ಸ್ವಾಮೀಜಿ ವೇಷ ಧರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದವನ ಮರ್ಮಾಂಗ ಕತ್ತರಿಸಿದಳು ಕೇರಳದ ಯುವತಿ

ಡಿಜಿಟಲ್ ಕನ್ನಡ ಟೀಮ್:

ಹಲವು ವರ್ಷಗಳಿಂದ ದೇವಮಾನವ ವೇಷದಲ್ಲಿದ್ದ ಸ್ವಾಮೀಜಿ ನೀಡುತ್ತಿದ್ದ ಲೈಂಗಿಕ ಕಿರುಕುಳ ತಾಳಲಾರದೆ ಬೇಸತ್ತ ಹುಡುಗಿ ಆತನ ಮರ್ಮಾಂಗ ಕತ್ತರಿಸಿದ ಘಟನೆ ಕೇರಳದ ಕೊಲ್ಲಂ ಪ್ರದೇಶದಲ್ಲಿ ನಡೆದಿದೆ.

ಕೊಲ್ಲಮ್ ನಲ್ಲಿರುವ ಆಶ್ರಮದಲ್ಲಿ ನೆಲೆಸಿದ್ದ 54 ವರ್ಷದ ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪೀಠ ಸ್ವಾಮಿ ಎಂಬಾತ ಕಳೆದ 5 ವರ್ಷಗಳಿಂದ ಹೆಣ್ಣು ಮಗಳೊಬ್ಬಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ‘ಹಲವು ವರ್ಷಗಳಿಂದ ಈತನ ದೌರ್ಜನ್ಯದಿಂದ ಬೇಸತ್ತು, ಈ ಕೃತ್ಯ ಎಸಗಿದ್ದೇನೆ’ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಹುಡುಗಿ ತನ್ನ ಮೇಲೆ ದಾಳಿ ಮಾಡಿದ ನಂತರ ಕೊಲ್ಲಮ್ ಪೊಲೀಸರಿಗೆ ಕರೆ ಮಾಡಿ ಈಕೆಯ ವಿರುದ್ಧ ಸ್ವಾಮೀಜಿ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ತನ್ನ ವಿರುದ್ಧ ಆದ ದೌರ್ಜನ್ಯವನ್ನು ಹೇಳಿಕೊಂಡಿದ್ದಾಳೆ. ತಾನು ಎದುರಿಸಿದ ಕಿರುಕುಳದ ಬಗ್ಗೆ ಈಕೆ ಪೊಲೀಸರಿಗೆ ವಿವರಿಸಿರುವುದು ಹೀಗೆ…

‘ನಾನು 17ನೇ ವಯಸ್ಸಿಗೆ ಬಂದಾಗನಿಂದಲೂ ಈತ ನನ್ನ ಮೇಲೆ ಬಲತ್ಕಾರ ನಡೆಸುತ್ತಾ ಬಂದಿದ್ದ. ಇದರಿಂದ ನಾನು ಬೇಸತ್ತಿದ್ದೆ. ಇಂದು ಸಹ ಆತ ನನ್ನ ಮನೆಗೆ ಬರುವುದು ಖಚಿತವಾಗಿತ್ತು. ಹೀಗಾಗಿ ಈತನಿಗೆ ತಕ್ಕ ಪಾಠ ಕಲಿಸಬೇಕೆಂದು ಮೊದಲೇ ನಿರ್ಧರಿಸಿ ಚಾಕು ಸಿದ್ಧಮಾಡಿ ಇಟ್ಟುಕೊಂಡಿದ್ದೆ. ಈತ ನನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾದಾಗ ನನ್ನ ರಕ್ಷಣೆಗಾಗಿ ನಾನು ಈ ಕೃತ್ಯ ಮಾಡಬೇಕಾಯಿತು.’

ವರದಿಗಳ ಪ್ರಕಾರ, ಈಕೆಯ ಪೊಷಕರು ಅನೇಕ ವರ್ಷಗಳಿಂದ ಸ್ವಾಮೀಜಿಯ ಭಕ್ತರಾಗಿದ್ದರು. ಇದರ ಲಾಭ ಪಡೆದಿದ್ದ ಸ್ವಾಮೀಜಿ, ಆ ಹುಡುಗಿಯ ಮೇಲೆ ಪದೇ ಪದೇ ಬಲತ್ಕಾರ ಮಾಡುತ್ತಿದ್ದ. ಶುಕ್ರವಾರ ರಾತ್ರಿ 11.30ಕ್ಕೆ ಈ ಘಟನೆ ಸಂಭವಿಸಿದ್ದು, ರಾತ್ರಿ 12.30ರ ಸುಮಾರಿಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಪರಿಸ್ಥಿತಿ ತೀರಾ ಗಂಭೀರವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿರುವನಂತಪುರಂ ನ ಪೆಟ್ಟೈ ಠಾಣೆಯ ಪೊಲೀಸ್ ಅಧಿಕಾರಿ, ‘ಸ್ವಾಮೀಜಿ ವೇಷದಲ್ಲಿ ಜನರನ್ನು ಮರಳು ಮಾಡಿದ್ದ ಈತನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದರೆ ಯಾರೂ ನಂಬುವುದಿಲ್ಲ ಎಂದು ಆ ಹುಡುಗಿಗೆ ಗೊತ್ತಿತ್ತು. ಹೀಗಾಗಿ ಆಕೆಗೆ ಬೇರೆ ದಾರಿ ಕಾಣದೇ ಈ ಕೆಲಸ ಮಾಡಿದ್ದಾಳೆ. ಈಕೆ ಅಪ್ರಾಪ್ತಳಾಗಿದ್ದ ಸಮಯದಿಂದಲೂ ಕಿರುಕುಳ ಅನುಭವಿಸಿರುವುದರಿಂದ ಸ್ವಾಮೀಜಿಯ ವಿರುದ್ಧ ಐಪಿಸಿ 376 ಬಲತ್ಕಾರ ಹಾಗೂ ಬಲತ್ಕಾರದಿಂದ ಮಕ್ಕಳ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದಿದ್ದಾರೆ.

Leave a Reply