ನೌಶೆರಾದಲ್ಲಿ ಪಾಕಿಸ್ತಾನದ ಸೇನಾನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

ಡಿಜಿಟಲ್ ಕನ್ನಡ ಟೀಮ್

ನೌಶೆರಾ ವಿಭಾಗದಲ್ಲಿ ಪಾಕಿಸ್ತಾನದ ಕಡೆಯ ಬಂಕರ್ ಮತ್ತು ನೆಲೆಗಳನ್ನು ನಾಶ ಮಾಡಿರುವುದಾಗಿ ಭಾರತೀಯ ಸೇನೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಮೇ 9 ಮತ್ತು 10ರಂದೇ ಈ ದಾಳಿಗಳು ಆಗಿರುವುದಾಗಿ ಸೇನೆ ಹೇಳಿದೆ.

ಗಡಿಯಲ್ಲಿ ಸೈನಿಕರ ಶಿರಚ್ಛೇದನದ ಬಳಿಕ ಸೇನೆಯು, ‘ಪಾಕಿಸ್ತಾನಕ್ಕೆ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ಪ್ರತಿಕ್ರಿಯೆ ನೀಡುವುದಾಗಿ’ ಹೇಳಿತ್ತು. ಸೇನೆಯ ಈ ದಾಳಿಯಿಂದ ಪಾಕಿಸ್ತಾನದ ಕಡೆ ಆಗಿರುವ ನಷ್ಟಗಳ ನಿಖರ ಲೆಕ್ಕಾಚಾರ ಸಿಕ್ಕಿಲ್ಲವಾದರೂ, ದೃಶ್ಯಾವಳಿಗಳ ಪ್ರಕಾರ ಬಂಕರ್ ರೀತಿಯಲ್ಲಿದ್ದ ಬಹುದೊಡ್ಡ ನಿರ್ಮಾಣಗಳನ್ನೆಲ್ಲ ಧ್ವಂಸ ಮಾಡಿರುವುದು ನಿಚ್ಚಳವಾಗಿದೆ. ಈ ಮೂಲಕ ಅಲ್ಲಿಂದ ಬರುತ್ತಿದ್ದ ಉಗ್ರರ ಪ್ರತಿಬಂಧಕ್ಕೂ ಇದು ಸಹಕಾರಿಯಾಗಿದೆ.

ಪಾಕಿಸ್ತಾನದ ಕಡೆಯಿಂದ ಉಗ್ರರ ಒಳನುಸುಳುವಿಕೆ ಹಾಗೂ ಗುಂಡು-ಕ್ಷಿಪಣಿಗಳ ಪ್ರಯೋಗ ಆಗಾಗ ಆಗುತ್ತಲೇ ಇತ್ತು. ಇದಕ್ಕೆ ಪ್ರತಿಯಾಗಿ ಭಾರತದಿಂದ ದೊಡ್ಡಮಟ್ಟದ ದಾಳಿ ನಡೆಸಿ ನೌಶೆರಾ ಭಾಗದಲ್ಲಿದ್ದ ಪಾಕಿಸ್ತಾನದ ಎಲ್ಲ ರಕ್ಷಣಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಅಶೋಕ ನರುಲಾ ತಿಳಿಸಿದ್ದಾರೆ.

‘ಹೀಗೆ ಪ್ರತಿದಾಳಿಗಳನ್ನು ಮಾಧ್ಯಮಗಳ ಮೂಲಕ ದೇಶದ ಜನರ ಮುಂದಿರಿಸುವುದು ಒಳ್ಳೆಯ ಬೆಳವಣಿಗೆ. ಇದು ಈಗಿನ ರಾಜಕೀಯ ನಾಯಕತ್ವದ ಸ್ಥೈರ್ಯವನ್ನು ತೋರಿಸುತ್ತಿದೆ. ಅಲ್ಲದೇ ಯೋಧರ ಆತ್ಮಸ್ಥೈರ್ಯ ವೃದ್ಧಿಗೂ ಇದು ಸಹಕಾರಿ’ ಎಂದು ಸೇನೆಯ ಮಾಜಿ ಮುಖ್ಯಸ್ಥ ವಿಕ್ರಂ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply