ಹಸಿವು ನೀಗಿಸಿದ ಅನ್ನಭಾಗ್ಯ ಪೌಷ್ಟಿಕತೆಯನ್ನು ಕಸಿಯಿತೇ?

ಡಿಜಿಟಲ್ ಕನ್ನಡ ಟೀಮ್

‘ಬಡವರ ಹಸಿವು ಮುಕ್ತ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಪೂರ್ಣ ಪ್ರಮಾಣದಲ್ಲಿ ಪಾಲಿಶ್ ಮಾಡಿ, ಫಲಾನುಭವಿಗಳಿಗೆ ಅಕ್ಕಿ ನೀಡುವುದರಿಂದ ಅದರಲ್ಲಿ ಯಾವುದೇ ರೀತಿ ಸತ್ವಗಳು ಇರುವುದಿಲ್ಲ. ಕೆಲವು ಕುಟುಂಬದಲ್ಲಿ ಮಾಸಿಕ 70 ರಿಂದ 100 ಕೆಜಿವರೆಗೂ ಅಕ್ಕಿ ಪಡೆದುಕೊಳ್ಳುತ್ತಾರೆ. ಇವರು ಬೇರೆ ರೀತಿಯ ಪೌಷ್ಠಿಕ ಆಹಾರ ಸೇವಿಸದೇ ಆರೋಗ್ಯ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ’

– ಇದು ಪ್ರತಿಪಕ್ಷಗಳು ಮಾಡಿದ ಆರೋಪವೆಂದೋ, ಸ್ವಯಂಸೇವಾ ಸಂಸ್ಥೆಯೊಂದರ ಅಧ್ಯಯನವೆಂದೋ ತಿಳಿಯದಿರಿ. ಸಿದ್ದರಾಮಯ್ಯ ಸಂಪುಟ ಸಚಿವ ಟಿ ಬಿ ಜಯಚಂದ್ರ ಅವರೇ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಆಡಿದ ಮಾತಿನ ಸಾರ.

ಇತ್ತೀಚೆಗೆ ಜಯದೇವ ಹೃದಯ ರೋಗ ಹಾಗೂ ಬಿಜೆಎಸ್ ಆಸ್ಪತ್ರೆಯ ವೈದ್ಯರು ಗ್ರಾಮೀಣ ಭಾಗದ ಅದರಲ್ಲೂ ಬಡ ವರ್ಗದ ಜನತೆಯ ಆರೋಗ್ಯ ತಪಾಸಣೆ ಮಾಡಿದ ಸಂದರ್ಭದಲ್ಲಿ ಶೇ 40 ರಷ್ಟು ಮಂದಿಯಲ್ಲಿ ರಕ್ತದ ಕೊರತೆ ಕಂಡಿದೆ. ಅಷ್ಟೇ ಅಲ್ಲ ಬಹುತೇಕರು ಸಕ್ಕರೆ ಕಾಯಿಲೆಗೆ ತುತ್ತಾಗಿದ್ದಾರೆ. ಅದರಲ್ಲೂ 40 ವರ್ಷದ ಯುವಕರಲ್ಲೆ ರೋಗ ಕಾಣಿಸಿಕೊಂಡಿದ್ದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

ಇದಕ್ಕೆ ಅನ್ನಭಾಗ್ಯದ ಅಕ್ಕಿಯೂ ಕೊಡುಗೆ ನೀಡಿದೆ ಎಂಬುದು ಈಗ ಹುಟ್ಟುತ್ತಿರುವ ವಿಶ್ಲೇಷಣೆ. ಹೀಗಾಗಿ ಗ್ರಾಮೀಣ ಭಾಗದ ಜನರಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇನ್ನು ಮುಂದೆ ಪ್ರತಿ ಯುನಿಟ್‍ಗೆ ಒಂದು ಕೆಜಿಯಂತೆ ತೊಗರಿ ಬೇಳೆ ನೀಡುವುದಕ್ಕೂ ಸರ್ಕಾರ ಯೋಚಿಸುತ್ತಿದೆ. ಇದಕ್ಕೆ ವಾರ್ಷಿಕ 1050 ಕೋಟಿ ರೂ. ಹೆಚ್ಚುವರಿ ಹೊರ ಬೀಳಲಿದ್ದು, ಈ ಹಣವನ್ನು ಆಹಾರ ಮತ್ತು ನಾಗರಿಕ ಪೂರೈಕೆಗೆ ತುಂಬಿಸಿಕೊಡಲು ಸಂಪುಟದ ಮುಂದೆ ಪ್ರಸ್ತಾಪ ಇಡುವುದಾಗಿ ಸಚಿವರು ಹೇಳಿದ್ದಾರೆ.

ಪಾಲಿಶ್ ಹಾಕದ ಅಕ್ಕಿಯನ್ನೇ ನೀಡಬಹುದಾದರೂ ಜನ ಅದನ್ನು ಬಳಸುವುದು ಕಷ್ಟ, ತಿಳಿವಳಿಕೆ ಮೂಡಿಸುವುದೂ ಕಷ್ಟ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.

Leave a Reply