ಬಾನಿಗೂ ವಿಸ್ತರಿಸಿದ ಚೀನಾ ಸಾಮ್ರಾಜ್ಯ – ಕ್ಷುದ್ರಗ್ರಹಗಳ ಮೇಲೆ ಕಣ್ಣು

ಚೀನಾ ನೆಲ, ನೀರು, ಬಾನು ಎಲ್ಲದರಲ್ಲೂ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದೆ. ಏಷ್ಯದ ಲೀಡರ್ ಆಗಬೇಕೆಂಬುದು ಅದರ ಮಹದಾಸೆ. ನೆಲ, ನೀರಿನ ವಿಚಾರದಲ್ಲಿ ಅದು ಸುಲಭವಲ್ಲ. ಆಕಾಶಕ್ಕಂತೂ ಸರಹದ್ದುಗಳಿಲ್ಲ. ದಕ್ಷಿಣ ಚೀನಾ ಸಾಗರದಲ್ಲಿ ಈ ದೇಶ ಕೃತಕ ದ್ವೀಪಗಳನ್ನು ಸೃಷ್ಟಿಸಿ ವಿಯೆಟ್ನಾಂ, ಫಿಲಿಪೈನ್ಸ್, ತೈವಾನ್, ಮಲೇಷ್ಯ ಮತ್ತು ಬ್ರೂನೈ- ಇವುಗಳ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ಈ ನಡೆಗೆ ಅಮೆರಿಕವೂ ಹೂಂಕರಿಸಿದೆ. ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರದಲ್ಲಿ ಅದು ನಿರ್ಮಿಸಿರುವ ಕೃತಕ ದ್ವೀಪಗಳನ್ನು ಮಿಲಿಟರಿ ನೆಲೆಗಳಾಗಿ ಪರಿವರ್ತಿಸಿಕೊಂಡಿದೆ. ಅಲ್ಲಿ ಸಬ್ ಮೇರಿನ್ ಗಳಿವೆ, ರಾಡಾರ್ ಜಾಲವಿದೆ, ಆಗಾಗ ಸೈನ್ಯ ಪಡೆ ಬಂದು ಹೋಗಿ ಮಾಡುತ್ತಿದೆ. ಪೆಸಿಫಿಕ್ ಸಾಗರದ ಯಜಮಾನಿಕೆ ವಹಿಸಲು ಇವೆಲ್ಲವೂ ಪೂರ್ವಸಿದ್ಧತೆ ಎಂಬುದು ಮಿಲಿಟರಿ ತಜ್ಞರ ವಿಶ್ಲೇಷಣೆ.

ಅತ್ತ, `ಒನ್ ಬೆಲ್ಟ್, ಒನ್ ರೋಡ್’ ಎಂಬ ಮಹಾ ಯೋಜನೆಯನ್ನು ಎತ್ತಿಕೊಂಡು ಜಪಾನ್, ಪಾಕಿಸ್ತಾನ ಆಕ್ರಮಿಸಿದ ಕಾಶ್ಮೀರದ ಭಾಗ, ಮಧ್ಯಪ್ರಾಚ್ಯ ದೇಶಗಳು ಅಂತಿಮವಾಗಿ ಯೂರೋಪು ತಲಪಲು ಹೆದ್ದಾರಿಗಳ ಜಾಲ ನಿರ್ಮಾಣಕ್ಕೆ ಹೊರಟಿದೆ. ಒಂದು ಟ್ರಿಲಿಯನ್ ಡಾಲರ್ ಇಂದು ಖರ್ಚಾದರೂ ಮುಂದೆ ಅದು ಎಲ್ಲ ದೇಶಗಳೊಡನೆ ಸಾಧಿಸುವ ಸಂಪರ್ಕ ಬಹು ದೊಡ್ಡ ಲಾಭವನ್ನು ಮಾಡಲಿದೆ. ಇಲ್ಲೂ ವಾಣಿಜ್ಯಕ್ಕೇ ಒತ್ತು. ಹಿಂದೆಲ್ಲ `ಸಿಲ್ಕ್ ರೂಟ್’ ಎಂಬುದಿತ್ತು. ಆ ಮೂಲಕವೇ ಜಗತ್ತಿನೊಡನೆ ಸಂಪರ್ಕವನ್ನು ಚೀನಾ ಸಾಧಿಸಿತ್ತು. ಚೀನಾದ ನಡೆಯೇ ಹಾಗೆ. ಎಲ್ಲವೂ ದೊಡ್ಡ ಪಾರುಪತ್ತೆ-ಚೀನಾದ ಮಹಾಗೋಡೆಯೇ ಇದಕ್ಕೆ ಸಾಕ್ಷಿ.

ನೀರು, ನೆಲದ ವಿಚಾರವಾಗಿ ಚೀನಾ ತೋರಿರುವ ತಂತ್ರೋಪಾಯ ಇಡೀ ಜಗತ್ತನ್ನು ದಂಗುಬಡಿಸಿದೆ. ಏನೆಲ್ಲ ಹೊಸ ಪ್ರಯೋಗ ಮಾಡಬೇಕೋ ಅವೆಲ್ಲವಕ್ಕೂ ಚೀನಾ ಕೈಚಾಚಿದೆ. ಸದ್ಯಕ್ಕೆ ಬಾನಿನಲ್ಲಂತೂ ಯಾರೂ ತಕರಾರು ತೆಗೆಯುವಂತಿಲ್ಲ. ಏಕೆಂದರೆ ಆಕಾಶಕ್ಕೆ ಯಾವ ದೊಣೆ ನಾಯಕನೂ ಇಲ್ಲ. ಚೀನಾ ತನ್ನದೇ ಆದ `ಸ್ಪೇಸ್ ಲ್ಯಾಬ್’ನ್ನು ಕೂಡಿಕೊಳ್ಳುವಂತೆ ಕಾರ್ಗೋಷಿಪ್ ಕಳಿಸಿ ಅಲ್ಲೂ ಯಶಸ್ಸನ್ನೂ ಕಳೆದ ಏಪ್ರಿಲ್ ನಲ್ಲಿ ಸಾಧಿಸಿತ್ತು. ರೋಬಾಟಿಕ್ ತಂತ್ರಜ್ಞಾನದಲ್ಲಿ ತಾನು ಮುಂಚೂಣಿಯಲ್ಲಿರುವುದನ್ನು ತೋರಿಸಿಕೊಟ್ಟಿತು. ಕಳೆದ ಮಾರ್ಚ್ ತಿಂಗಳಲ್ಲಿ ಜಗತ್ತೇ ವಿಸ್ಮಯಪಡುವಂತೆ ಬಹು ದೊಡ್ಡ ರೇಡಿಯೋ ಟೆಲಿಸ್ಕೋಪನ್ನು ಸ್ಥಾಪಿಸಿ, ಅನ್ಯಗ್ರಹ ಜೀವಿಗಳ ಹುಡುಕಾಟಕ್ಕಾಗಿ ವ್ಯಾಪಕ ಕಾರ್ಯಕ್ರಮವನ್ನೇ ಹಾಕಿಕೊಂಡಿತು. ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳು ಇದನ್ನು `ಅಗಾಧ ಇಂಜಿನಿಯರಿಂಗ್ ಸಾಧನೆ ಎಂದು ವಿಸ್ಮಯದಿಂದಲೇ ಬಣ್ಣಿಸಿದ್ದವು. ಇಷ್ಟೆಲ್ಲ ಸಾಧನೆ ಮಾಡುತ್ತಿರುವಾಗ ಚೀನಾಕ್ಕೆ ಕೆಂಪು ಗ್ರಹ ಮಂಗಳನ ಮೇಲೆ ಕಣ್ಣು ಬೀಳುವುದು ಸಹಜವೇ. `ನಾವೂ ರೇಸ್ ನಲ್ಲಿ ಇದ್ದೇವೆ. 2020ರ ಹೊತ್ತಿಗೆ ಮಂಗಳನಲ್ಲಿಗೆ ನೌಕೆ ಕಳಿಸಿ ಗ್ರಹವನ್ನು ಕೆರೆಯುತ್ತೇವೆ’ ಎಂದು ಹೇಳಿಕೊಂಡಿದೆ. ಅಂದರೆ ಆ ಹೊತ್ತಿಗೆ ಮಂಗಳನ `ಅಂತರಿಕ್ಷ ರಸ್ತೆ’ ಭಾರಿ ಬ್ಯುಸಿ. ಹನ್ನೆರಡು ರಾಷ್ಟ್ರಗಳು ಮಂಗಳನಲ್ಲಿಗೆ ತಮ್ಮ ನೌಕೆಗಳನ್ನು ಕಳಿಸಲು 2020ಕ್ಕೆ ಕಾಯುತ್ತಿವೆ. ಏಕೆಂದರೆ ಆ ವರ್ಷದ ಜುಲೈ ತಿಂಗಳಲ್ಲಿ ಭೂಮಿ ಮತ್ತು ಮಂಗಳನ ಕಕ್ಷೆಯ ನೆಲೆ ಅನುಕೂಲವಾಗಿರುತ್ತದೆ. ಅಂದರೆ ಮಂಗಳ ಭೂಮಿಗೆ ಸಮೀಪವಾಗಿರುತ್ತದೆ.

ಚೀನಾ ಈಗ ಇನ್ನೊಂದು ದೊಡ್ಡ ಸುದ್ದಿ ಮಾಡಿದೆ. ಅದು ಕ್ಷುದ್ರಗ್ರಹಗಳನ್ನು ತಲಪುವುದು. ಅಷ್ಟೇ ಅಲ್ಲ, ಅದರ ಮೇಲೆ ಸವಾರಿ ಮಾಡುವುದು, ಬೇಕೆಂದರೆ ಅದರ ಕಕ್ಷೆಯನ್ನೇ ಬದಲಾಯಿಸುವುದು. ಚಂದ್ರನಷ್ಟು ಸಮೀಪಕ್ಕೆ ತರುವುದು. ಇದು ಸಾಹಸವೋ ದುಸ್ಸಾಹಸವೋ ಈಗ ಅದರ ಫಲಿತಾಂಶ ತಿಳಿಯುವುದಿಲ್ಲ. 2020ರಲ್ಲೇ ಚೀನಾ ಕ್ಷುದ್ರಗ್ರಹ ಒಂದರ ಮೇಲೆ ಇಳಿಯಲು ರೋಬಾಟ್ ಬಳಸುತ್ತದೆ. ಅಲ್ಲಿರುವ ಲೋಹ ಸಂಪನ್ಮೂಲದ ಮಾದರಿ ಎತ್ತಿಕೊಂಡು ಬರಲು ಯೋಜಿಸಿದೆ. ವಿಚಿತ್ರವೆಂದರೆ ಅಮೆರಿಕದ `ನಾಸಾ’ ಸಂಸ್ಥೆ 2030ರ ಹೊತ್ತಿಗೆ ಇಂಥದೇ ಸಾಹಸಯಾನ ಮಾಡಿ 16ಸೈಕೆ ಎಂಬ ಕ್ಷುದ್ರಗ್ರಹದಲ್ಲಿ ಇಳಿದು ಅಲ್ಲಿಂದ ಚಿನ್ನವನ್ನು ತರಲು ಯೋಜಿಸಿದೆ. ಚೀನಾ ಈ ನಾಸಾ ಯೋಜನೆಯನ್ನು ಹಿಂದಕ್ಕಿಟ್ಟು ಕ್ಷುದ್ರಗ್ರಹದ ರೇಸ್ ನಲ್ಲಿ ಮುಂದಿದೆ. ಅದರ ಪ್ಲಾನ್ ಅದ್ಭುತವಾಗಿದೆ. ಗಗನನೌಕೆಯನ್ನೇ ಕ್ಷುದ್ರಗ್ರಹಕ್ಕೆ ಕಟ್ಟುವುದು, ಅನೇಕ ರಾಕೆಟ್‍ಗಳನ್ನು ಬಳಸಿ ಚಂದ್ರನ ಕಕ್ಷೆಯಷ್ಟು ಎತ್ತರಕ್ಕೆ ಕ್ಷುದ್ರಗ್ರಹವನ್ನು ಎಳೆದುಕೊಂಡು ಬರುವುದು. ಉಳಿದದ್ದೆಲ್ಲ ಗುರುತ್ವದ ಕೃಪೆ. ಅದೇನೂ ಬೀಳುವುದಿಲ್ಲ ಎಂಬುದಕ್ಕೆ ಚಂದ್ರನೇ ಸಾಕ್ಷಿ ಎನ್ನುತ್ತಾರೆ.

ಚೀನಾ ಬಯಸಿದಂತೆ ಈ ಯಾವ ಸಾಧನೆಯೂ ಆಗಲಿಲ್ಲ ಎನ್ನಿ, ಆಗಲೂ ಅದು ಎದೆಗುಂದುವುದಿಲ್ಲ. ಕ್ಷುದ್ರಗ್ರಹವನ್ನು ನೆಲೆಯಾಗಿ ಮಾಡಿಕೊಂಡು ಅಂತರಿಕ್ಷದ ಇನ್ನಷ್ಟು ಕಾಯಗಳ ಶೋಧನೆ ಮಾಡುವ ಗುರಿಹೊಂದಿದೆ. ಕ್ಷುದ್ರಗ್ರಹಗಳು ಪ್ರಶಸ್ತ ಲೋಹಗಳ ಭಂಡಾರ. ಅದರಲ್ಲೂ ಪ್ಲಾಟಿನಂ. ಪೆಲ್ಲಾಡಿಯಂ, ಚಿನ್ನ, ಇರಿಡಿಯಂ, ರೋಡಿಯಂ-ಇವು ದುಬಾರಿ ಬೆಲೆಯ ಪ್ರಶಸ್ತ ಲೋಹಗಳು. ಸದ್ಯದಲ್ಲಿ ಅಂಥ ಕ್ಷುದ್ರಗ್ರಹಗಳು ಯಾವುವು ಎಂಬುದನ್ನು ಸಂಖ್ಯೆಗಳಿಂದ ಗುರುತಿಸಿದ್ದಾರೆ. 4034 ವಿಷ್ಣು ಎಂಬ ಕ್ಷುದ್ರಗ್ರಹದಲ್ಲಿರುವ ಪ್ರಶಸ್ತ ಲೋಹಗಳನ್ನು ಗಣಿಮಾಡಿದರೆ 5.28 ಟ್ರಿಲಿಯನ್ ಡಾಲರ್ ಮೌಲ್ಯದ ಲೋಹಗಳು ದೊರೆಯುತ್ತವೆ ಎಂಬುದು ಅಂದಾಜು. ಹಾಗೆಯೇ 2000ಬಿಎಂ-19 ಎನ್ನುವ ಕ್ಷುದ್ರಗ್ರಹ ಅದಕ್ಕಿಂತಲೂ ಹೆಚ್ಚು ಶ್ರೀಮಂತ. ಅಲ್ಲಿನ ಲೋಹಭಂಡಾರವನ್ನು ಬಾಚಿದರೆ ಅದರ ಮೌಲ್ಯ 6.94 ಟ್ರಿಲಿಯನ್ ಡಾಲರ್ ಎಂಬುದು ಇನ್ನೊಂದು ಲೆಕ್ಕಾಚಾರ.

ಫುಟ್‍ಬಾಲ್ ಮೈದಾನದಷ್ಟು ಗಾತ್ರವಿರುವ ಒಂದು ಕ್ಷುದ್ರಗ್ರಹದಲ್ಲಿ 25ರಿಂದ 550 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಪ್ಲಾಟಿನಂ ನಿಕ್ಷೇಪ ಇರುವುದು ಉತ್ಪ್ರೇಕ್ಷೆಯಲ್ಲ ಎನ್ನುವುದನ್ನು ಗ್ರಹತಜ್ಞರೇ ಬಾಯಿಬಿಟ್ಟಿದ್ದಾರೆ. ಸ್ಮಾರ್ಟ್ ಫೋನುಗಳಲ್ಲಿ ಪ್ಲಾಟಿನಂ, ಪೆಲ್ಲಾಡಿಯಂ ಬಳಕೆಯಾಗುತ್ತಿದೆ. ಜಗತ್ತೇ ಇಂದು ಸಂಪರ್ಕಜಾಲದ ಬಲೆಗೆ ಬಿದ್ದಿದೆ. ಫೋನ್ ಉತ್ಪಾದಕರು ಶತಕೋಟಿ ಶ್ರೀಮಂತರ ಗುಂಪಿಗೆ ಸೇರುತ್ತಿದ್ದಾರೆ. ನೀಲ್ ಆರ್ಮ್‍ಸ್ಟ್ರಾಂಗ್ 1969ರಲ್ಲಿ ಚಂದ್ರನ ಮೇಲೆ ಪಾದ ಊರಿದಾಗ ರೆಕಾರ್ಡ್ ಮಾಡಿದ ಮಾತನ್ನು ಬಿತ್ತರಿಸಲಾಗಿತ್ತು. `One small step for Man, and a Giant leap to Mankind’. ಈಗ ಇದನ್ನೇ ತಿರುಚಿ `Once small step for man, one Giant opportunity for miners’ ಎಂಬ ಘೋಷವಾಕ್ಯ ಮೊಳಗುತ್ತಿದೆ. ಕ್ಷುದ್ರಗ್ರಹಗಳೇನೂ ಕೈಗೆಟುಕದ ಕಾಯಗಳಲ್ಲ ಎಂದು 1996ರಲ್ಲಿ `ನಿಯರ್’ ಎಂಬ ನೌಕೆಯನ್ನು ಅಮೆರಿಕ ಉಡಾವಣೆಮಾಡಿ 2001ರಲ್ಲಿ `ಇರೋಸ್’ ಎಂಬ ಕ್ಷುದ್ರಗ್ರಹದ ಮೇಲೆ ಇಳಿಸಿತ್ತು. ಜಪಾನ್ ತಾನೇನೂ ಕಡಿಮೆಯಲ್ಲ ಎಂದು ತೋರಿಸಲು `ಹೆಯಾಬುಸ’ ಎಂಬ ನೌಕೆಯನ್ನು `ಇಟಕೊವಾ’ ಎಂಬ ಕ್ಷುದ್ರಗ್ರಹದ ಮೇಲೆ ಇಳಿಸಿ ಮಾದರಿಯನ್ನೂ ಸಂಗ್ರಹಿಸಿ ತಂದಿತ್ತು.

ಅಂತರಿಕ್ಷದಲ್ಲಿ ಈ ರೇಸ್ ನೋಡಿದರೆ ಬಹುಶಃ ನೆಲ, ನೀರಿಗೆ ಹಾಕಿರುವಂತೆ ಆಕಾಶಕ್ಕೂ ಗಡಿ ಹಾಕುವ ಸಂದರ್ಭ ಎದುರಾಗುತ್ತದೋ ಏನೋ! ಅಂಟಾರ್ಟಿಕ ಖಂಡದಲ್ಲಿ ಗಣಿಮಾಡಲು ಯಾವ ದೇಶಕ್ಕೂ ಹಕ್ಕಿಲ್ಲ ಎಂದು ವಿಶ್ವಸಂಸ್ಥೆ ಘೋಷಿಸಿದಂತೆ ಆಕಾಶಕ್ಕೂ ಕಾನೂನು ವಿಸ್ತರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು.

1 COMMENT

Leave a Reply