ನಿತ್ಯರಾತ್ರಿಯ ನರಕಗಳ ನಡುವೆ ಆಕೆ ಹುಡುಕುತ್ತಿದ್ದ ಪ್ರೀತಿ ಗಾಲಿಕುರ್ಚಿಯಲ್ಲಿ ಸಿಕ್ಕಿತು…

ಡಿಜಿಟಲ್ ಕನ್ನಡ ಟೀಮ್:

ಪ್ರೀತಿ… ಜಾತಿ, ಧರ್ಮ, ಬಣ್ಣ, ವಯಸ್ಸು, ಹಣ, ಅಂತಸ್ತು, ಗಡಿ, ಭಾಷೆ, ಜನಾಂಗ ಈ ಎಲ್ಲ ಕಟ್ಟಳೆಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ. ಪ್ರೀತಿ ಹೆಸರಲ್ಲಿ ಮೋಸ, ಅನ್ಯಾಯದಂತಹ ಪ್ರಕರಣಗಳು ಆಗಾಗ್ಗೆ ಕೇಳಿ ಬರುತ್ತಿರುವ ಸಂದರ್ಭದಲ್ಲಿ, ನಿಜವಾದ ಪ್ರೀತಿ ಅಂದರೆ ಏನು? ಅದರ ಶಕ್ತಿ ಏನು ಎಂಬುದನ್ನು ನಿಮಗೆ ತಿಳಿಸಲು ಒಂದು ಸ್ಪೂರ್ತಿದಾಯಕ ಕಥೆ ನೀಮಗೆ ಹೇಳುತ್ತೇವೆ ಕೇಳಿ.

ನಾವಿಂದು ಹೇಳಲು ಹೊರಟಿರುವ ಪ್ರೇಮಿಗಳ ಕಥೆ, ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ. ಒಬ್ಬ ವಿಕಲಚೇತನ (ಅಬ್ಬಾಸ್ ಮಿಯಾ) ಹಾಗೂ ಒಬ್ಬ ವೇಶ್ಯೆ (ರಾಜಿಯಾ ಬೇಗಂ) ಯ ನಡುವೆ ಮೂಡಿರುವ ಪ್ರೀತಿಯ ಕಥೆ ಇದು. ನಿಜವಾದ ಪ್ರೇಮಿಗಳ ನಡುವೆ ಯಾವುದೇ ಅಂತರ ಇರುವುದಿಲ್ಲ ಎಂಬುದಕ್ಕೆ ಇವರು ಜೀವಂತ ಸಾಕ್ಷಿ. ಇವರ ಪ್ರೇಮ ಕಥೆ ಕೇಳಿದರೆ ನಿಮ್ಮ ಮನಸ್ಸು ಭಾರವಾಗುವುದು ಖಚಿತ. ಅಂದಹಾಗೆ ಬಾಂಗ್ಲಾದೇಶ ಮೂಲದ ಈಕೆ ತನ್ನ ಪ್ರೇಮ ಕಥೆಯನ್ನು ಖ್ಯಾತ ಛಾಯಾಗ್ರಾಹಕ ಜಿಎಂಬಿ ಆಕಾಶ್ ಅವರ ಜತೆ ಹಂಚಿಕೊಂಡಿದ್ದು, ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಆಕೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ತನ್ನ ಜೀವನದ ಹಾದಿ ಹಾಗೂ ತನಗೆ ಸಿಕ್ಕ ಪ್ರೀತಿಯ ಕುರಿತಾಗಿ ಆಕೆ ತನ್ನ ಮಾತುಗಳಲ್ಲಿ ವಿವರಿಸಿರೋದು ಹೀಗೆ…

ವೇಶ್ಯೆಯಾದ ನಾನು ಪದೇ ಪದೇ ಪ್ರೀತಿಯಲ್ಲಿ ಬೀಳುವುದು ಅಸಾಧ್ಯದ ಕೆಲಸ. ನಾನು ಪ್ರಪಂಚವನ್ನು ನೋಡಲು ಆರಂಭಿಸಿದ ದಿನಗಳಿಂದಲೂ ನಾನು ಕಂಡಿರುವುದು ಬರೀ ನರಕವನ್ನೆ. ನಾನು ಯಾವಾಗ ಹುಟ್ಟಿದೆ. ನನಗೀಗ ಎಷ್ಟು ವಯಸ್ಸು, ನನ್ನ ತಂದೆ ತಾಯಿಗಳು ಯಾರು ಎಂಬುದು ಗೊತ್ತೇ ಇಲ್ಲ. ನನ್ನ ಬಹುತೇಕ ಜೀವನವನ್ನು ರಸ್ತೆಯಲ್ಲೇ ಕಳೆದೆ. ಇಂತಹ ನರಕದಲ್ಲೂ ನಾನು ಜೀವಂತವಾಗಿದ್ದೇನೆ ಎಂಬುದಕ್ಕೆ ಇರುವ ಒಂದೇ ಕಾರಣ ನನ್ನ ಮಗಳು. ನನ್ನ ವೃತ್ತಿಯ ಬಗ್ಗೆ ಆಕೆಗೆ ತಿಳಿಸಿಲ್ಲ. ಆಕೆಗೆ ಸುಳ್ಳು ಹೇಳುವುದು ನನಗೆ ದೊಡ್ಡ ಸವಾಲು. ಅದರಲ್ಲೂ ಆಕೆ ನನ್ನತ್ತ ಮುಗುಳ್ನಗೆ ಬೀರಿದಾಗ ನನ್ನ ಮನಸ್ಸು ಭಾರವಾಗುತ್ತದೆ. ‘ಅಮ್ಮಾ, ನೀನೇಕೆ ರಾತ್ರಿ ಹೊತ್ತು ಕೆಲಸಕ್ಕೆ ಹೋಗುತ್ತೀಯಾ?’ ಎಂದು ಆಕೆ ಕೇಳಿದಾಗ ನನ್ನ ಬಾಯಿಂದ ಒಂದೇ ಒಂದು ಮಾತುಗಳು ಹೊರಬರುವುದಿಲ್ಲ. ಕೆಲವು ಬಾರಿ ‘ನನಗೆ ರಾತ್ರಿ ವೇಳೆ ಕೆಲಸ ಮಾಡಲು ಇಷ್ಟವಿಲ್ಲ’ ಎಂದಷ್ಟೇ ಆಕೆಗೆ ಉತ್ತರಿಸಿದ್ದೇನೆ. ಏನು ತಿಳಿಯದ ಆಕೆ ಪ್ರತಿ ದಿನ ನನ್ನನ್ನು ಅಪ್ಪಿಕೊಂಡು ಕೆಲಸಕ್ಕೆ ಕಳುಹಿಸಿಕೊಡುತ್ತಾಳೆ. ಈ ಒಂದು ನರಕದಿಂದ ದೂರಹೋಗಲು ಬಹಳಷ್ಟು ಬಾರಿ ಪ್ರಯತ್ನಿಸಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗಿಲ್ಲ. ಆದರೆ ನನ್ನ ಮಗಳಿಗೋಸ್ಕರ ನಾನು ಬದುಕಬೇಕಿದೆ.

ಈ ಕ್ರೂರ ಪ್ರಪಂಚಕ್ಕೆ ಕಾಲಿಟ್ಟ ದಿನದಿಂದಲೂ ಎಲ್ಲರೂ ನನ್ನನ್ನು ಬಳಸಿಕೊಂಡಿದ್ದಾರೆ. ನನ್ನ ಮನಸ್ಸಿನೊಂದಿಗೆ ಆಟವಾಡಿದ್ದಾರೆಯೇ ಹೊರತು ಯಾರೊಬ್ಬರೂ ನನ್ನ ನೆರವಿಗೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ನಾನು ಜೀವನದಲ್ಲಿ ಏನು ಮಾಡುತ್ತಿದ್ದೇನೆ, ಎತ್ತ ಸಾಗುತ್ತಿದ್ದೇನೆ ಎಂದು ತಿಳಿದಿರಲಿಲ್ಲ.

ಅದೊಂದು ದಿನ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮುಸ್ಸಂಜೆ ವೇಳೆಯಲ್ಲಿ ಸೂರ್ಯ ಮುಳುಗುವುದನ್ನು ಕಾಯುತ್ತಾ ಮರದ ಕೆಳಗೆ ನಿಂತಿದ್ದೆ. ರಸ್ತೆಯ ಎದುರು ಬದಿಯಲ್ಲಿ ಇದ್ದ ಮತ್ತೊಂದು ಮರದ ಕೆಳಗೆ ಒಬ್ಬ ಬಿಕ್ಷುಕ ಗಾಲಿ ಕುರ್ಚಿಯ ಮೇಲೆ ಕೂತಿರುವುದನ್ನು ಆರಂಭದಲ್ಲಿ ಗಮನಿಸಲೇ ಇಲ್ಲ. ನನ್ನ ಜೀವನ ನೆನೆಸಿಕೊಂಡು ಅಳುತ್ತಿರುವಾಗ ಮಳೆ ನೀರು ನನ್ನ ಕಣ್ಣೀರನ್ನು ಮರೆ ಮಾಡಿತ್ತು. ಆ ಸಂದರ್ಭದಲ್ಲಿ ಅಪರಿಚಿತ ಗಂಡಸಿನೊಂದಿಗೆ ಹೋಗುವ ಮನಸ್ಸು ಇರಲಿಲ್ಲ. ನನ್ನ ಮಗಳ ಬಳಿ ಹೋಗಬೇಕೆಂದು ನನ್ನ ಮನಸ್ಸು ಹಾತೊರೆಯುತ್ತಿತ್ತು. ಆಗ ಎದುರು ಬದಿಯಲ್ಲಿದ್ದ ಬಿಕ್ಷುಕನ ಗಾಲಿ ಕುರ್ಚಿಯ ಸದ್ದು ಕೇಳಿಸಿತು. ಅಲ್ಲದೆ ಆತ ಕೆಮ್ಮಿದ ಸದ್ದು ನನ್ನ ಗಮನ ವಾಸ್ತವಕ್ಕೆ ಮರಳುವಂತೆ ಮಾಡಿತು. ಆಗ ಆತನನ್ನು ನೋಡಿ ನಿನಗೆ ಕೊಡಲು ನನ್ನ ಬಳಿ ಹಣವಿಲ್ಲ ಎಂದೆ. ಆದರೆ ನನ್ನ ಮಾನಸಿಕ ಯಾತನೆಯನ್ನು ಅರ್ಥ ಮಾಡಿಕೊಂಡಿದ್ದ ಆತ, ತನ್ನಲ್ಲಿದ ಹಣವನ್ನು ನನಗೆ ಕೊಟ್ಟು ‘ನನ್ನ ಬಳಿ ಇರುವುದು ಇಷ್ಟೇ’ ಎಂದು ಹೇಳಿ, ಮಳೆ ಮತ್ತಷ್ಟು ಜೋರಾಗುವ ಸಾಧ್ಯತೆ ಇದ್ದು ನಾನು ಮನೆ ಸೇರಿಕೊಳ್ಳುವುದು ಉತ್ತಮ ಎಂದು ಎಚ್ಚರಿಕೆ ನೀಡಿದ. ಆಗ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ತೋಚಲಿಲ್ಲ. ನೀರಿನಲ್ಲಿ ನೆಂದು ತೇವವಾಗಿದ್ದ ನೋಟನ್ನು ಕೈಯಲ್ಲಿ ಹಿಡಿದೆ. ನಂತರ ಆತ ತನ್ನ ಗಾಲಿ ಕುರ್ಚಿಯನ್ನು ದಬ್ಬಿಕೊಂಡು ಅಲ್ಲಿಂದ ಹೊರಟ.

ಆ ಸಂಜೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿ ನನ್ನಿಂದ ಏನನ್ನೂ ಬಯಸದೆ ಸಹಾಯ ಮಾಡಿದ. ಅಂದು ಗುಡಿಸಿಲಿಗೆ ಮರಳಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದೆ. ಆಗ ಮೊದಲ ಬಾರಿಗೆ ನನ್ನ ಮನಸ್ಸಿನಲ್ಲಿ ಪ್ರೀತಿ ಚಿಗುರೊಡೆಯಿತು.

ಮರುದಿನದಿಂದಲೇ ಆತನನ್ನು ಪ್ರತಿ ನಿತ್ಯ ಹುಡುಕಲು ಆರಂಭಿಸಿದೆ. ಹಲವು ದಿನಗಳ ಪ್ರಯತ್ನದ ನಂತರ ಆತನನ್ನು ಪತ್ತೆ ಹಚ್ಚಿದೆ. ಆತ ವಿಕಲಚೇತನ ಎಂಬ ಕಾರಣಕ್ಕೆ ಆತನ ಪತ್ನಿ ಬಿಟ್ಟು ಹೋಗಿರುವ ಮಾಹಿತಿ ತಿಳಿಯಿತು. ಆತನ ಮೇಲೆ ಪ್ರೀತಿ ಇದ್ದರೂ ಪ್ರೇಮದಲ್ಲಿ ಬೀಳಲು ಭಯವಿತ್ತು. ಹೀಗಾಗಿ ಗಟ್ಟಿ ಮನಸು ಮಾಡಿ ‘ನಾನು ನಿನ್ನ ಮತ್ತೆ ಪ್ರೀತಿಸಲಾರೆ. ಆದರೆ ಜೀವನಪೂರ್ತಿ ನಿನ್ನ ಈ ಗಾಲಿ ಕುರ್ಚಿಯನ್ನು ನೂಕಬಲ್ಲೆ’ ಎಂದು ಹೇಳಿದೆ. ಅದಕ್ಕೆ ಆತ ಮುಗುಳ್ನಗೆ ಬೀರುತ್ತಲೇ ‘ಪ್ರೀತಿ ಇಲ್ಲದೆ ಯಾರೂ ಜೀವನ ಪೂರ್ತಿ ಈ ಗಾಲಿ ಕುರ್ಚಿಯನ್ನು ನೂಕಲಾರರು’ ಎಂದು ಉತ್ತರಿಸಿದ.

ಈಗ ನಾವಿಬ್ಬರು ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ನಾವು ಮದುವೆಯಾದ ದಿನ ಆತ ನನಗೆ ಮಾತು ಕೊಟ್ಟ. ‘ಮತ್ತೆ ಜೀವನದಲ್ಲಿ ನಾನು ಎಂದಿಗೂ ಕಣ್ಣೀರು ಇಡದ ಹಾಗೆ ನೋಡಿಕೊಳ್ಳುತ್ತೇನೆ’ ಎಂದು. ಈ ನಾಲ್ಕು ವರ್ಷಗಳ ಪಯಣದಲ್ಲಿ ನಾವು ಅನೇಕ ಬಾರಿ ಉಪವಾಸದಲ್ಲಿ ಕಾಲ ಕಳೆದಿದ್ದೇವೆ. ಹಲವು ಕಷ್ಟದಿಂದ ದಿನ, ತಿಂಗಳು, ವರ್ಷಗಳನ್ನು ಕಳೆದಿದ್ದೇವೆ. ಆದರೆ ನಾನು ಎಂದಿಗೂ ಮರದ ಕೆಳಗೆ ನಿಂತು ಕಣ್ಣೀರಿಟ್ಟಿಲ್ಲ. ಅಬ್ಬಾಸ್ ಮಿಯಾ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ.

Leave a Reply