ಲಾಲು ಪರಿವಾರಕ್ಕೆ ಕಾನೂನು ಬಿಸಿ: ಮಗಳ ಲೆಕ್ಕ ಪರಿಶೋಧಕನ ಬಂಧನ, ಕೊಲೆ ಕೇಸಿನಲ್ಲಿ ಆಪ್ತನಿಗೆ ಶಿಕ್ಷೆ

 

ಡಿಜಿಟಲ್ ಕನ್ನಡ ಟೀಮ್

ತಾನು ಏನೇ ಮೆಂದರೂ ಜೀರ್ಣಿಸಿಕೊಳ್ಳಬಲ್ಲೆ ಎಂಬ ದಿನಗಳು ಲಾಲು ಪ್ರಸಾದ್ ಯಾದವ್ ಪಾಲಿಗೆ ಮುಗಿದಂತೆ ತೋರುತ್ತಿದೆ.

ಒಂದೆಡೆ ಲಾಲು ಪುತ್ರಿ ಮಿಸಾ ಅವರ ಲೆಕ್ಕಪರಿಶೋಧಕ ರಾಜೇಶ್ ಅಗರ್ವಾಲ್ ಅವರನ್ನು ₹8000 ಕೋಟಿಗಳ ಹಣಕಾಸು ಅವ್ಯವಹಾರ ಸಂಬಂಧ ಜಾರಿ ನಿರ್ದೇಶನಾಲಯವು ಬಂಧಿಸಿದೆ. ಮೇಲ್ನೋಟಕ್ಕೆ ಇಲ್ಲಿ ಮಿಸಾ ಅವರಿಗೆ ಪ್ರಕರಣ ಸಂಬಂಧಪಡುವುದಿಲ್ಲ. ಅವರ ಲೆಕ್ಕಗಳಿಗೆ ಸಂಬಂಧಿಸಿ ಈ ಬಂಧನ ನಡೆದಿಲ್ಲ. ಆದರೆ 8 ಸಾವಿರ ಕೋಟಿಗಳ ಅವ್ಯವಹಾರ ಕೇವಲ ರಾಜೇಶ್ ಅಗರ್ವಾಲ್ ಅವರದ್ದಾಗಿರಲು ಸಾಧ್ಯವಿಲ್ಲ. ಹಾಗಾದರೆ ಇಲ್ಲಿ ಯಾರೆಲ್ಲ ರಾಜಕಾರಣಿಗಳ ಹಣ ಇದೆ ಹಾಗೂ ರಾಜೇಶ್ ಅಗರ್ವಾಲ್ ಅವರನ್ನು ಬಳಸಿಕೊಂಡು ಯಾರೆಲ್ಲ ಅಕ್ರಮ ಹಣಕಾಸು ವ್ಯವಹಾರ ಮಾಡುತ್ತಿದ್ದಾರೆ ಎಂಬುದನ್ನು ಮುಂದಿನ ಹಂತದ ತನಿಖೆ ನಿರ್ಧರಿಸುತ್ತದೆ. ಮಿಸಾ ಭಾರತಿಯ ಹಣವೂ ಇಲ್ಲಿದೆಯಾ ಎಂಬುದೂ ಸಹ ಮುಂಬರುವ ದಿನಗಳಲ್ಲಿ ತನಿಖೆಯ ಭಾಗವಾಗುವ ಸಾಧ್ಯತೆಯಂತೂ ಇದೆ. ತೆರಿಗೆ ಅಧಿಕಾರಿಗಳು ವಾರದ ಹಿಂದೆ ಲಾಲು ಪರಿವಾರದ ವಿವಿಧ ಆಸ್ತಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕಿತ್ತೆಂಬುದು ಗಮನಾರ್ಹ.

ಇನ್ನೊಂದೆಡೆ, 22 ವರ್ಷಗಳ ಹಿಂದೆ ಜನತಾ ದಳ ಶಾಸಕ ಅಶೋಕ್ ಸಿಂಗ್ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಲಾಲು ಪರಮಾಪ್ತ ಹಾಗೂ ಆರ್ಜೆಡಿ ಮಾಜಿ ಸಂಸದ ಪ್ರಭುನಾಥ ಸಿಂಗ್ ಗೆ ಸ್ಥಳೀಯ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

Leave a Reply