ಮಿತಿ ಮೀರಿದ ಚಟಗಳೇ ತಿವಾರಿ ಸಾವಿಗೆ ಕಾರಣವೇ..?!

ಡಿಜಿಟಲ್ ಕನ್ನಡ ವಿಶೇಷ:

ಹಿರಿಯ ಅಧಿಕಾರಿಗಳ ಸಾವುಗಳು ಹೇಗೆ ರಾಜಕೀಕರಣಗೊಳ್ಳುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಉತ್ತರ ಪ್ರದೇಶದ ಲಖನೌದಲ್ಲಿ ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣ ಪಡೆದುಕೊಳ್ಳುತ್ತಿರುವ ತಿರುವು.

ಅನುರಾಗ್ ತಿವಾರಿ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಲಿ ಅಂತ ಕರ್ನಾಟಕದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಹಾಗೂ ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷವಾಗಿರುವ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ ಹಾಗೂ ಬಹುಜನ ಸಮಾಜಪಕ್ಷ ಆಗ್ರಹಿಸುತ್ತಿವೆ. ಈ ಬಗ್ಗೆ ತನಿಖೆ ಆಗಲಿ ಅಂತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡ ತನಿಖೆ ಬೇಕೆಂದಿದ್ದಾರೆ. ಈ ಎಲ್ಲರ ಆಗ್ರಹ ನೋಡಿದರೆ ಕರ್ನಾಟಕ ಚುನಾವಣೆ ರಾಜಕೀಯಕ್ಕೆ ತಿವಾರಿ ಸಾವು ಒಂದು ವಸ್ತುವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಉತ್ತರ ಪ್ರದೇಶ ವಿಧಾನಸೌಧದ ಸಮೀಪ ವಾಕಿಂಗ್ ಮಾಡುವಾಗ ತಿವಾರಿ ಸಾವಿಗೀಡಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಉಸಿರುಗಟ್ಟಿರುವುದರಿಂದ ಈ ಸಾವು ಸಂಭವಿಸಿದೆ. ಹೃದಯಘಾತದಿಂದ ಉಸಿರುಗಟ್ಟಿದೆಯೋ  ಅಥವಾ ಯಾರಾದರೂ ಉಸಿರುಗಟ್ಟಿಸಿದ್ದಾರೋ ಎಂಬುದು ತನಿಖೆಯಿಂದ ಹೊರಬರಬೇಕಾದ ವಿಷಯ. ಆದರೆ ಸಮಸ್ಯೆ ಅದಲ್ಲ. ತಿವಾರಿ ಕರ್ನಾಟಕದಲ್ಲಿ ಸುಮಾರು 2000 ಕೋಟಿ ರುಪಾಯಿಯಷ್ಟು ಬಹುದೊಡ್ಡ ಹಗರಣ ಬಯಲಿಗೆಳೆಯುವವರಿದ್ದರು, ಹೀಗಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಎಬ್ಬಿಸುತ್ತಿರುವ ಗೌಜಿನಲ್ಲಿ ಅದೆಷ್ಟು ಸತ್ಯ ಇದೆ ಎಂಬುದು. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಅನುರಾಗ್ ತಮ್ಮ ಹತ್ಯೆ ಆಹ್ವಾನಿಸಿಕೊಳ್ಳುವಷ್ಟು ಖಡಕ್ ಅಧಿಕಾರಿಯೂ ಆಗಿರಲಿಲ್ಲ. ರಿಸ್ಕ್ ಮೈಮೇಲೆ ಎಳೆದುಕೊಳ್ಳುವಷ್ಟು ತಾಕತ್ತೂ ಇರಲಿಲ್ಲ. ವೈವಾಹಿಕ ಬದುಕು ಸರಿಹೋಗದೆ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ಮೊದಲಿಂದಲೂ ಇದ್ದ ಕುಡಿತ ಮತ್ತು ಸಿಗರೇಟು ಸೇವನೆ ಚಟ ವಿಚ್ಛೇದನದ  ನಂತರ ಸಿಕ್ಕಾಪಟ್ಟೆ ಜಾಸ್ತಿ ಆಗಿತ್ತು. ರಾತ್ರಿಯೆಲ್ಲ ಮದ್ಯಪಾನ ಮಾಡಿ, ಬೆಳಗಿನ ಹೊತ್ತು ನಿದ್ದೆಗೆ ಜಾರುತ್ತಿದ್ದರು. ಹೀಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂಬುದು ಅವರ ಆಪ್ತವಲಯದ ಮಾಹಿತಿ.
ಅನುರಾಗ್ ಅವರು ಉತ್ತಮ ಅಧಿಕಾರಿಯಾಗಿದ್ದರು. ಅವರು ಕೆಲಸ ಮಾಡಿದ ಬೀದರ್, ಮಡಿಕೇರಿಯಲ್ಲಿ ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ಗುಣ ಅವರದಾಗಿರಲಿಲ್ಲ. ಹೀಗಾಗಿ ಅವರ ಸಾವಿನಲ್ಲಿ ಬಾಹ್ಯ ಶಕ್ತಿಗಳ ಕೈವಾಡಕ್ಕಿಂಥ, ಕೌಟುಂಬಿಕ ಸಮಸ್ಯೆ ಪ್ರೇರಿತ ಚಟಶಕ್ತಿಯದ್ದೇ ಹೆಚ್ಚಿನ ಕಾಣಿಕೆ ಇದ್ದಂತಿದೆ.
ಅವರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಆಯುಕ್ತರಾಗಿ ಬಂದ ನಂತರ ಇಲಾಖೆ ಕೆಲಸಕ್ಕಿಂತ ಹೆಚ್ಚಾಗಿ ಚುನಾವಣೆ ಕೆಲಸ, ತರಬೇತಿ ಕಾರ್ಯಾಗಾರಗಳಲ್ಲಿ ಕಾಲ ಕಳೆದದ್ದೇ ಹೆಚ್ಚು. ಹೀಗಾಗಿ ಇಲಾಖೆ ವಿಚಾರದಲ್ಲಿ ಶತ್ರುಗಳನ್ನು ಬೆಳೆಸಿಕೊಳ್ಳುವಷ್ಟು ಬಿಡುವು ಅವರಿಗೆ ಸಿಕ್ಕಿರಲಿಲ್ಲ.
ಆದರೂ ಈ ರಾಜಕೀಯ ಪಕ್ಷಗಳು ಅವರ ಸಾವನ್ನು ಚುನಾವಣೆ ರಾಜಕೀಯಕ್ಕಾಗಿ ಎಳೆದು, ಹಿಂಜಾಡುತ್ತಿರುವಂತೆ ಭಾಸವಾಗುತ್ತಿದೆ. ಉತ್ತರ ಪ್ರದೇಶದಲ್ಲಿರುವುದು ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರ. ಅಲ್ಲಿನ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ವಿಧಾನಸಭೆಯಲ್ಲಿ ಹೇಳಿಕೆ ನೀಡಿ ಉಸಿರುಗಟ್ಟಿ ತಿವಾರಿ ಸತ್ತಿದ್ದಾರೆ. ಅವರು ಕರ್ನಾಟಕ ಸರಕಾರದ ಬಹುಕೋಟಿ ಹಗರಣ ಬಯಲಿಗೆ ಎಳೆಯುವವರಿದ್ದರು ಎಂದು ‘ಹಿಟ್ ಅಂಡ್ ರನ್’ ಹೇಳಿಕೆ ನೀಡಿದ್ದಾರೆ. ತಿವಾರಿ ಹತ್ಯೆಯಲ್ಲಿ ಕರ್ನಾಟಕ ಮೂಲದ ಶಕ್ತಿಗಳ ಕೈವಾಡವಿದ್ದರೆ ಅದನ್ನು ಬಯಲಿಗೆಳೆಯಲು ಉತ್ತರ ಪ್ರದೇಶ ಸರಕಾರ ಸರ್ವತಂತ್ರ ಸ್ವತಂತ್ರವಿದೆ. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಆಗ್ರಹಿಸಿರುವಂತೆ ಸಿಬಿಐ ತನಿಖೆಗೂ ವಹಿಸಬಹುದು. ಕೇಂದ್ರದಲ್ಲೂ ಬಿಜೆಪಿ ಸರಕಾರವೇ ಇದೆ. ಸಿಬಿಐ ಮೇಲೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬೇರೆ ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.
ಅದು ಅಲ್ಲಿಗೆ ಮುಗಿಯಬೇಕಾದ ವಿಷಯ. ಆದರೆ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳಲ್ಲಿ ತಿವಾರಿ ಸಾವಿನ ಬಗ್ಗೆ ಕಾಳಜಿಗಿಂತ ಅದರಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವ ಹಂಬಲವೇ ಹೆಚ್ಚಿರುವಂತೆ ಕಾಣುತ್ತಿದೆ. ಐಎಎಸ್ ಅಧಿಕಾರಿ ಜೀವ ರಕ್ಷಿಸಿಕೊಳ್ಳಲು ಸಾಧ್ಯವಾಗದ ಯೋಗಿ ಸರಕಾರ ಇನ್ನು ಜನಸಾಮಾನ್ಯರಿಗೆ ಹೇೆಗೆ ರಕ್ಷಣೆ ಒದಗಿಸುತ್ತದೆ ಎಂಬುದು ಅಲ್ಲಿನ ಪ್ರತಿಪಕ್ಷಗಳಾದ ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಪ್ರಶ್ನೆ. ಅವರಿಗೆ ಕರ್ನಾಟಕದ ಕಾಂಗ್ರೆಸ್ ಸರಕಾರದ ಬಗ್ಗೆ ಅನುಮಾನ ಇದೆಯೋ ಅಥವಾ ಆದಿತ್ಯನಾಥ ಸರಕಾರದ ಕಾನೂನು ವೈಫಲ್ಯ ಎತ್ತಿ ತೋರಿಸುವ ಉತ್ಸಾಹವಿದೆಯೋ ಗೊತ್ತಾಗುತ್ತಿಲ್ಲ. ಅದೇ ರೀತಿ ತನಿಖೆಗೆ ಆಗ್ರಹಿಸುತ್ತಿರುವ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರಿಗೂ ಆದಿತ್ಯನಾಥ ಸರಕಾರದ ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆ ತಾಕತ್ತಿನ ಬಗ್ಗೆ ನಂಬಿಕೆ ಇಲ್ಲವೋ ಅಥವಾ ಕರ್ನಾಟಕ ಮೂಲದ ಶಕ್ತಿಗಳ ಕೈವಾಡವೇನಾದರೂ ಇದ್ದರೆ ಅದನ್ನು ಬಯಲಿಗೆ ತರಬೇಕೆಂಬ ಕಾಳಜಿ ಇದೆಯೋ ಗೊತ್ತಿಲ್ಲ.ಆದರೆ ಒಂದಂತೂ ಸುಸ್ಪಷ್ಟ. ಎಲ್ಲರಿಗೂ ತಿವಾರಿ ಸಾವು ಬೇಕಿರುವುದು ಬರೀ ರಾಜಕೀಯ ಕಾರಣಕ್ಕೆ. ಅದರಿಂದಾಗಬಹುದಾದ ರಾಜಕೀಯ ಲಾಭಕ್ಕೆ ಮಾತ್ರ!

Leave a Reply