ಜೂನ್ ಮೊದಲ ವಾರದಲ್ಲಿ ವಿಶ್ವನಾಥ್ ಜೆಡಿಎಸ್ ಸೇರ್ಪಡೆ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಹೆಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ತೆನೆ ಹೊತ್ತ ಮಹಿಳೆಯ ಕೈ ಹಿಡಿಯಲು ಜೂನ್ 7 ರಂದು ಮುಹೂರ್ತ ಫಿಕ್ಸ್ ಆಗಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಮೈಸೂರಿನಲ್ಲಿ ನಡೆಯುವ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಅಥವಾ ನಗರದ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ವಿಶ್ವನಾಥ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಜೆಡಿಎಸ್ ಸಜ್ಜುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯ ಎದ್ದು, ಕಾಂಗ್ರೆಸ್ ತೊರೆಯುತ್ತಿರುವ ವಿಶ್ವನಾಥ್ ಯಾವುದೇ ಷರತ್ತು ಇಲ್ಲದೆ, ದೇವೇಗೌಡರ ಜೊತೆ ಕೈ ಜೋಡಿಸುತ್ತಿದ್ದಾರೆ.

ವಿಶ್ವನಾಥ್ ಪಕ್ಷಕ್ಕೆ ಸೇರ್ಪಡೆಗೊಂಡರೂ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಆ ಪಕ್ಷದ ಅಭ್ಯರ್ಥಿಗಳ ಪರ ಇಡೀ ರಾಜ್ಯಾಧ್ಯಂತ ಸ್ಟಾರ್ ಕ್ಯಾಂಪೆನರಾಗಿ ಪ್ರಚಾರ ನಡೆಸಲಿದ್ದಾರೆ.

ಇತ್ತೀಚಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ಸಂದರ್ಭದಲ್ಲಿ ಸೇರ್ಪಡೆ ದಿನಾಂಕ ನಿಗದಿಯಾಗಿದೆ ಎಂದು ಮಾಹಿತಿ ಸಿಕ್ಕಿವೆ.

2018 ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಮೈಸೂರಿನ ಹುಣಸೂರು ಕ್ಷೇತ್ರದಿಂದ  ಸ್ಪರ್ಧಿಸಬೇಕೆಂಬ ಆಕಾಂಕ್ಷಿಯಾಗಿದ್ದರು. ಮಾತುಕತೆ ಸಂದರ್ಭದಲ್ಲಿ ದೇವೇಗೌಡರ ಬಳಿಯೂ ಇದನ್ನು ಹೇಳಿಕೊಂಡಿದ್ದರು. ಆದರೆ ಗೌಡರು, ಸದ್ಯದ ಪರಿಸ್ಥಿತಿಯಲ್ಲಿ ನೀವು ಚುನಾವಣಾ ಕಣಕ್ಕೀಳಿಯಬೇಡಿ. ಮುಂಬರುವ ಲೋಕಸಭಾ ಚುನಾವಣೆಯವರೆಗೂ ಪಕ್ಷಕ್ಕೆ ದುಡಿಯಿರಿ. ಅಷ್ಟೇ ಅಲ್ಲ ಎಲ್ಲರ ವಿಶ್ವಾಸ ಗಳಿಸಿಕೊಳ್ಳಿ. ನಿಮಗೆ ಪಕ್ಷದಲ್ಲಿ ಒಳ್ಳೆ ಭವಿಷ್ಯವಿದೆ. ನಿಮ್ಮನ್ನು ನಾವು ನಡು ನೀರಿನಲ್ಲಿ ಬಿಡುವುದಿಲ್ಲ. ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂಬ ಭರವಸೆಯನ್ನು ಗೌಡರು ನೀಡಿದ್ದಾರೆ.

ಗೌಡರ ಭರವಸೆಯ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಚುನಾವಣಾ ಕಣಕ್ಕೀಳಿಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲ ಅವರನ್ನು ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಸೇರ್ಪಡೆ ಮಾಡಿಕೊಳ್ಳುವುದು ಬೇಡ. ಪಕ್ಷದ ಕಚೇರಿಯಲ್ಲೇ ವಿಶ್ವನಾಥ್ ಅವರನ್ನು ಸೇರ್ಪಡೆ ಮಾಡಿಕೊಳ್ಳಿ ಎಂದು ಗೌಡರು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಮೈಸೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಿ, ವಿಶ್ವನಾಥ್ ಅವರನ್ನು ದೊಡ್ಡ ಪ್ರಮಾಣದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಸಿದ್ದತೆ ನಡೆಸಿದ್ದಾರೆ.

Leave a Reply