ದಲಿತರ ಮನೆಗೆ ಭೇಟಿ ಎಂಬ ಬಿಜೆಪಿ ಮುಖಂಡರ ಬೂಟಾಟಿಕೆ!

ಡಿಜಿಟಲ್ ಕನ್ನಡ ಟೀಮ್:

ಈ ಬಿಜೆಪಿ ನಾಯಕರಿಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅಂದ್ರೆ ಬಲುಇಷ್ಟ ಎಂದು ಕಾಣುತ್ತದೆ. ನಿನ್ನೆ ಚಿತ್ರದುರ್ಗದಲ್ಲಿ ದಲಿತರೊಬ್ಬರ ಮನೆಗೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭ ಕರಂದ್ಲಾಜೆ ಅವರ ಮನೆ ಆಹಾರ ನಿರಾಕರಿಸಿ ಹೊಟೇಲ್ ತಿಂಡಿ ತಿಂದದ್ದು ವಿವಾದವಾಗಿತ್ತು. ಯಡಿಯೂರಪ್ಪ ಮತ್ತು ಶೋಭಾ ನಿಲುವು ಸಮರ್ಥಿಸಿಕೊಳ್ಳುವ ಮೂಲಕ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.  ‘ಹೊಟೇಲ್ ನಿಂದ ಊಟ ತರಿಸಿ ತಿಂದರೆ ತಪ್ಪೇನು?’ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರು ಜಾತೀವಾದಿಗಳು, ಅವರು ಆಡುತ್ತಿರುವುದೆಲ್ಲ ಬರೀ ನಾಟಕ ಎಂಬುದನ್ನು ಸಾಬೀತು ಮಾಡಿದ್ದಾರೆ.

ದಲಿತರ ಮನೆಗೆ ಬಂದು ಊಟ ಮಾಡಿ ಎಂದು ಯಾರೂ ಯಡಿಯೂರಪ್ಪನವರ ಕೈಕಾಲು ಹಿಡಿದುಕೊಂಡಿರಲಿಲ್ಲ. ಇತ್ತೀಚೆಗೆ ಅವರಾಗಿಯೇ ಸಭೆ, ಸಮಾಲೋಚನೆ ಸಂದರ್ಭದಲ್ಲಿ ತಾವು ದಲಿತರ ಮನೆಯಲ್ಲಿ ಊಟ ಮಾಡುವುದಾಗಿ ಹೇಳಿಕೊಂಡಿದ್ದರು. ದಲಿತ ಮತಗಳನ್ನು ಸೆಳೆಯುವ ಅಸ್ತ್ರ ಮಾಡಿಕೊಳ್ಳಲು. ಎಲ್ಲಕ್ಕಿಂತ ಮಿಗಿಲಾಗಿ ಯಡಿಯೂರಪ್ಪ ಹಾಗೂ ಶೋಭ ಕರಂದ್ಲಾಜೆ ಅವರು ಹೋಗಿದ್ದು, ಚಿತ್ರದುರ್ಗದ ಕೆಳಗೋಟೆಯ ಬಿಜೆಪಿ ದಲಿತ ನಾಯಕ ರುದ್ರಮುನಿ ಅವರ ಮನೆಗೆ. ಅಲ್ಲಿಗೆ ಹೋದ ಮೇಲೆ ಅವರ ಮನೆಯ ಊಟ ಮಾಡಬೇಕಿತ್ತು. ಮಾಡಲು ಮನಸ್ಸಿಲ್ಲದಿದ್ದರೆ ಅವರ ಮನೆಗೆ ಹೋಗಬಾರದಿತ್ತು. ಅಲ್ಲಿಗೆ ಹೋಗಿ ಹೋಟೆಲ್ ಊಟ ತರಿಸಿಕೊಂಡು ತಿಂದದ್ದು ದಲಿತರ ಮನೆ ಭೇಟಿಯ ಮೂಲ ಉದ್ದೇಶವನ್ನೇ ಅಣಕ ಮಾಡಿದೆ. ಜತೆಗೆ ಬಿಜೆಪಿ ಮುಖಂಡರ ಬೂಟಾಟಿಕೆಯನ್ನು ಬಯಲು ಮಾಡಿದೆ.

ಗ್ರಾಮವಾಸ್ತವ್ಯ ಮಾಡುವುದರ ಹಿಂದಿನ ಉದ್ದೇಶ ಹಳ್ಳಿ ಜನರ ಮನೆಯಲ್ಲುಳಿದು ಅವರ ಕಷ್ಟ ಸುಖಗಳನ್ನು ಆಲಿಸುವುದಕ್ಕಾಗಿ. ಅವರಲ್ಲಿ ಆತ್ಮವಿಶ್ವಾಸ ತುಂಬಲು. ಅದೇ ರೀತಿ ದಲಿತರ ಮನೆಗೆ ಭೇಟಿ, ಊಟದ ಹೇಳಿಕೆ ನೀಡಿದ್ದ ಯಡಿಯೂರಪ್ಪನವರ ನಡೆ ಹಿಂದೆ ಅವರಲ್ಲಿ ಜಾತಿಬೇಧ ಇಲ್ಲ ಎಂಬುದನ್ನು ಬಿಂಬಿಸುವುದಷ್ಟೇ ಆಗಿತ್ತು. ಇಲ್ಲಿ ಇರಬೇಕಾದದ್ದು ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿ. ಆದರೆ ಯಡಿಯೂರಪ್ಪ ಮತ್ತು ಶೋಭಾ ಕೇವಲ ಅಗ್ಗದ ಪ್ರಚಾರಕ್ಕಾಗಿ ದಲಿತರ ಮನೆಗೆ ಭೇಟಿ ಕೊಟ್ಟು, ಅವರ ಆತಿಥ್ಯ ನಿರಾಕರಿಸುವ ಮೂಲಕ ತಾವೆಷ್ಟು ಅಗ್ಗ ಎಂಬುದನ್ನು ಬಿಂಬಿಸಿಕೊಂಡಿದ್ದಾರೆ.

ಯಡಿಯೂರಪ್ಪ ಮತ್ತು ಶೋಭಾ ನಡೆ ಸಮರ್ಥಿಸಿಕೊಳ್ಳುವ ಭರದಲ್ಲಿ ಸದಾನಂದಗೌಡರೂ ಬೇಜವಾಬ್ದಾರಿ ಮೆರೆದಿದ್ದಾರೆ. ವಿವಾದಕ್ಕೆ ತೆರೆ ಎಳೆಯುವ ಬದಲು ಇನ್ನಷ್ಟು ದೊಡ್ಡದಾಗುವಂತೆ ಮಾಡಿದ್ದಾರೆ. ಬಹುಶಃ ಅವರ ಉದ್ದೇಶ ಕೂಡ ಅದೇ ಆಗಿತ್ತು ಎಂದು ಕಾಣುತ್ತದೆ. ಆದರೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನಾಯಕರು ಪ್ರಚಾರ ಗಿಟ್ಟಿಸುವ ಪ್ರಯತ್ನದಲ್ಲಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದ್ದಾರೆ.

Leave a Reply