ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಿದ್ದ ಬಳ್ಳಾರಿಯಲ್ಲೀಗ ಕಾಂಗ್ರೆಸ್ಸಿಗೆ ಒಗ್ಗಟ್ಟು ಕಾಪಾಡಿಕೊಳ್ಳುವ ಸವಾಲು

ಡಿಜಿಟಲ್ ಕನ್ನಡ ಟೀಮ್

ಈ ಹಿಂದೆ ದಿಗ್ವಿಜಯ್ ಸಿಂಗ್ ಇದ್ದ ಜಾಗದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತು ಇಲ್ಲಿಗೆ ಬಂದಿರುವ ಕೆ. ಸಿ. ವೇಣುಗೋಪಾಲನ್ ಪ್ರಾರಂಭಿಕ ಸಮಾಲೋಚನೆಗಳನ್ನು ರಾಜ್ಯದ ಕಾಂಗ್ರೆಸ್ಸಿಗರೊಂದಿಗೆ ನಡೆಸಿದ್ದಾರಷ್ಟೆ.

ಇಂಥ ಸಮಾಲೋಚನೆಗಳಲ್ಲಿ ಪ್ರಾಮುಖ್ಯ ಪಡೆದಿದ್ದು ಮಂಗಳವಾರದ ಬಳ್ಳಾರಿ ಚರ್ಚೆಯೂ ಒಂದು ಎನ್ನಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ಕಾಂಗ್ರೆಸ್ಸಿನಂದ ದೊಡ್ಡಮಟ್ಟದ ಪ್ರಯತ್ನ ಆರಂಭವಾಗಿದ್ದು ಬಳ್ಳಾರಿಯಿಂದ ಎಂಬುದು ಇತಿಹಾಸ. ಸಿದ್ದರಾಮಯ್ಯನವರ ಪಾದಯಾತ್ರೆಯ ಚಿತ್ರಣ ಇನ್ನೂ ಮುಸುಕಾಗಿಲ್ಲ.

ಹೀಗಿರುವಾಗ ಇದೀಗ ಕಾಂಗ್ರೆಸ್ ಸಂಘಟನೆ ಬಳ್ಳಾರಿಯಲ್ಲಿ ಸಡಿಲವಾಗಿದೆಯೇ ಎಂಬುದು ಚರ್ಚೆ. ಬಳ್ಳಾರಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮುಂಬರುವ ವಿಧಾನ ಸಭೆ ಚುನಾವಣೆ ಎದುರಿಸಲು ಪಕ್ಷ ಸಂಘಟಿಸುವಂತೆ ಸೂಚಿಸಿದ್ದಾರೆ. ಆ ಬಣ ಈ ಬಣ ಎನ್ನದೇ ಜಿಲ್ಲೆಯ ಒಂಭತ್ತು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ತಾಕೀತು ಮಾಡಿದ್ದಾರೆ ಎಂದರು. ಮಾಜಿ ಸಚಿವ ಪರಮೇಶ್ವರ್ ನಾಯ್ಕ ‘ನಮ್ಮಲ್ಲಿ ಅಂತಹ ದೊಡ್ಡ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಟ್ಟಾಗಿಯೇ ಹೋಗುತ್ತೇವೆ’ ಎಂದರು.

ಬಳ್ಳಾರಿ ಸಭೆ ನಡೆದಾಗ ಲಾಡ್ ಸಹೋದರರ ಅಸಮಾಧಾನ ಸ್ಪೋಟಗೊಂಡಿತು ಎನ್ನಲಾಗಿದೆ. ಬಳ್ಳಾರಿ ನಗರ ವಿಧಾನಸಭಾಕ್ಷೇತ್ರದ ಶಾಸಕ ಅನಿಲ್‍ಲಾಡ್ ಆಸ್ಟ್ರೇಲಿಯಾ  ಪ್ರವಾಸದಲ್ಲಿರುವ ಕಾರಣ ಸಭೆಗೆ ಹಾಜರಾಗಿರಲಿಲ್ಲ.ಕೆ.ಸಿ. ಕೊಂಡಯ್ಯ ಗೈರು ಹಾಜರಾಗಿದ್ದರು.

ಬಳ್ಳಾರಿ ಕಾಂಗ್ರೆಸ್‍ನಲ್ಲಿ ಅನಿಲ್ ಲಾಡ್ ಬಣ, ಸಂತೋಷ್ ಲಾಡ್ ಬಣ, ದಿವಾಕರ್ ಬಾಬು ಬಣ, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ ಬಣ, ಯುವ ಕಾಂಗ್ರೆಸ್ ಮುಖಂಡ ಆಂಜನೇಯಲು ಬಣ ಈ ರೀತಿ ಹಲವಾರು ಬಣಗಳಿದ್ದು, ಪಕ್ಷ ಸಂಘಟನೆಗೆ ತೊಡಕಾಗಿದೆ. ಈ ಎಲ್ಲಾ ಬಣಗಳನ್ನು ಒಟ್ಟಿಗೆ ಮಾಡದಿದ್ದರೆ, ಒಂಭತ್ತು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳನ್ನು ಗೆಲ್ಲಲೂ ಕಷ್ಟವಾಗುತ್ತದೆ. ಗಾಲಿ ಜನಾರ್ದನ ರೆಡ್ಡಿ ಜಿಲ್ಲೆಲ್ಲಿ ಈಗಾಗಲೇ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬಳ್ಳಾರಿ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟು ಮೂಡದಿದ್ದರೆ ರೆಡ್ಡಿ ದರ್ಬಾರು ಮರುಕಳಿಸುತ್ತದೆ ಎಂದು ಚಿಂತನ ಮಂಥನದಲ್ಲಿ ಅಭಿಪ್ರಾಯ ವ್ಯಕ್ತವಾಗಿರುವ ಮಾಹಿತಿ ಇದೆ.

Leave a Reply