ಗೂಢಚರ್ಯ ಎಂಬ ಪರೋಕ್ಷ ಯುದ್ಧ! ಅಮೆರಿಕದ 20 ಗೂಢಚಾರಿಗಳು ಚೀನಾದಲ್ಲಿ ಏನಾದರು?

ಡಿಜಿಟಲ್ ಕನ್ನಡ ಟೀಮ್:

ಕುಲಭೂಷಣ್ ಜಾಧವ್ ಭಾರತದ ಗೂಢಚಾರಿ ಎಂಬುದು ಪಾಕಿಸ್ತಾನದ ಆರೋಪ. ಆದರೆ ಕುಲಭೂಷಣ್ ಕೇವಲ ಭಾರತದ ಪ್ರಜೆಯೇ ಹೊರತು ಆತ ಗೂಢಚರ್ಯ ಮಾಡುತ್ತಿರಲಿಲ್ಲ ಎಂಬುದು ಭಾರತದ ಸ್ಪಷ್ಟನೆ. ಹೀಗೆ ಗೂಢಚರ್ಯದ ವಿಷಯವಾಗಿ ಸಾಕಷ್ಟು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ದೇಶ ದೇಶಗಳ ನಡುವೆ ಗೂಢಚರ್ಯ ಎಂಬ ಪರೋಕ್ಷ ಯುದ್ಧ ನಮ್ಮ ಗಮನ ಸೆಳೆಯುತ್ತಿದೆ.

ಇದು ಕೇವಲ ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ತಿಕ್ಕಾಟವಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಗೂಢಚಾರಿಗಳನ್ನು ಬೇರೆ ರಾಷ್ಟ್ರಗಳಲ್ಲಿ ಹೊಂದಿರುವುದು ವಾಸ್ತವದ ಸಂಗತಿ. ಗೂಢಚರ್ಯ ಎಂಬುದು ನಿನ್ನೆ ಮೊನ್ನೆಯ ವಿಷಯವಲ್ಲ. ಇತಿಹಾಸದ ಪುಟಗಳನ್ನು ಕೆದಕಿದರೆ ನಮಗೆ ಅನೇಕ ಶತಮಾನಗಳ ಹಿಂದಿನ ಪುರಾವೆಗಳು ಸಿಗುತ್ತವೆ.

2010-12ರ ಕಾಲಾವಧಿಯಲ್ಲಿ ಚೀನಾ ಸುಮಾರು 20 ಸಿಐಎ ಸಂಸ್ಥೆಯ ಪರ ಗೂಢಚಾರ್ಯ ಮಾಡುತ್ತಿದ್ದ ವ್ಯಕ್ತಿಗಳನ್ನು ಸೆರೆ ಹಿಡಿದಿದ್ದು, ಆ ಪೈಕಿ ಕೆಲವರನ್ನು ಜೈಲಿನಲ್ಲಿಟ್ಟರೆ, ಮತ್ತೆ ಕೆಲವರನ್ನು ಕೊಂದು ಹಾಕಿದೆ.

ಈ ಕುರಿತು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದ್ದು, ಈ ಪತ್ರಿಕೆ ಜತೆ ಮಾತನಾಡಿರುವ ಅನೇಕ ಅಮೆರಿಕ ಗುಪ್ತಚರ ವಿಭಾಗದ ಅಧಿಕಾರಿಗಳು ಈ ದಶಕವನ್ನು ಅಮೆರಿಕ ಗೂಢಚರ್ಯ ಪಾಲಿಗೆ ‘ಅತ್ಯಂತ ಕೆಟ್ಟ ದಶಕ’ ಎಂದು ಬಣ್ಣಿಸಿದ್ದಾರೆ. ಅಮೆರಿಕದ ಗುಪ್ತಚರ ಸಂಸ್ಥೆಯ ಗೂಢಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿ ಬಿದ್ದಿರುವುದಕ್ಕೆ ಈ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಗೂಢಚರ್ಯದ ಬಗ್ಗೆ ಸಿಐಎಯಿಂದಲೇ ಚೀನಾ ಹಾಗೂ ಇತರ ದೇಶಗಳಿಗೆ ಮಾಹಿತಿ ಸೋರಿಕೆ ಆಗಿದೆಯೇ ಅಥವಾ ಸಿಐಎ ಬಳಸುವ ಸಂವಹನ ಸಂಪರ್ಕ ವ್ಯವಸ್ಥೆಯನ್ನು ಚೀನಾ ಹ್ಯಾಕ್ ಮಾಡಿದೆಯೇ ಎಂಬ ಅನುಮಾನ ಅಮೆರಿಕವನ್ನು ಈಗಲೂ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ.

ಚೀನಾದಲ್ಲಿ ಗೂಢಚರ್ಯ ಮಾಡಲು ಸಿಐಎ ನೇಮಿಸಿದ್ದ 18-20 ಮಂದಿ ವ್ಯಕ್ತಿಗಳು ಎರಡು ವರ್ಷಗಳ ಅವಧಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಆ ಪೈಕಿ 12ಕ್ಕೂ ಹೆಚ್ಚು ಮಂದಿಯನ್ನು ಚೀನಾ ಕೊಂದು ಹಾಕಿರುವುದು ಖಚಿತ ಎಂದಿದ್ದಾರೆ ಅಧಿಕಾರಿಗಳು.

ಕೇವಲ ಚೀನಾ ಮಾತ್ರವಲ್ಲದೆ ರಷ್ಯಾದಲ್ಲೂ ಅಮೆರಿಕದ ಇಬ್ಬರು ಗೂಢಚಾರಿಗಳು ಸಿಕ್ಕಿಬಿದ್ದಿದ್ದಾರೆ ಎಂದು ವರದಿ ಹೇಳಿದೆ. ಸಹಜವಾಗಿಯೇ ಈ ವರದಿಯಲ್ಲಿ ಯಾವ ಸಿಐಎ ಅಧಿಕಾರಿಗಳೂ ತಮ್ಮ ಹೆಸರು ಹೇಳಿಕೊಂಡಿಲ್ಲ. ಒಟ್ಟಿನಲ್ಲಿ ತೆರೆಮರೆಯ ಹಿಂದೆ ಗೂಢಚರ್ಯ ಎಂಬ ಪರೋಕ್ಷ ಯುದ್ಧ ಭಾರಿ ಜೋರಾಗಿಯೇ ನಡೆಯುತ್ತಿರುವುದು ಸ್ಪಷ್ಟವಾಗಿದೆ.

Leave a Reply