ಅನುರಾಗ್ ತಿವಾರಿ ಸಾವಿನ ಪ್ರಕರಣ: ಕೊಲೆ ಎಂದು ಎಫ್ಐಆರ್ ದಾಖಲಿಸಿಕೊಂಡ ಲಖನೌ ಪೊಲೀಸರು, ಸಿಬಿಐ ತನಿಖೆಗೆ ಶಿಫಾರಸು

ಡಿಜಿಟಲ್ ಕನ್ನಡ ಟೀಮ್:

ಕಳೆದ ವಾರ ಉತ್ತರ ಪ್ರದೇಶದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ಠಾಕೂರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಿರುವ ಸಂದರ್ಭದಲ್ಲೇ, ಉತ್ತರ ಪ್ರದೇಶ ಪೊಲೀಸರು ಇದೊಂದು ಕೊಲೆ ಎಂದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ತಿವಾರಿ ಕುಟುಂಬದ ಇಚ್ಛೆಯಂತೆ ಸಿಬಿಐ ತನಿಖೆಗೆ ಸಹ ಶಿಫಾರಸು ಮಾಡಲಾಗಿದೆ.

ಅನುರಾಗ್ ತಿವಾರಿ ಅವರ ಸಹೋದರ ಮಾಯಾಂಕ್ ಅವರು ಲಖನೌನ ಹಜ್ರತ್ಗಂಜ್ ಪೊಲೀಸ್ ಠಾಣೆಯಲ್ಲಿ ಇದೊಂದು ಕೊಲೆ ಎಂದು ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಸೋಮವಾರ ಅನುರಾಗ್ ತಿವಾರಿ ಅವರ ಕುಟುಂಬ ಸದಸ್ಯರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಯಾಂಕ್, ‘ಇದು ಖಂಡಿತವಾಯಗಿಯೂ ಕೊಲೆ. ಅನುರಾಗ್ ಅವರು ತಂಗಿದ್ದ ಕೊಠಡಿ ಬಾಗಿಲು ತೆರೆದಿದ್ದು, ಅವರ ಮೊಬೈಲ್ ಸಹ ಅನ್ ಲಾಕ್ ಆಗಿವೆ. ಈ ಎಲ್ಲ ಅಂಶಗಳನ್ನು ನೋಡಿದರೆ ಅನುರಾಗ್ ಅವರನ್ನು ಯಾರೋ ಕೊಲೆ ಮಾಡಿದ್ದಾರೆ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ, ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ’ ಎಂದರು.

ಇದೇ ವೇಳೆ ಮಾತನಾಡಿದ ಅನುರಾಗ್ ತಿವಾರಿ ಅವರ ತಾಯಿ ಸುಶೀಲ, ‘ನನ್ನ ಮಗನ ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ತನಿಖೆ ಪರಿಣಾಮಕಾರಿಯಾಗಿ ನಡೆಸಲು ಸಾಧ್ಯ’ ಎಂದಿದ್ದಾರೆ

ಅನುರಾಗ್ ತಿವಾರಿ ಕುಟುಂಬಸ್ಥರ ಮನವಿ ಆಧಾರದ ಮೇರೆಗೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿವೆ.

ಕುಟುಂಬ ಹೇಳುತ್ತಿರುವುದೇನು?

ಕರ್ನಾಟಕಕ್ಕೆ ಮರಳುವುದಕ್ಕೆ ಅನುರಾಗ್ ತಿವಾರಿಗೆ ಇಷ್ಟವಿರಲಿಲ್ಲ. ವ್ಯವಸ್ಥೆಯ ಯಾವುದೋ ಲೋಪದ ಬಗ್ಗೆ ಆತ ಆತಂಕಗೊಂಡಂತಿತ್ತು. ಈ ಬಗ್ಗೆ ತನಿಖೆಯಾಗಬೇಕು.

ಕರ್ನಾಟಕ ಸರ್ಕಾರ ಹೇಳುವುದೇನು?

ಆಹಾರ ಮತ್ತು ಪೂರೈಕೆ ಸಚಿವ ಯು ಟಿ ಖಾದರ್ ಸುದ್ದಿವಾಹಿನಿಗಳ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಿಷ್ಟು- ಸಿಬಿಐ ಸೇರಿದಂತೆ ಯಾವುದೇ ತನಿಖೆ ನಡೆದರೂ ಅದಕ್ಕೆ ಕರ್ನಾಟಕದ ಸರ್ಕಾರದ ಸಹಕಾರವಿರುತ್ತದೆ. ಸಾವು ಉತ್ತರ ಪ್ರದೇಶದಲ್ಲಿ ಘಟಿಸಿರುವುದರಿಂದ ತನಿಖೆಗೆ ಶಿಫಾರಸು ಮಾಡುವ ಅಧಿಕಾರ ಇರುವುದು ಅವರಿಗೇ ಆಗಿದೆ. ಇಲಾಖೆಯಲ್ಲಿ ಯಾವುದೋ ಹಗರಣವಾಗಿದೆ ಎಂಬುದಕ್ಕೆ ಯಾವ ಸೂಚನೆಗಳು ಇಲ್ಲ. ಹಗರಣವಾಗಿದ್ದರೆ ಪೂರಕ ಸಾಕ್ಷ್ಯಗಳನ್ನಿಡಬೇಕಾಗಲೀ, ರು. 2000 ಕೋಟಿ ಹಗರಣ ಎಂದು ಸುಮ್ಮನೇ ಮಾತಾಡುವುದು ಥರವಲ್ಲ.

Leave a Reply