲ ಬಾರಿಗೆ ವಾಯುಸೇನಾ ಮುಖ್ಯಸ್ಥರಾದವರು ಇತರೆ ಅಧಿಕಾರಿಗಳಿಗೆ ಖುದ್ದಾಗಿ ಪತ್ರವನ್ನು ಬರೆದಿದ್ದಾರೆ. ಈ ಹಿಂದೆ 1950ರ ಮೇ 1ರಂದು ಭೂಸೇನೆಯ ಫೀಲ್ಡ್ ಮಾರ್ಷಲ್ ಆಗಿದ್ದ ಕೆ.ಎಂ ಕಾರ್ಯಪ್ಪ ಹಾಗೂ 1986ರ ಫೆಬ್ರವರಿ 1 ರಂದು ಜೆನರಲ್ ಕೆ.ಸುಂದರ್ಜಿ ಅವರು ಇತರೆ ಅಧಿಕಾರಿಗಳಿಗೆ ಪತ್ರ ಬರೆದ ಉದಾಹರಣೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಧನೊವಾ ಅವರ ಬರೆದ ಪತ್ರದ ಪ್ರಮುಖ ಸಾರಾಂಶ ಹೀಗಿದೆ…

‘ಸದ್ಯದ ಪರಿಸ್ಥಿತಿಯಲ್ಲಿ ಪದೇ ಪದೇ ಪಾಕಿಸ್ತಾನದಿಂದ ಪರೋಕ್ಷ ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಎದುರುರಾಗುವ ಕಾರ್ಯಾಚರಣೆಗೆ ನಾವೆಲ್ಲರೂ ಸಿದ್ಧವಾಗಿರಬೇಕು. ಅತ್ಯಂತ ಕಡಿಮೆ ಅವಧಿಯಲ್ಲಿ ನಮ್ಮಲ್ಲಿರುವ ಸಿಬ್ಬಂದಿ ಸಾಮರ್ಥ್ಯವನ್ನು ಬಳಸಿ ನಾವು ಈ ಪರಿಸ್ಥಿತಿ ಎದುರಿಸಲು ತಯಾರಿ ನಡೆಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ ನಾವು ತರಬೇತಿ ನಡೆಸಬೇಕಿದೆ. ಇತ್ತೀಚೆಗೆ ಹಲವು ಸಂದರ್ಭಗಳಲ್ಲಿ ವಾಯು ಸೇನೆಯಲ್ಲಿ ವೃತ್ತಿಪರತೆಯ ಕೊರತೆ ಕಂಡು ಬಂದಿದ್ದು, ಈ ಬಗ್ಗೆ ಗಮನಹರಿಸಬೇಕಿದೆ. ಇನ್ನು ವಾಯುಪಡೆಯಲ್ಲಿ ತಾರತಮ್ಯದ ಪ್ರಸಂಗಗಳ ಬಗ್ಗೆ ಮಾತುಗಳು ಕೇಳಿ ಬಂದಿದ್ದು, ಇಂತಹ ಬೆಳವಣಿಗೆಗಳು ನಿಲ್ಲಬೇಕು. ಇನ್ನು ಒಬ್ಬ ಹಿರಿಯ ಅಧಿಕಾರಿ ತನ್ನ ಕೆಳಗಿನ ಅಧಿಕಾರಿಗಳಿಗೆ ನಿಂದಿಸುವುದು, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳದಂತಹ ಪ್ರಕರಣಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಎಲ್ಲ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಬೇಕು.’

ಈ ಪತ್ರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ವಾಯುಸೇನೆಯ ವಕ್ತಾರರು, ‘ಇದು ಕೇವಲ ಆಂತರಿಕ ಸಂವಹನದ ಪ್ರಕ್ರಿಯೆ’ ಎಂದಷ್ಟೇ ಹೇಳಿದ್ದಾರೆ.

Leave a Reply