ಕದನ ಕುತೂಹಲ 3: ಶಾಂತಿಯೂ ಸಹ ಯುದ್ಧದ್ದೇ ಮುಖವಾಡ, ಒಬಾಮಾ- ಟ್ರಂಪ್ ಭಿನ್ನತೆಗಳೇನಿದ್ದರೂ ಮೂಲತಃ ಒಂದೇ ರಾಗ!

 

ಡಿಜಿಟಲ್ ಕನ್ನಡ ವಿಶೇಷ:

ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ನಡುವಿನ ವ್ಯತ್ಯಾಸವೇನು ಅಂತ ಕೇಳಿದರೆ ಬಹುಶಃ ಹೀಗೊಂದು ಉತ್ತರ ಬರಬಹುದೇನೋ… ಡೊನಾಲ್ಡ್ ಟ್ರಂಪ್ ದು ರೋಷಾವೇಶದ ಆಕ್ರಮಣಕಾರಿ ವರ್ತನೆ, ಒಬಾಮಾ ಆದರೆ ಸಮಚಿತ್ತದ ಕುಶಾಲಿನ ಮನುಷ್ಯನಾಗಿದ್ದ ಅಂತ.

ನಿಜ. ಹೊರಮೈನಲ್ಲಿ ಕಾಣುವ ಲಕ್ಷಣ ಇದೇ ಆಗಿದ್ದರೂ ಆಂತರ್ಯದಲ್ಲಿ ಎಲ್ಲರೂ ‘ಯುದ್ಧ’ವನ್ನು ಅದರ ಆತಂಕವನ್ನೂ ಬಳಸಿಕೊಂಡು ಜಗತ್ತನ್ನು ಪ್ರಭಾವಿಸಿದವರೇ. ಡೊನಾಲ್ಡ್ ಟ್ರಂಪ್ ದು ರೋಷಾವೇಶದ ವರ್ತನೆ. ಆದರೆ ಆಂತರ್ಯದಲ್ಲಿ ಮಾತ್ರ ಈತ ರಷ್ಯಾ-ಚೀನಾ ಎಲ್ಲರೊಟ್ಟಿಗೆ ಸಮಜಾಯಿಷಿ ಮಾಡಿಕೊಳ್ಳುವ ಪುಕ್ಕಲ ವ್ಯಕ್ತಿ. ಇನ್ನು ಬರಾಕ್ ಒಬಾಮಾಗೆ ್ಧಿಕಾರ ಬಂದ ಹೊಸತರಲ್ಲೇ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿಬಿಟ್ಟಿತು. ಈ ಪುಣ್ಯಾತ್ಮ ಅದೇನು ಕಡೆದು ಕಟ್ಟೆ ಹಾಕಿದ್ದನೋ ಗೊತ್ತಿಲ್ಲ.

ವಾಸ್ತವವೇನೆಂದರೆ ಅಮೆರಿಕ ಚರಿತ್ರೆಯ ಅತಿದೊಡ್ಡ ಶಸ್ತ್ರ ರಫ್ತುದಾರ ಎಂದು ಒಬಾಮ ಅವರನ್ನು ವಿಶ್ಲೇಷಕರು ಗುರುತಿಸುತ್ತಾರೆ.  ಒಬಾಮಗಿಂತ ಮೊದಲು ಅಮೆರಿಕಾದ  ಅಧ್ಯಕ್ಷರಾಗಿದ್ದ ಪ್ರೆಸಿಡೆಂಟ್ ರೀಗನ್, ಕ್ಲಿಂಟನ್, ಬುಷ್ ಅವರ  ಅಧಿಕಾರಾವಧಿಗೆ ಹೋಲಿಸಿದರೆ, ಅಮೆರಿಕಾದ ಇತಿಹಾಸದಲ್ಲೇ ಅತಿ ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರಗಳ ರಫ್ತು ಹಾಗು ಮಾರಾಟದ ಒಪ್ಪಂದವಾದದ್ದು ಒಬಾಮ ಅಧ್ಯಕ್ಷರಾಗಿದ್ದ ಸಮಯದಲ್ಲಿ (2009-2016).  ಅಮೆರಿಕಾದ ರಕ್ಷಣಾ ಸಂಸ್ಥೆಗಳು ಅಂತರ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಿದ ಶಸ್ತ್ರಾಸ್ತ್ರಗಳೂ ಸೇರಿ ಬರೋಬ್ಬರಿ 590 ಬಿಲಿಯನ್ ಡಾಲರ್ ಮೌಲ್ಯದ  ಶಸ್ತ್ರಾಸ್ತ್ರಗಳು ಬಿಕರಿಯಾಗಿವೆ.  ಇದರಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರ ಸೇರಿದ್ದು ಸೌದಿ ಅರೇಬಿಯಾಕ್ಕೆ .  Middle East ರಾಷ್ಟ್ರಗಳಿಗೆ ಮಾಡಿದ ರಫ್ತಿನಲ್ಲಿ ಸಿಂಹ ಪಾಲು (ಶೇಕಡಾ 45 ರಷ್ಟು) ಸೌದಿ ಅರೇಬಿಯಾಕ್ಕೆ ಸೇರಿದೆ.

ಒಂದು ಕ್ಷಣ ವರ್ತಮಾನಕ್ಕೆ ಬಂದು, ಶನಿವಾರದ ವಿದ್ಯಮಾನ ನೋಡುವುದಾದರೆ, ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾಕ್ಕೆ 110 ಬಿಲಿಯನ್ ಡಾಲರ್ ಗಳ ಮೌಲ್ಯದ ಶಸ್ತ್ರ ಮಾರುವ ಒಪ್ಪಂದ ಮಾಡಿಕೊಂಡಿದ್ದಾರೆ.

ಅರ್ಥವಿಷ್ಟೆ- ಜಗತ್ತು ಶಿಯಾ-ಸುನ್ನಿ-ಕುರ್ದಿಶ್ ಅಂತೆಲ್ಲ ಹೋಳಾಗಿ ಹೊಡೆದಾಡಿಕೊಂಡು ಇದ್ದಷ್ಟೂ ದಿನ ಅಮೆರಿಕ ಲಾಭದಲ್ಲಿರುತ್ತದೆ. ಮೊನ್ನೆ ಇದೇ ಟ್ರಂಪ್ ಅಫಘಾನಿಸ್ತಾನದ ಮೇಲೆ ‘ಮದರ್ ಆಫ್ ಆಲ್ ಬಾಂಬ್ಸ್’ ಒಗೆದು ಉಗ್ರರನ್ನು ಹಣಿದೆವು ಎಂದರಲ್ಲ… ಈ ಬಾಂಬ್ ಬಿದ್ದಿದ್ದು ಹಳೆಯ ಅಪ್ಘನ್ ಸುರಂಗವೊಂದರ ಮೇಲೆ. ಈ ಸುರಂಗವು ರಷ್ಯಾ ವಿರುದ್ಧ ಹೋರಾಡುವುದಕ್ಕೆ ಒಂದು ಕಾಲದಲ್ಲಿ ಅಮೆರಿಕವೇ ತಾಲಿಬಾನಿಗಳಿಗೆ ಮಾಡಿಕೊಟ್ಟಿದ್ದು. ಅಮೆರಿಕಕ್ಕೆ ಈ ಥರದ ‘ಇವೆಂಟ್’ಗಳು ಆಗಾಗ ಆಗುತ್ತಿರಬೇಕು. ಏಕೆಂದರೆ ಉಗ್ರರನ್ನು ನಿಗ್ರಹಿಸುವ ತಾಕತ್ತಿರುವುದು, ಅದಕ್ಕೆ ತಕ್ಕ ಶಸ್ತ್ರ ಮತ್ತು ತಂತ್ರಜ್ಞಾನಗಳಿರುವುದು ಅಮೆರಿಕದ ಬಳಿ ಮಾತ್ರ ಅಂತ ಜಗತ್ತಿಗೆ ಮನವರಿಕೆಯಾಗುತ್ತಿರಬೇಕು ಹಾಗೂ ಅಂಥವುಗಳ ಖರೀದಿಗೆ, ಅಭಿವೃದ್ಧಿಗೆ ಎಲ್ಲರೂ ಅದಕ್ಕೆ ಅಡ್ಡಬೀಳುತ್ತಲೇ ಇರಬೇಕು.

ಮತ್ತೆ ‘ಶಾಂತಿದೂತ’ ಬರಾಕ್ ಒಬಾಮಾ ಕಾಲಕ್ಕೆ ಬರೋಣ.

ಶಸ್ತ್ರಾಸ್ತ್ರ ಮಾರಾಟ ಮಾಡಿದ  ರಾಷ್ಟ್ರಗಳಲ್ಲಿ ಬೀಡು ಬಿಟ್ಟಿದ್ದ  ಅಮೆರಿಕಾದ ಸೈನಿಕರ ಸಂಖ್ಯೆಯನ್ನು ಕ್ರಮೇಣ ತಗ್ಗಿಸುತ್ತಾ  ಹೋದ  ಒಬಾಮ ಸರಕಾರ “pulling back boots on the ground”  ಎಂಬ  ಕಾರ್ಯಾಚರಣೆಯ ಅಡಿ,  ಅಮೆರಿಕಾದ ಸೈನಿಕರ  ಬದಲಿಗೆ  ಡ್ರೋನ್ ಗಳನ್ನು ಉಪಯೋಗಿಸಿ ಯುದ್ಧ ಪ್ರಹಾರ ಮಾಡುವ ವಿಧಾನಕ್ಕೆ  ಹೆಚ್ಚು ಪ್ರಾಮುಖ್ಯತೆ ಕೊಟ್ಟಿತು.

ಒಬಾಮ ಆಳ್ವಿಕೆಯ ಸಮಯದಲ್ಲಿ ಈ ಮಟ್ಟದಲ್ಲಿ  ಶಸ್ತ್ರಾಸ್ತ್ರ ಮಾರಾಟ ಆಗಲು  ಮುಖ್ಯ ಕಾರಣಗಳನ್ನುವಿಶ್ಲೇಷಿಸುತ್ತಾ ಹೋದಾಗ ಗೋಚರಿಸುವ ಅಂಶಗಳು ಹೀಗಿವೆ.

ಒಬಾಮ ಅವರು ಪಾಲಿಸಿದ ವಿದೇಶಾಂಗ ನೀತಿ ಇದರಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತೆ . ಅದರ ಅನುಸಾರ  ಇತರ ರಾಷ್ಟ್ರಗಳಿಗೆ ಮಿಲಿಟರಿ ಬೆಂಬಲ ಕೊಡಲು ಮುಂದಾದ ಅಮೇರಿಕಾ ಶಸ್ತ್ರಾಸ್ತ್ರಗಳ  ಮಾರಾಟದ ಜೊತೆಗೆ ಅದನ್ನು ಉಪಯೋಗಿಸುವ ತರಬೇತಿಯನ್ನು ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ಇದಲ್ಲದೆ  ವಿದೇಶಗಳಲ್ಲಿರುವ ರಾಯಭಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಅನುಕೂಲವಾಗುವುದಕ್ಕೆ ಅಮೆರಿಕಾದ ವತಿಯಿಂದ ರಾಜತಾಂತ್ರಿಕರ  ಸಂಖ್ಯೆ ಹೆಚ್ಚಿಸಲಾಯಿತು.

ಇರಾನ್ ಪರಮಾಣು  ಒಪ್ಪಂದದ ವೇಳೆ ಒಬಾಮ ಇರಾನಿನ ಮೇಲೆ ಅಮೇರಿಕಾ ವಿಧಿಸಿದ ಯುದ್ಧ ಸಾಮಗ್ರಿಗಳ ಮಾರಾಟದ ನಿಷೇಧವನ್ನು ತೆಗೆದು ಹಾಕಿ,  ಮಿಡಲ್ ಈಸ್ಟ್ ದೇಶಗಳಿಗೆ ಅದರಲ್ಲೂ ಪರ್ಷಿಯನ್ ಗಲ್ಫ್ ಗೆ ಶಸ್ತ್ರಾಸ್ತ್ರಗಳ ಮಾರಾಟ ಹೆಚ್ಚಿಸುವ ಕರಾರು ಮಾಡಿಕೊಂಡರು. ಈ  ನಡೆಯಿಂದ ಒಬಾಮ ಸರಕಾರ ಗಲ್ಫ್ ನಾಯಕರ ಮನ ಒಲಿಸಿ ಪರಮಾಣು ಒಪ್ಪಂದ ಯಶಸ್ವಿಯಾಗುವ ರಣತಂತ್ರ ರೂಪಿಸಿದರು.

ಒಬಾಮ ಅವರ ಒಟ್ಟು ಎಂಟು ವರ್ಷದ ಆಡಳಿತಾವಧಿಯನ್ನು ಕಂಡ ವೀಕ್ಷಕರು ಹೇಳೋದು ಹೀಗೆ.  ಮೊದಲು ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದಾಗ ಹೊಸ ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಸಹಿ ಹಾಕುವಾಗ  ಜಾಗರೂಕತೆ ವಹಿಸುತ್ತಾರೆ ಎಂತಲೂ ಈಗಾಗಲೇ ಚಾಲ್ತಿಯಲ್ಲಿರುವ ಕೆಲವು ಒಪ್ಪಂದಗಳಿಂದ ಹೊರ ಬರಲೂ ಬಹುದು ಎಂಬ ನಿರೀಕ್ಷೆ ಇತ್ತು . ಆದರೆ ಇದನ್ನು ತಲೆಕೆಳಗು ಮಾಡಿದ ಒಬಾಮ ಸರಕಾರ, ಮಾನವ ಹಕ್ಕುಗಳನ್ನೂ ಉಲ್ಲಂಘಿಸುವ ಮಟ್ಟಿಗೆ  ಶಸ್ತ್ರಾಸ್ತ್ರ ಮಾರಾಟ ಹಾಗು ಮಾರಾಟದ ಒಪ್ಪಂದಗಳನ್ನು ಮಾಡಿತು.

ಇದಲ್ಲದೆ ಬಹಳ ಸಮಯದಿಂದ ನಿರೀಕ್ಷಿಸಿದ್ದ ಶಸ್ತ್ರಾಸ್ತ್ರ ಮಾರಾಟ ನಿಯಂತ್ರಣ ಕಾಯಿದೆಗೆ ಒಂದು ಪ್ರಮುಖ ತಿದ್ದುಪಡಿ ತರಲಾಯಿತು. ಅದರ ಅನುಸಾರ ಸಾವಿರಾರು ಯುದ್ಧ ಸಾಮಗ್ರಿಗಳನ್ನು  ಮಾರಾಟ ಮಾಡುವ ಅಧಿಕಾರ ವ್ಯಾಪ್ತಿಯನ್ನು ವಾಣಿಜ್ಯ ಇಲಾಖೆಗೆ ವರ್ಗಾಯಿಸಲಾಯಿತು. ಸರಳವಾಗಿ ಹೇಳಬೇಕೆಂದರೆ  ಇದರರ್ಥ ಯುದ್ಧ ಸಾಮಗ್ರಿಗಳ ಮಾರಾಟದ ಮೇಲಿನ ನಿಬಂಧನೆಗಳನ್ನು ಸಡಿಲಗೊಳಿಸಿದಂತೆ.  ಈ ರೀತಿ ಅಮೆರಿಕಾದ ವಾಣಿಜ್ಯ ಇಲಾಖೆ ದೇಶದ ಒಟ್ಟಾರೆ ವ್ಯಾಪಾರ ವಹಿವಾಟಿನ ಅಭಿವೃದ್ಧಿಯತ್ತ ದೃಷ್ಟಿ ಹರಿಸುವ ಬದಲು,  ಸೂಕ್ಷ್ಮ ಹಾಗು ಗಂಭೀರ ವಿಚಾರವಾದ ಯುದ್ಧ ಸಾಮಗ್ರಿಗಳ ಮಾರಾಟದ ವ್ಯಾಪಾರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಿತು.

2009 ರಲ್ಲಿ ಒಬಾಮ ಆಡಳಿತಕ್ಕೆ ಬರುವ ಹೊತ್ತಿಗೆ ಅನೇಕ ರಾಷ್ಟ್ರಗಳು ರಿಸೆಶನ್ ನಿಂದ ಹೊರಬಂದು ಅವುಗಳ ಆರ್ಥಿಕ ಸ್ಥಿತಿ ಬಹುಮಟ್ಟಿಗೆ ಸುಧಾರಿಸಿತ್ತು. ಇದರ ನೇರ ಪ್ರಭಾವದಿಂದ  ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಾಗಿತ್ತು.  ಹಳೆಯ ನಮೂನೆಯ ಯುದ್ಧ  ಸಾಮಗ್ರಿಗಳನ್ನು ಹೊಂದಿದ್ದ ರಾಷ್ಟ್ರಗಳು ಅತ್ಯಾಧುನಿಕ ಹಾಗು ದುಬಾರಿ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಮುಂದಾದವು.  ಈ ಪರಿಸ್ಥಿತಿಯ ಲಾಭ ಪಡೆದ ಅಮೆರಿಕಾ ತಮ್ಮ ಅಧ್ಯಕ್ಷರ ಒತ್ತಾಸೆಯಂತೆ ‘ಅಮೆರಿಕಾದ ಶಸ್ತ್ರಾಸ್ತ್ರಗಳನ್ನೇ’  ಕೊಳ್ಳಲು ಅವರ ಮನ ಒಲಿಸುವಲ್ಲಿ ಸಫಲರಾದರು.

ತಾನು ಅಧಿಕಾರಕ್ಕೆ ಬರುತ್ತಲೇ ಅಮೆರಿಕವನ್ನು ನ್ಯಾಟೊ ಪಡೆಯಿಂದ ಹಿಂದಕ್ಕೆ ಕರೆಸಿಕೊಳ್ಳುವೆ ಎಂದೆಲ್ಲ ಭಾಷಣ ಕುಟ್ಟಿದ್ದ ಟ್ರಂಪ್ ಅಧಿಕಾರಕ್ಕೆ ಬರುತ್ತಲೇ ಯೂಟರ್ನ್ ಹೊಡೆದಿದ್ದಾರೆ. ಟ್ರಂಪ್ ಅಂತಲ್ಲ, ಯಾರೇ ಅಮೆರಿಕದ ಅಧ್ಯಕ್ಷರಾದರೂ ಮಿಲಿಟರಿ ಆತಂಕವೊಂದನ್ನು ಅನುಕ್ಷಣವೂ ಕಾಪಿಡುವ ಆಟವನ್ನು ಆಡಲೇಬೇಕು. ಅಮೆರಿಕದ ಜಾಗತಿಕ ವರ್ಚಸ್ಸು ಮತ್ತು ಶಕ್ತಿಯ ಬಹುದೊಡ್ಡ ಭಾಗವೇ ಇಂಥದೊಂದು ಯುದ್ಧದಾಟದ ಮೇಲೆ ಅವಲಂಬಿತ.

ಇಲ್ಲಿ ಓದಿ..

ಕದನ ಕುತೂಹಲ-1

ಕದನ ಕುತೂಹಲ-2

Leave a Reply