ರಜನೀಕಾಂತ್ ರಾಜಕೀಯಕ್ಕೆ ಬಂದರೆ ಅತಿದೊಡ್ಡ ತಲೆನೋವಿರೋದು ಕರ್ನಾಟಕಕ್ಕೆ…. ಯಾಕೆ ಗೊತ್ತೇ?

ಪವನ್ ಶರ್ಮ

ಮೊದಲಿಗೇ ಹೇಳಿಬಿಡಬೇಕು. ಸೂಪರ್ ಸ್ಟಾರ್ ರಜನೀಕಾಂತ್ ಕರ್ನಾಟಕದ ವಿರೋಧಿ ಎಂದು ಸಾಧಿಸುವುದು ಈ ಲೇಖನದ ಉದ್ದೇಶ ಅಲ್ಲವೇ ಅಲ್ಲ. ಆದರೆ, ರಜನೀಕಾಂತ್ ತಮಿಳುನಾಡಿನಲ್ಲಿ ತಮ್ಮದೇ ಪಕ್ಷದ ಮೂಲಕವೋ ಅಥವಾ ಯಾವುದಾದರೊಂದು ಪಕ್ಷ ಸೇರಿಯೋ ರಾಜಕಾರಣವನ್ನು ಆರಂಭಿಸಿದ್ದೇ ಆದರೆ ಅವರ ಬೆಂಬಲಿಗ ವರ್ಗದಿಂದ ಕಾವೇರಿ ವಿಷಯದಲ್ಲಿ ಜಯಾ ಜಗಳಗಂಟತನದಂಥದ್ದೇ ಅಧ್ಯಾಯ ಬರೆಯುವುದು ಖಚಿತ.

ನಿಜ. ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಎಲ್ಲ ಪಕ್ಷಗಳೂ ಕರ್ನಾಟಕವನ್ನು ಮಣಿಸುವತ್ತಲೇ ಪ್ರಯತ್ನಿಸಿವೆ. ಆದರೆ ಇಂಥ ಸಂಘರ್ಷ ಕರುಣಾನಿಧಿ ಅವರು ಅಧಿಕಾರದಲ್ಲಿದ್ದಾಗಿನಿಗಿಂತ ಜಯಾ ಅವಧಿಯಲ್ಲೇ ಹೆಚ್ಚಿರುತ್ತಿತ್ತು ಎಂಬುದೊಂದು ಗ್ರಹಿಕೆ. ನಾಳೆ ರಜನೀಕಾಂತ್ ಅಧಿಕಾರ ಹಿಡಿಯುವುದಕ್ಕೆ ಶಕ್ತರಾಗಲೀ, ಬಿಡಲಿ ಅವರ ಧ್ವನಿ ಕರ್ನಾಟಕದ ಪಾಲಿಗೆ ಜಯಾ ಮಾದರಿಯಲ್ಲೇ ಇರುತ್ತದೆ ಅಂತ ಊಹಿಸಬಹುದಾಗಿದೆ.

ಜಯಲಲಿತಾ ಸಹ ಕರ್ನಾಟಕ ಮೂಲದವರೇ. ಅಲ್ಲದೇ ತಮಿಳುನಾಡಿನ ದ್ರಾವಿಡ ರಾಜಕಾರಣದಲ್ಲಿ ತೀರ ಜಾತಿ ಲೆಕ್ಕವನ್ನೇ ನೋಡುವುದಕ್ಕೆ ಹೋದರೆ ಆಕೆ ಅಯ್ಯಂಗಾರಿ ಬ್ರಾಹ್ಮಣ. ಆದರೆ ಇವ್ಯಾವುದೂ ನಕಾರಾತ್ಮಕ ಅಂಶವಾಗದಂತೆ ಆಕೆಯನ್ನು ಪೊರೆದಿದ್ದು, ತಮಿಳುನಾಡು ವಿಚಾರದಲ್ಲಿ ಆಕೆ ವಹಿಸುತ್ತಿದ್ದ ಕಟ್ಟರ್ ನಿಲುವು.

ಇದೀಗ ರಜನೀಕಾಂತ್ ರಾಜಕೀಯಕ್ಕೆ ಬಂದರೂ ಬೇರೆಲ್ಲ ವಿಷಯಗಳಲ್ಲಿ ಅವರ ನಿಲುವು ಏನೇ ಆಗಿರಲಿ, ಕರ್ನಾಟಕದ ಬಗ್ಗೆ ಕಟ್ಟರ್ ನಿಲುವು ರಾಜಕೀಯವಾಗಿ ತಾಳಲೇಬೇಕಾದ ಒತ್ತಡವಿದೆ. ಅವರಿನ್ನೂ ರಾಜಕೀಯ ಪ್ರವೇಶಿಸುವುದಕ್ಕೆ ಮೊದಲೇ ಅಂಥದೊಂದು ಒತ್ತಡವನ್ನು ತಮಿಳು ಗುಂಪುಗಳು ಯಶಸ್ವಿಯಾಗಿ ಸೃಷ್ಟಿಸಿಬಿಟ್ಟಿವೆ!

ರಾಜಕಾರಣಿಯಾಗುವವನಿಗೆ ತಾನು ಜನಸ್ನೇಹಿ, ಹಣ ಲೂಟಿ ಮಾಡುವವನಲ್ಲ ಎಂದೆಲ್ಲ ಭರವಸೆ ನೀಡುವ ತರಾತುರಿಯಿರುತ್ತದೆ. ಆದರೆ ರಜನೀಕಾಂತರಿಗೆ ತಾನು ತಮಿಳಿಗ ಎಂದು ನಿರೂಪಿಸುವುದೇ ಆದ್ಯತೆಯ ಪಟ್ಟಿಯಲ್ಲಿ ಮೊದಲನೆಯದಾಗಿದೆ. ಹೀಗಿರುವಾಗ ಅವರು ಕಟ್ಟರ್ ಆಗಿ ನಡೆದುಕೊಳ್ಳಲೇಬೇಕು.

ರಜನೀಕಾಂತರ ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲೇ ಇದು ಪಕ್ಕಾ ಆಗಿಬಿಟ್ಟಿದೆ. ಅವರು ಕೇವಲ ರಾಜಕೀಯ ಶುದ್ಧವಾಗಬೇಕಿದೆ ಎಂದಷ್ಟೇ ಭಾಷಣ ಮಾಡಲಿಲ್ಲ. ತಮ್ಮ ತಮಿಳು ಐಡೆಂಟಿಟಿಯನ್ನು ದೃಢಪಡಿಸುವುದಕ್ಕೆ ಬಹಳಷ್ಟು ಮಾತುಗಳನ್ನು ವ್ಯಯಿಸಿದರು. ಅವರು ಹೇಳಿದ್ದು- ‘ಒಂದನ್ನಿಲ್ಲಿ ಸ್ಪಷ್ಟಪಡಿಸಬೇಕಿದೆ. ನನ್ನ ತಮಿಳೇತರ ಮೂಲದ ಬಗ್ಗೆ ಮಾತುಗಳು ಬರುತ್ತಿವೆ. ನನಗೀಗ 67 ವರ್ಷ. ಕರ್ನಾಟಕದಲ್ಲಿದ್ದದ್ದು 23 ವರ್ಷಗಳಾದರೆ 44 ವರ್ಷ ತಮಿಳುನಾಡಿನಲ್ಲೇ ಕಳೆದಿದ್ದೇನೆ. ನಾನು ಮರಾಠಿಗನಾಗಿಯೋ, ಕನ್ನಡಿಗನಾಗಿಯೋ ಇಲ್ಲಿಗೆ ಬಂದರೂ ಪ್ರೀತಿಯ ಮಳೆ ಸುರಿಸಿದವರು ನೀವೇ. ಖ್ಯಾತಿ ದೊರಕಿಸಿಕೊಟ್ಟು ಇಂದು ನಾನೇನಾಗಿದ್ದೇನೋ ಅದನ್ನು ರೂಪಿಸಿದವರು ನೀವೇ. ಹಾಗಾಗಿ ನಾನು ಪಚ್ಚೈ ತಮಿಳನ್ (ಪೂರ್ಣ ತಮಿಳಿಗ) ಆಗಿದ್ದೇನೆ. ನನ್ನ ಹಿರೀಕರು ತಮಿಳುನಾಡಿನ ಕೃಷ್ಣಾಗಿರಿ ಜಿಲ್ಲೆಗೆ ಸೇರಿದವರು.’

ಇದು ಪ್ರಾರಂಭವಷ್ಟೆ. ರಾಜಕೀಯಕ್ಕೆ ಬಂದರೆ ರಜನಿಗೆ ಈ ತಮಿಳಿಗ ಕಾರ್ಡನ್ನು ಮತ್ತೆ ಮತ್ತೆ ಜಳಪಳಿಸಬೇಕಾದ ಅನಿವಾರ್ಯತೆ ಬರುತ್ತದೆ. ಏಕೆಂದರೆ ಅವರ ರಾಜಕೀಯ ವಿರೋಧಿಗಳು ಅಂಥ ಸನ್ನಿವೇಶ ಸೃಷ್ಟಿಸುತ್ತಾರೆ. ಹೀಗಾಗಿ ಕರ್ನಾಟಕದ ಬಗ್ಗೆ ರಜನಿಗೆ ಆಂತರ್ಯದಲ್ಲಿ ಏನೇ ಆದರ ಭಾವಗಳಿದ್ದಿರಬಹುದಾದರೂ ಕಾವೇರಿಯಂಥ ವಿಷಯಗಳು ಬಂದಾಗ ಅವರು ಬೇರೆಲ್ಲ ರಾಜಕಾರಣಿಗಳಿಗಿಂತ ಮತ್ತಷ್ಟು ಕಟುವಾಗಿಯೇ ಮಾತಾಡಬೇಕಾಗುತ್ತದೆ. ಏಕೆಂದರೆ ಉಳಿದವರಿಗೆ ಆ ರಾಜ್ಯದ ರಾಜಕಾರಣಕ್ಕೆ ಬೇಕೆ ಬೇಕಾದ ‘ತಮಿಳಿಗ ಕಾರ್ಡ್’ ಜನ್ಮತಃ ಸಿಕ್ಕಿಬಿಟ್ಟಿರುತ್ತದೆ. ಇವರು ಅದನ್ನು ಮತ್ತೆ ಮತ್ತೆ ನಿರೂಪಿಸಬೇಕು!

ಒಬ್ಬ ನಟನಾಗಿಯೇ ರಜನೀಕಾಂತ್ ಅವರಿಗೆ ಈ ಹಿಂದೆಲ್ಲ ತಾನು ‘ಕರ್ನಾಟಕ ಪ್ರೇಮಿ’ ಅಲ್ಲ ಎಂದು ಸಾಬೀತುಪಡಿಸುವ ಒತ್ತಡಗಳೆದುರಾಗಿದ್ದವು. 2002ರಲ್ಲಿ ಕರ್ನಾಟಕವು ಕಾವೇರಿ ನೀರು ಬಿಡುತ್ತಿಲ್ಲ ಅಂತ ಅವರು ಪ್ರತಿಭಟನೆಗೆ ಕುಳಿತರು. ಆದರೆ ತಮ್ಮದೇ ಪ್ರತ್ಯೇಕ ವೇದಿಕೆಯಾದ ನಾಡಿಗರ್ ಸಂಗಂ ಮೂಲಕ ಉಪವಾಸ ಸತ್ಯಾಗ್ರಹ ಮಾಡಿದರು. ಆಗಲೂ ಇವರು ಕರ್ನಾಟಕ ಸರ್ಕಾರದ ಜತೆ ಒಳ ಒಪ್ಪಂದ ಮಾಡಿಕೊಂಡು ಪ್ರತಿಭಟನೆಯನ್ನು ಗುಂಪುಗಳಾಗಿ ಒಡೆಯುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. 2008ರಲ್ಲಿ ಹೊಗೆನಕಲ್ ವಿಷಯದಲ್ಲಿ ಕರ್ನಾಟಕದ ವಿರುದ್ಧ ಧ್ವನಿ ಎತ್ತ, ಇಲ್ಲಿನ ರಾಜಕಾರಣಿಗಳ ವಿರುದ್ಧ ಭಾಷಣ ಮಾಡಿ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡರು. ಆಗ ಇಲ್ಲಿನ ಕನ್ನಡ ಸಂಘಟನೆಗಳು ಅವರ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದವು. ನಂತರ ಬಿಸಿ ತಣ್ಣಗಾಗಿ ಅವರ ಕುಚೇಲನ್ ಚಿತ್ರವು ಕರ್ನಾಟಕದಲ್ಲಿ ಪ್ರದರ್ಶನ ಕಂಡಾಗ ರಜನೀ ಧನ್ಯವಾದ ಹೇಳಿದರು. ಇಲ್ಲೂ ಕ್ಷಮೆ ಕೇಳುವ ರೀತಿ ನಡೆದುಕೊಂಡು ತಮಿಳರಿಗೆ ಅನ್ಯಾಯ ಮಾಡಿದರೆಂದು ಸತ್ಯರಾಜ್ ಸೇರಿದಂತೆ ಅನೇಕ ನಟರೇ ರಜನಿಯನ್ನು ದೂರಿದ ಉದಾಹರಣೆ ಇದೆ.

ಇನ್ನು ರಾಜಕೀಯಕ್ಕಿಳಿದ ಮೇಲೆ ಈ ಒತ್ತಡ ಹೇಗೆಲ್ಲ ಕೆಲಸ ಮಾಡಬಹುದು ಊಹಿಸಿ. ಹೀಗಾಗಿ ಕರ್ನಾಟಕದಮಟ್ಟಿಗೆ ರಜನೀಕಾಂತ್ ರಾಜಕೀಯ ಪ್ರವೇಶ ಅಷ್ಟೊಂದು ಉತ್ಸುಕತೆಯ ವಿಷಯವಾಗಬೇಕಿಲ್ಲ.

Leave a Reply