ಜಗತ್ತನ್ನೇ ಆಳಿದ್ದೆ ಎಂದು ಬೀಗುತ್ತಿದ್ದ ಇಂಗ್ಲೆಂಡ್, ಇಸ್ಲಾಂ ತೀವ್ರವಾದಿಗಳ ಎದುರು ಮಂಡಿ ಊರಲಿದೆಯೇ?

  ಚೈತನ್ಯ ಹೆಗಡೆ

  ಮ್ಯಾಂಚೆಸ್ಟರ್ ಅರೆನಾದ ಸಂಗೀತ ಕಾರ್ಯಕ್ರಮದ ಮೇಲೆ ಸೋಮವಾರ ತಡರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 22 ಮಂದಿ ಸತ್ತು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

  ದಾಳಿಗೆ ಕಾರಣವಾದ ಒಬ್ಬ ಆತ್ಮಹತ್ಯಾ ಬಾಂಬರ್ ಸತ್ತಿದ್ದಾನಾದ್ದರಿಂದ, ಇದು ಯಾವ ಉಗ್ರಜಾಲದ ದಾಳಿ ಎಂದು ತನಿಖೆ ನಡೆಸಬೇಕಿದೆಯಷ್ಟೇ ಎಂಬುದು ಅಲ್ಲಿನ ಪೊಲೀಸರ ಉವಾಚ. ಪ್ರಧಾನಿ ಥೆರೆಸಾ ಮೇ ಇದೊಂದು ಉಗ್ರವಾದಿ ಕೃತ್ಯ ಎಂದೇ ಹೇಳಿದ್ದಾರೆ.

  ಎಲ್ಲರೂ ದೃಢೀಕೃತ ವರದಿಯೊಂದಕ್ಕೆ ಕಾಯುತ್ತಿದ್ದಾರೆ ಹೊರತು ಜಗತ್ತಿಗೆಲ್ಲ ಗೊತ್ತು ಇದು ಯಾವ ದಾಳಿ ಅಂತ. ಇಸ್ಲಾಮಿಕ್ ತೀವ್ರವಾದಿಗಳ ಕೃತ್ಯ ಅಂತ ಸರ್ಕಾರದ ತನಿಖೆಗಳು ಹೇಳುತ್ತವೆಯೋ ಅಥವಾ ಅದಕ್ಕೂ ಮೊದಲೇ ಯಾವುದಾದರೂ ಇಸ್ಲಾಮಿಕ್ ತೀವ್ರವಾದಿ ಸಂಘಟನೆ ಹೊಣೆ ಹೊತ್ತು ಅಬ್ಬರಿಸುತ್ತದೆಯೋ ಎಂಬ ಕುತೂಹಲವಷ್ಟೇ ಬಾಕಿ ಇದೆ.

  ಈ ನಿಟ್ಟಿನಲ್ಲಿ ನೋಡಿದಾಗ, ಒಂದೊಮ್ಮೆ ತಾನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಅಬ್ಬರಿಸಿಕೊಂಡಿದ್ದ ಯುನೈಟೆಡ್ ಕಿಂಗ್ಡಮ್ ಹೀಗೆ ಇಸ್ಲಾಮಿಕ್ ಉಗ್ರವಾದಕ್ಕೆ ಪದೇ ಪದೆ ಕಂಪಿಸುತ್ತಿರುವುದು ಅಯ್ಯೋ ಪಾಪ ಎನ್ನಬೇಕಾದ ಸ್ಥಿತಿ.

  2001ರಿಂದಲೂ ಯುಕೆ ಮೇಲೆ ಇಂಥ ದಾಳಿಗಳು ಆಗುತ್ತಲೇ ಇವೆ ಹಾಗೂ ಅವೆಲ್ಲವೂ ಇಸ್ಲಾಮಿಕ್ ತೀವ್ರವಾದದ ಮುಸುಕನ್ನೇ ಹೊದ್ದಿವೆ. 2005ರ ಲಂಡನ್ ಬಾಂಬಿಂಗ್ ನಲ್ಲಿ 52 ಮಂದಿ ಸತ್ತಿದ್ದರು. 770 ಮಂದಿ ಗಾಯಗೊಂಡಿದ್ದರು. ಸೋಮವಾರದ ದಾಳಿ ಸಹ ಇಸ್ಲಾಮಿಕ್ ತೀವ್ರವಾದದ್ದೇ ಎಂದು ಸಾಬೀತಾದಲ್ಲಿ (ಈ ಬಗ್ಗೆ ಅನುಮಾನಗಳಿವೆಯೇ?) ಇದು ಎರಡನೇ ಅತಿದೊಡ್ಡ ಭೀಕರ ಕೃತ್ಯ ಅಂತ ಲೆಕ್ಕ ಹಾಕಲಾಗುತ್ತದೆ. ಅಂದಹಾಗೆ, 2005ರ ಬಾಂಬಿಂಗ್ ನಡೆಸಿದವರು ಅಲ್ ಕೈದಾ ಜತೆ ಬೆಸೆದುಕೊಂಡಿದ್ದ ಬ್ರಿಟಿಷಿಗರೇ.

  2013ರಲ್ಲಿ ಇಬ್ಬರು ಬ್ರಿಟಿಷ್ ಇಸ್ಲಾಮಿಸ್ಟ್ ಗಳು ವೂಲ್ವಿಚ್ ನಲ್ಲಿ ಯೋಧನೊಬ್ಬನನ್ನು ಸಾರ್ವಜನಿಕರೆದುರು ಕಾರು ನುಗ್ಗಿಸಿ ಕೊಂದರು. ಇದು ಹತ್ಯೆ ಅಲ್ಲ, ಯುದ್ಧ ಅಂತ ಆ ಇಬ್ಬರು ಹಂತಕರು ಹೇಳಿಕೊಂಡರು. ಕೊಲೆಯಾಗಿದ್ದು ಒಬ್ಬ ಸೈನಿಕನದ್ದಾದರೂ ಜನರ ಭದ್ರತಾ ಭಾವನೆಯನ್ನೇ ಅಲುಗಾಡಿಸುವ ಖಚಿತ ವಿನ್ಯಾಸವನ್ನಿದು ಹೊಂದಿತ್ತು.

  ಮೊನ್ನೆಯಷ್ಟೇ ಮಾರ್ಚ್ ನಲ್ಲಿ ಖಾಲಿದ್ ಮಸೂದ್ ಎಂಬಾತ ಯುಕೆ ಸಂಸತ್ತಿಗೆ ಕಾರು ನುಗ್ಗಿಸಿ ವಿಧ್ವಂಸಕ್ಕೆ ಯತ್ನಿಸುತ್ತ ಪೊಲೀಸರ ಗುಂಡಿಗೆ ಸತ್ತ. ಇದಕ್ಕೂ ಮೊದಲು ಆತ ತನ್ನ ಮಾರ್ಗದಲ್ಲಿ ನಾಲ್ವರನ್ನು ಸಾಯಿಸಿ ಹಲವರನ್ನು ಘಾಸಿಗೊಳಿಸಿದ್ದ. ಕಾರಿನಿಂದಿಳಿದು ಪೊಲೀಸನೊಬ್ಬನನ್ನು ಇರಿದು ಕೊಂದಿದ್ದ.

  ಇವೆಲ್ಲ ಮನಸ್ಥಿತಿಗಳು ಬ್ರಿಟನ್ ನಲ್ಲಿ ಹುಟ್ಟಿದ್ದು ಹೇಗೆ ಎಂಬುದಕ್ಕೆ ನಿಮಗೆ ಅತಿ ಸುಲಭ ಮಾದರಿಗಳು ಸಿಗುತ್ತವೆ. ಪ್ರತ್ಯೇಕತಾವಾದಿಗಳ ರಾಜಾರೋಷ ವರ್ತನೆ ಭಾರತದಲ್ಲಿ ಮಾತ್ರವಿದೆ ಎಂದುಕೊಳ್ಳಬೇಡಿ. ಯುರೋಪ್ ನಲ್ಲಿ ಅದರಲ್ಲೂ ಇಂಗ್ಲೆಂಡ್ ನಲ್ಲಿ ‘ನಾವು ಪ್ರಜಾಪ್ರಭುತ್ವ ಕಿತ್ತೊಗೆದು ಷರಿಯಾ ಇಸ್ಲಾಮಿಕ್ ಕಾನೂನು ಸಾಮ್ರಾಜ್ಯ ಸ್ಥಾಪಿಸುತ್ತೇವೆ’ ಎಂದು ಬೀದಿಗಳಲ್ಲಿ ಭಿತ್ತಿಪತ್ರ ಹಿಡಿದು ಕೂಗಾಡಿಕೊಂಡಿರುವುದು ಹಲವು ವರ್ಷಗಳಿಂದಲೇ ಸಾಮಾನ್ಯ. ಎಷ್ಟೆಂದರೂ ಉದಾರವಾದಿಗಳ ನೆಲವಲ್ಲವೇ? ಪ್ರಾರಂಭದಲ್ಲಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಅಂದುಕೊಂಡು ಸುಮ್ಮನಾಗಿದ್ದಕ್ಕೆ ಈಗ ಕಂತು ಕಂತುಗಳಲ್ಲಿ ಒದೆಸಿಕೊಳ್ಳುತ್ತಿದ್ದಾರೆ.

  ದ್ವೇಷ ಸಿದ್ಧಾಂತ/ ಐಎಸ್ಐಎಸ್ ಪರ ಪ್ರತಿಪಾದನೆ ಮಾಡುತ್ತಿದ್ದ ಅಂಜೀಮ್ ಚೌಧರಿ ಎಂಬಾತನಿಗೆ ವರ್ಷದ ಹಿಂದಷ್ಟೆ ಐದೂವರೆ ವರ್ಷಗಳ ಜೈಲುಶಿಕ್ಷೆಯಾಗಿದೆ. ಈತನೊಬ್ಬ ಬ್ರಿಟಿಷ್ ಇಸ್ಲಾಂವಾದಿ. ಚೆಂದನೆಯ ಇಂಗ್ಲಿಷಿನಲ್ಲಿ ಇಸ್ಲಾಂ ತೀವ್ರವಾದವನ್ನು ಪಸರಿಸುವುದು ಹೇಗೆ ಅಂತ ತಿಳಿಯಬೇಕಾದರೆ ನೀವು anjem choudary ಅಂತ ಯೂಟ್ಯೂಬಿನಲ್ಲಿ ಟೈಪಿಸಿ ಆತನ ವಿಕೃತ ವಿಚಾರಧಾರೆಯ ಸುಂದರ ಪ್ಯಾಕೇಜ್ ಅನ್ನು ಕಾಣಬಹುದು.

  ‘ಇಸ್ಲಾಂ ಶಾಂತಿಯ ಧರ್ಮ ಅಲ್ಲವೇ ಅಲ್ಲ. ನಮ್ಮದು ಶರಣಾಗತಿ ಬಯಸುವ ಧರ್ಮ. ಯುರೋಪು ಶರಿಯಾ ಕಾಯ್ದೆಗೆ ಒಳಪಡಬೇಕು. ಪ್ರಜಾಪ್ರಭುತ್ವ ಬೇಕಾಗಿಲ್ಲ’ ಇಂಥದ್ದನ್ನೆಲ್ಲ ಬರೋಬ್ಬರಿ ಎರಡು ದಶಕಗಳ ಕಾಲ ಪ್ರಮುಖ ಮಾಧ್ಯಮ ವೇದಿಕೆಗಳಲ್ಲೇ ಖುಲ್ಲಂ ಖುಲ್ಲ ಸಾರಿದವನು ಈ ಚೌದರಿ. ಪ್ರಜಾಪ್ರಭುತ್ವ ನರಕಕ್ಕೆ ಹೋಗಲಿ, ನಮಗೆ ಬೇಕಿರುವುದು ಷರಿಯಾ ಎಂಬ ಪ್ಲಕಾರ್ಡ್ ಹಿಡಿದು ಲಂಡನ್ ಬೀದಿಗಳಲ್ಲಿ ಅಬ್ಬರಿಸಿದವನಿಗೆ ಕೊನೆಗೂ ಸಿಕ್ಕಿದ್ದು ಐದು ಚಿಲ್ಲರೆ ವರ್ಷಗಳ ಸೆರೆವಾಸ. ಐಎಸ್ ಐಎಸ್ ಎಂಬ ಉಗ್ರ ಸಂಘಟನೆ ಇಸ್ಲಾಂ ಸಾಮ್ರಾಜ್ಯ ಸ್ಥಾಪನೆಗೆ ಮಾಡುತ್ತಿರುವ ಹೋರಾಟ ಸರಿಯಾಗಿಯೇ ಇದೆ, ನಾವದನ್ನು ಬೆಂಬಲಿಸುತ್ತೇನೆ ಎನ್ನುವ ಚೌದರಿಗೆ ‘ಉದಾರವಾದಿ’ ಇಂಗ್ಲೆಂಡು ಯಕಶ್ಚಿತ್ ಐದೂವರೆ ವರ್ಷಗಳ ಸೆರೆವಾಸ ನೀಡಿ ತನ್ನ ಕಾನೂನು ವ್ಯವಸ್ಥೆಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತದೆ ಅಂತಾದರೆ ಇಸ್ಲಾಮಿಸ್ಟ್ ಗಳ ಆಕ್ರಮಣದೆದುರು ಇವರನ್ನು ಯಾವ ದೇವರು ತಾನೇ ಕಾಪಾಡಿಯಾನು?

  ತಾನು ಸಾಯುವುದಕ್ಕೆಂದೇ ಬಾಂಬು ಕಟ್ಟಿಕೊಂಡು ಬರುವವರನ್ನು ತಡೆಯುವುದು ಅದೆಂಥ ಆಧುನಿಕ ರಕ್ಷಣಾ ವ್ಯವಸ್ಥೆಗೂ ಆಗದ ಕೆಲಸ. ನಿಜಕ್ಕೂ ಗುರಿ ಮಾಡಬೇಕಿರುವುದು ಹೀಗೆ ಸಾಯುವವರನ್ನು ತಯಾರು ಮಾಡುತ್ತಿರುವ ಐಡಿಯಾಲಜಿಯನ್ನು ಮತ್ತದರ ಪ್ರೋತ್ಸಾಹಕರನ್ನು.

  ಇಂಗ್ಲೆಂಡು, ಯುರೋಪು ಮತ್ತು ಜಗತ್ತಿನ ಯಾವುದೇ ದೇಶ ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಇಸ್ಲಾಮಿಕ್ ಆಕ್ರಮಣವನ್ನು ತಡೆಯಲಾಗುವುದಿಲ್ಲ.

  Leave a Reply