ರಜನೀಕಾಂತ್ ರಾಜಕೀಯ ಪ್ರವೇಶದ ಮಾರ್ಗದಲ್ಲಿರುವ 4 ಮುಳ್ಳುಗಳು

ಡಿಜಿಟಲ್ ಕನ್ನಡ ವಿಶೇಷ:

ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ರಾಜಕೀಯ ಪ್ರವೇಶಿಸುವ ಉಮೇದಿದೆ ಎಂಬ ಬಗ್ಗೆ ಯಾವ ಅನುಮಾನಗಳೂ ಉಳಿದಿಲ್ಲ. ಜಯಲಲಿತಾ ನಿಧನದ ನಂತರ ಚಿನ್ನಮ್ಮ ಶಶಿಕಲಾ ಸಹ ನೇಪಥ್ಯಕ್ಕೆ ಸರಿದಿರುವಾಗ, ಇತ್ತ ಪ್ರತಿಪಕ್ಷದಲ್ಲಿ ಕರುಣಾನಿಧಿ ಸಹ ವಯೋವೃದ್ಧರಾಗಿ ಸಕ್ರಿಯ ರಾಜಕಾರಣದಿಂದ ಮರೆಯಾಗಿರುವಾಗ ಇಂಥದೊಂದು ನಿರ್ವಾತವನ್ನು ತುಂಬುವ ಬಯಕೆ ಸಹಜವಾದದ್ದೇ. ತಮಿಳುನಾಡು ‘ಡೆಮಿಗಾಡ್’ಗಳನ್ನು ನೆಚ್ಚಿಕೊಳ್ಳುವ ನೆಲ. ಸಿನಿಮಾ ಅಂಥ ಡೆಮಿಗಾಡುಗಳನ್ನು ನಿರ್ಮಿಸುವಂಥ ಕ್ಷೇತ್ರವಾದ್ದರಿಂದ ಅಲ್ಲಿಂದ ಬಂದವರು ರಾಜಕಾರಣದಲ್ಲಿ ಮಿಂಚಿದ್ದಾರೆ.

ಹಾಗೆಂದೇ… ಅಭಿಮಾನಿಗಳ ಜತೆಗಿನ ಮಿಲನವೆಂಬ ಕಾರ್ಯಕ್ರಮ ನೆಪದಲ್ಲಿ ರಜನಿ ತುಂಬ ಸ್ಪಷ್ಟವಾಗಿಯೇ ರಾಜಕೀಯದ ಸೂಚನೆಗಳನ್ನು ಕೊಟ್ಟಿದ್ದಾರೆ.

‘ಇವತ್ತಿನ ಕಲುಷಿತ ರಾಜಕೀಯ ನೋಡಿದರೆ ಕೋಪ ಬರುತ್ತದೆ. ಈಗ ನಟನಾಗಿದ್ದೇನೆ. ದೇವರು ಯಾವ ಜವಾಬ್ದಾರಿಗೆ ಪ್ರೇರೇಪಿಸುತ್ತಾನೋ ಆಕಡೆ ಹೋಗುತ್ತೇನೆ. ನನಗೆ ನನ್ನ ಜವಾಬ್ದಾರಿಗಳಿವೆ, ನಿಮಗೂ ನಿಮ್ಮ ಕುಟುಂಬ-ಮಕ್ಕಳ ಜವಾಬ್ದಾರಿಗಳಿವೆ. ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ಯುದ್ಧ ಬಂದಾಗ ನೋಡಿಕೊಳ್ಳೋಣ.’ ಈ ಮಾತುಗಳ ಮೂಲಕ ರಜನಿ ತಾನು ಚುನಾವಣೆ ವೇಳೆಗೆ ಕಣಕ್ಕೆ ಇಳಿಯುವುದಕ್ಕೆ ಸಿದ್ಧ ಎಂಬ ಸೂಚನೆ ಕೊಟ್ಟಿದ್ದಾರೆ.

ರಜನಿ ರಾಜಕೀಯ ಪ್ರವೇಶ ಎಂಬುದು ಮಾಧ್ಯಮಗಳಿಗೆ ಅದೇನೋ ಮನ್ವಂತರ ಬದಲಾಗುವ ರೋಚಕ ವಿದ್ಯಮಾನದಂತೆ ಕಾಣುತ್ತಿದೆಯಾದರೂ, ವಾಸ್ತವದಲ್ಲಿ ರಜನಿ ರಾಜಕೀಯಕ್ಕೆ ಬರಬೇಕಾದ ದಾರಿಯಲ್ಲಿ ಘಾಸಿಗೊಳಿಸುವ ಮುಳ್ಳುಗಳಿವೆ.

  • ರಜನಿ ರಾಜಕೀಯಕ್ಕೆ ಬಂದರೆ ತಮ್ಮ ಅಸ್ತಿತ್ವವೆಲ್ಲಿ ಮುಗಿಯುತ್ತದೋ ಎಂದು ಡಿಎಂಕೆ ಸೇರಿದಂತೆ ಎಲ್ಲ ತಮಿಳು ಪಕ್ಷಗಳೂ ಕತ್ತಿ ಮಸೆತ ಆರಂಭಿಸಿವೆ. ಹಾಗೆಂದೇ ಸೋಮವಾರ ರಜನಿಯ ಪೋಸ್ ಗಾರ್ಡನ್ ನಿವಾಸದೆದುರು ಭಾರಿ ಪ್ರತಿಭಟನೆಯಾಗಿದೆ. ಬಹಳ ಮುಖ್ಯವಾಗಿ, ರಜನಿ ಒಂದೊಮ್ಮೆ ಸ್ವಂತ ಪಕ್ಷವನ್ನೇ ಕಟ್ಟಿದರೂ ಅವರು ಬಿಜೆಪಿ ಪರ ಎಂಬ ಗ್ರಹಿಕೆ ಗಟ್ಟಿಯಾಗಿದೆ. ಈ ಹಿಂದಿನ ಮೋದಿ- ರಜನಿ ಭೇಟಿಗಳು, ಜಯಾ ನಿರ್ಗಮನದ ನಂತರ ಬಿಜೆಪಿ ತಮಿಳುನಾಡಿನಲ್ಲಿ ಕಾಲೂರುವುದಕ್ಕೆ ಮಾರ್ಗಗಳನ್ನು ಹುಡುಕುತ್ತಿರುವುದು ಇವೆಲ್ಲವೂ ಇಂಥ ಗ್ರಹಿಕೆಯನ್ನು ರೂಪಿಸಿವೆ. ದ್ರಾವಿಡ ರಾಜಕಾರಣದಲ್ಲೇ ಬೆಳೆದಿರುವ ತಮಿಳುನಾಡು ಬಿಜೆಪಿಯ ರಾಷ್ಟ್ರೀಯ ರಾಜಕಾರಣವನ್ನು ನೆಚ್ಚಿಕೊಳ್ಳುವುದು ಕಷ್ಟ.
  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇನೋ ‘ಎಲ್ಲ ಉತ್ತಮ ವ್ಯಕ್ತಿಗಳಿಗೂ ಬಿಜೆಪಿಗೆ ಸ್ವಾಗತವಿದೆ, ಅಂತೆಯೇ ರಜನೀಕಾಂತ್ ಅವರಿಗೂ’ ಎಂದು ಹೇಳಿದ್ದಾರಾದರೂ ಖುದ್ದು ಬಿಜೆಪಿಯಲ್ಲೇ ಇದಕ್ಕೆ ಪ್ರತಿರೋಧವಿದೆ. ರಜನೀಕಾಂತ್ ರಾಜಕೀಯಕ್ಕೆ ಬರುವ ಅಗತ್ಯವಿಲ್ಲ, ಬಿಜೆಪಿಗಂತೂ ಅವರನ್ನು ಸೇರಿಸಿಕೊಳ್ಳುವುದರಿಂದ ಒಳ್ಳೆಯದಾಗುವುದಿಲ್ಲ ಎಂದು ನೇರವಾಗಿಯೇ ಪ್ರತಿಪಾದಿಸಿದ್ದಾರೆ ಸುಬ್ರಮಣಿಯನ್ ಸ್ವಾಮಿ. ಸ್ವಾಮಿ ತಮಿಳುನಾಡಿನಲ್ಲಿ ರಾಜಕೀಯ ಜನಪ್ರಿಯತೆ ಹಾಗೂ ಮತಗಳನ್ನು ಹೊಂದಿರುವ ವ್ಯಕ್ತಿ ಅಲ್ಲದಿರಬಹುದು. ಆದರೆ ತಮಿಳು ಮೂಲದವರೇ ಆದ ಸ್ವಾಮಿ ಜತೆ ಅಸಮ್ಮತಿ ಇಟ್ಟುಕೊಂಡು ಬಿಜೆಪಿ ಸೇರುವುದು ಅಥವಾ ಬಿಜೆಪಿ ಪರ ಕೆಲಸ ಮಾಡುವುದು ರಜನಿಗೆ ಕಷ್ಟವಾದೀತು. ‘ಹತ್ತು ವರ್ಷ ತಡವಾದರೂ ಪರವಾಗಿಲ್ಲ, ತಮಿಳುನಾಡಲ್ಲಿ ಬಿಜೆಪಿ ತನ್ನದೇ ನೇತಾರನನ್ನು ಬೆಳೆಸಬೇಕು. ರಾಷ್ಟ್ರಮಟ್ಟದಲ್ಲಂತೂ ತಮಿಳುನಾಡು ಬೆಂಬಲ ಇಲ್ಲದೇ ಅಧಿಕಾರಕ್ಕೆ ಬರಬಹುದು’ ಎಂಬುದು ಸ್ವಾಮಿ ನಿಲುವು.
  • ಒಬ್ಬ ನಟನಾಗಿ ರಜನೀಕಾಂತ್ ಸುತ್ತ ಏನೇ ಹೈಪ್ ಸೃಷ್ಟಿಯಾಗಿದ್ದರೂ, ಅವರ ಬಹಳಷ್ಟು ಚಿತ್ರಗಳು ಸಂಚಲನವನ್ನೇ ಸೃಷ್ಟಿಸಿದ್ದರೂ ಹೌದಾದರೂ, ಇತ್ತೀಚಿನ ಲಿಂಗಂ, ಕಬಾಲಿ ಚಿತ್ರಗಳೆಲ್ಲ ದೊಡ್ಡ ಹೂಡಿಕೆಗೆ ನ್ಯಾಯವನ್ನೇನೂ ಸಲ್ಲಿಸಲಿಲ್ಲ. ರಜನಿಯ ಆರಾಧನೆ ಗಲ್ಲಾಪೆಟ್ಟಿಗೆಯಲ್ಲಿ ಪ್ರತಿಬಿಂಬವಾಗಿಯೇ ಆಗುತ್ತದೆ ಎಂದು ಹೇಳುವ ಸ್ಥಿತಿ ಈಗಿಲ್ಲ. ಅಂದಮೇಲೆ ಮತಪೆಟ್ಟಿಗೆಯಲ್ಲೂ ಪ್ರತಿಫಲಿಸುತ್ತದೆ ಎನ್ನಲಾಗದು.
  • ರಾಜಕಾರಣ ಸಹ ರಜನಿ ಮಾತಿಗೆ ಕೆಲವು ಸಂದರ್ಭಗಳಲ್ಲಿ ಮಾತ್ರ ಧ್ವನಿಗೂಡಿಸಬಹುದು ಎಂಬುದಕ್ಕೂ ಉದಾಹರಣೆಗಳಿವೆ. 1991-96ರ ಜಯಾ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದ ರಜನಿ, ‘ಇದೇ ಸರ್ಕಾರ ಬಂದರೆ ತಮಿಳುನಾಡನ್ನು ದೇವರಿಂದಲೂ ಕಾಪಾಡಲು ಸಾಧ್ಯವಿಲ್ಲ’ ಎಂದಿದ್ದರು. ಆಗ ಡಿಎಂಕೆ-ಟಿಎಂಸಿ ಮೈತ್ರಿ ಗೆದ್ದಿತ್ತು. ಆದರೆ 2001ರಲ್ಲಿ ಡಿಎಂಕೆಯನ್ನು ಅಡ್ಡಡ್ಡ ಮಲಗಿಸಿ ಭರ್ಜರಿ ಬಹುಮತದೊಂದಿಗೆ ಜಯಾ ಮತ್ತೆ ಅಧಿಕಾರಕ್ಕೆ ಬಂದಾಗ ರಜನಿ ಮೆದುವಾದರು.

Leave a Reply