ಅಂಬೇಡ್ಕರ್ ಕುರಿತ ಸಭೆ, ದಲೈಲಾಮಾ ಸಾನಿಧ್ಯ; ಖರ್ಗೆಯವರಿಗೆ ಬಿಜೆಪಿ ದೂಷಣೆಯೇ ಭೂಷಣ

ಡಿಜಿಟಲ್ ಕನ್ನಡ ಟೀಮ್

‘ಸಾಮಾಜಿಕ ನ್ಯಾಯ ಮತ್ತು ಅಂಬೇಡ್ಕರ್’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ವಿಚಾರಗೋಷ್ಟಿ ನಡೆಯಿತು. ಕಾರ್ಯಕ್ರಮಕ್ಕೆ ಬೌದ್ಧ ಧರ್ಮಗುರು ದಲೈ ಲಾಮಾ ಅವರ ಉಪಸ್ಥಿತಿ ಇದ್ದಿದ್ದು ವಿಶೇಷ.

ಆದರೆ ಅಂಬೇಡ್ಕರ್, ಸಾಮಾಜಿಕ ನ್ಯಾಯ, ಬೌದ್ಧಮತ ಈ ಎಲ್ಲ ವ್ಯಾಪ್ತಿಗಳಲ್ಲಿ ಮಾತನಾಡಬಹುದಿದ್ದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ ದೂಷಣೆಯೇ ಪ್ರಿಯವಾದದ್ದು ವಿಚಿತ್ರ. ಬಿಜೆಪಿಯನ್ನು ಟೀಕಿಸಲು ಖರ್ಗೆ ಮುಕ್ತರು. ಆದರೆ ದಲೈಲಾಮಾರಿಗೆ ಯಾವ ಬಿಜೆಪಿ, ಯಾವ ಕಾಂಗ್ರೆಸ್ಸು? ಈ ವೇದಿಕೆಯೂ ರಾಜಕೀಯಕ್ಕೆ ಬೇಕಿತ್ತೇ?

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು- ದಲಿತರ ಮನೆಯಲ್ಲಿ ಊಟ ಮಾಡುವ ಬೂಟಾಟಿಕೆ  ಬಿಜೆಪಿ ನಾಯಕರದ್ದು. ದಲಿತರ ಮನೆಯಲ್ಲಿ ತಿಂಡಿ ಊಟ ಮಾಡುತ್ತೇವೆ ಎನ್ನುವುದನ್ನು ಬಿಂಬಿಸಿ, ಸಾಮಾಜಿಕ ಪರಿವರ್ತನೆ ತರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಯಲ್ಲಿ ಸಿದ್ದಪಡಿಸಿದ ಆಹಾರ ತೆಗೆದುಕೊಂಡು ಹೋಗಿ, ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ. ಮತ್ತೆ ಕೆಲವರು ಎಸಿ ಪಿಠೋಪಕರಣಗಳನ್ನು ತೆಗೆದುಕೊಂಡು ಹೋಗಿ, ವಾಸ್ತವ ಮಾಡುವ ನಾಟಕವಾಡುತ್ತಾರೆ. ಇಡೀ ರಾಷ್ಟ್ರದ ಜನತೆಯನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವುದಾಗಿ ಹೇಳುವ ಪ್ರಧಾನಿಯವರ ಪಕ್ಷದಲ್ಲೇ ಜಾತಿ ವಿಂಗಡಣೆ ನಡೆಯುತ್ತಿದೆ. ಅವರ ಪಕ್ಷದ ಸಂಸತ್ ಸದಸ್ಯರೇ ದಕ್ಷಿಣ ಭಾರತದವರು ಕರಿಯರು ಇಂತಹವರ ಜೊತೆ ಕುಳಿತು ಅಧಿಕಾರ ನಡೆಸಬೇಕೆಂದು ಸಾರ್ವಜನಿಕವಾಗಿ ಜರಿದಿದ್ದಾರೆ.

ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜ್ಯದ ಬಿಜೆಪಿ ನಾಯಕರಿಗೆ ದಲಿತರ ಮೇಲೆ ಎಲ್ಲಿಲ್ಲದ ಮೋಹ ಹುಟ್ಟಿಬಂದಿದೆ. ತಾವೇ ಸಿದ್ದಪಡಿಸಿದ ಆಹಾರ ಪದಾರ್ಥ ತೆಗೆದುಕೊಂಡು ದಲಿತರ ಮನೆಗೆ ತೆರಳಿ ತಿನ್ನುವ ನಾಟಕವಾಡುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಲೈಲಾಮಾ ವಿಷಯದ ವ್ಯಾಪ್ತಿಯಲ್ಲಿ ಮಾತನಾಡಿದರು. ‘ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವವರಿಗೆ ಸ್ಫೂರ್ತಿ ಅಂಬೇಡ್ಕರ್ ಅವರ ತತ್ವಗಳನ್ನು ಸರ್ಕಾರ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ನಿಟ್ಟಿನಲ್ಲಿ 58 ದೇಶದವರನ್ನು ಆಹ್ವಾನಿಸಿ ಅಂಬೇಡ್ಕರ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು ಮುಖ್ಯಮಂತ್ರಿ ಸಿದ್ದರಾಮಯ್ಯ.

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವನ್ನು ”ಅದ್ಭುತ” ಎಂದು ಪ್ರಶಂಸಿಸಿದ ಧರ್ಮಗುರು ದಲೈಲಾಮ ಅವರು, ಈ ಸಂವಿಧಾನ ಇಡೀ ವಿಶ್ವಕ್ಕೆ ಹೆಚ್ಚು ಪ್ರಸ್ತುತ ಎಂದರು.

Leave a Reply