ಅಂದು ಒಬಾಮಾಗೆ ಆಚಾರ ಹೇಳಿಕೊಟ್ಟಿದ್ದ ಡೊನಾಲ್ಡ್ ಟ್ರಂಪ್ ಇಂದು ಸೌದಿಯಲ್ಲಿ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವುದು ಸೌದಿ ಅರೆಬಿಯಾಗೆ. ಟ್ರಂಪ್ ಸೌದಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ವಿವಾದಗಳು ಅವರನ್ನು ಸುತ್ತಿಕೊಂಡಿವೆ. ನಾಲ್ಕು ವರ್ಷಗಳ ಹಿಂದೆ ಬರಾಕ್ ಒಬಾಮಾ ವಿರುದ್ಧ ತಾನೇ ಹುಟ್ಟುಹಾಕಿದ್ದ ವಿವಾದಗಳು ತಿರುಗುಬಾಣವಾಗಿ ಈಗ ಟ್ರಂಪ್ ಅವರನ್ನು ನಾಟಿದೆ.

ಏನದು ವಿವಾದ ಅಂತಾ ಯೋಚಿಸ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ಟ್ರಂಪ್ ಸೌದಿ ಅರೆಬಿಯಾ ತಲುಪಿದ ನಂತರ ಶನಿವಾರ ಅವರಿಗೆ ಸೌದಿಯ ರಾಯಲ್ ಕೋರ್ಟ್ ಪ್ಯಾಲೆಸ್ ನಲ್ಲಿ ಪ್ರತಿಷ್ಠಿತ ನಾಗರೀಕ ಗೌರವ ‘ದ ಕಾಲರ್ ಆಫ್ ಅಬ್ದುಲಜೀಜ್ ಅಲ್ ಸೌದ್ ಮೆಡಲ್’ ನೀಡಲಾಯಿತು. ಈ ವೇಳೆ ಸೌದಿ ರಾಜ ಸಲ್ಮಾನ್ ಅವರು ನೀಡಿದ ಚಿನ್ನದ ಮಾಲೆಯನ್ನು ಟ್ರಂಪ್ ತಮ್ಮ ಸೊಂಟ ಹಾಗೂ ತಲೆಯನ್ನು ಬಗ್ಗಿಸಿ ಕೊರಳಿಗೆ ಹಾಕಿಸಿಕೊಂಡರು. ಇದು ಈಗ ವಿವಾದವನ್ನು ಹುಟ್ಟುಹಾಕಿದೆ. ಟ್ರಂಪ್ ಅವರ ವಿರುದ್ಧ ಈ ವಿವಾದ ಹುಟ್ಟಿಕೊಳ್ಳಲು ಬೇರಾರು ಕಾರಣರಲ್ಲ ಸ್ವತಃ ಟ್ರಂಪ್ ಅವರೇ ಕಾರಣ. ಅದು ಹೇಗೆ ಎಂದು ನೋಡೋಣ ಬನ್ನಿ…

ಒಬಾಮಾ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೌದಿ ಅರೆಬಿಯಾಗೆ ಭೇಟಿ ನೀಡಿದ್ದರು. ಆಗ ಒಬಾಮಾ ಸೌದಿಯ ರಾಜನಿಗೆ ಸೊಂಟ ಬಗ್ಗಿಸಿ ಕೈ ಕುಲುಕಿದ್ದರು. ಒಬಾಮಾ ಅವರ ಈ ನಡೆಯನ್ನು ಪ್ರಶ್ನಿಸಿದ್ದ ಟ್ರಂಪ್ ದೊಡ್ಡ ವಿವಾದವನ್ನಾಗಿ ಮಾಡಿದ್ದರು. ಅಷ್ಟೇ ಅಲ್ಲದೆ 2009ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಒಬಾಮಾ ವಿರುದ್ಧದ ಜಾಹೀರಾತನ್ನು ಪ್ರಕಟಿಸಿದ್ದರು. ಈಗ ಟ್ರಂಪ್ ಸೌದಿ ರಾಜನ ಮುಂದೆ ತಲೆ ಬಗ್ಗಿಸಿ ಗೌರವ ಪಡೆದಿರುವುದು ಟ್ರಂಪ್ ವಿರುದ್ಧ ಪ್ರಶ್ನೆ ಹುಟ್ಟುಕೊಳ್ಳುವಂತೆ ಮಾಡಿದೆ.

ಕೇವಲ ಇದೊಂದೆ ವಿವಾದವಲ್ಲ. ಟ್ರಂಪ್ ಈ ಹಿಂದೆ ಮಾಡಿದ್ದ ಮತ್ತೊಂದು ಟೀಕೆ ಈಗ ಟ್ರಂಪ್ ಅವರನ್ನೇ ಸುತ್ತುಕೊಂಡಿದೆ. ಒಬಾಮಾ ಸೌದಿ ಭೇಟಿಯ ವೇಳೆ ಅವರ ಪತ್ನಿ ಮಿಚೆಲ್ ಒಬಾಮಾ ಸಹ ತೇರಳಿದ್ದರು. ಆಗ ಮಿಚೆಲ್ ಒಬಾಮಾ ಸೌದಿಯ ಸಂಪ್ರದಾಯವಾದ ತಲೆಗವಸು ಧರಿಸಲು ನಿರಾಕರಿಸಿದ್ದರು. ಮಿಚೆಲ್ ಅವರ ಈ ನಿರ್ಧಾರವನ್ನು ಟ್ರಂಪ್ ಪ್ರಶ್ನಿಸುತ್ತಾ ‘ಮಿಚೆಲ್ ಅವರ ಈ ನಿರ್ಧಾರ ಆತಿಥ್ಯ ನೀಡುವವರಿಗೆ ತೋರುತ್ತಿರುವ ಅಗೌರವ. ಈಗಾಗಲೇ ನಮಗೆ ಸಾಕಷ್ಟು ವೈರಿಗಳಿದ್ದಾರೆ. ಈ ನಿರ್ಧಾರದಿಂದ ಸೌದಿಯು ಅಮೆರಿಕ ವಿರುದ್ಧ ಬೇಸರ ಮಾಡಿಕೊಳ್ಳಬಹುದು’ ಎಂದು ಟ್ವೀಟ್ ಮಾಡಿ ಮಿಚೆಲ್ ವಿರುದ್ಧ ಟೀಕೆ ಮಾಡಿದ್ದರು. ಆದರೆ ಈಗ ಟ್ರಂಪ್ ಜತೆ ಅವರ ಪತ್ನಿ ಮೆಲಾನಿಯಾ ಟ್ರಂಪ್ ಸಹ ತೆರಳಿದ್ದು ಇವರೂ ತಲೆಗವಸು ಧರಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅಂದು ಮಿಚೆಲ್ ಒಬಾಮಾರನ್ನು ಟೀಕಿಸಿ ಆಚಾರದ ಪಾಠ ಮಾಡಿದ್ದ ಟ್ರಂಪ್ ಇಂದು ಅದನ್ನು ಮರೆತಿರುವುದು ಅವರ ಕೀಳು ರಾಜಕೀಯದ ಪರಿಚಯ ಮಾಡಿಕೊಡುತ್ತದೆ.

ಈ ವಿವಾದಗಳ ಹೊರತಾಗಿ ಟ್ರಂಪ್ ಈ ಪ್ರವಾಸದಲ್ಲಿ ಸೌದಿ ಅರೆಬಿಯಾ ಜತೆಗೆ 350 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆ ಪೈಕಿ 110 ಬಿಲಿಯನ್ ಡಾಲರ್ ಶಸ್ತ್ರಾಸ್ತ್ರ ಒಪ್ಪಂದವಾಗಿದೆ.

Leave a Reply