ಕೊಲ್ಕತಾದಲ್ಲಿ ಅವಧಿಗೂ ಮುನ್ನವೇ ಸಿದ್ಧವಾಯ್ತು ದೇಶದ ಮೊದಲ ನೀರಿನೊಳಗಿನ ರೈಲ್ವೆ ಸುರಂಗ, ಎಂಜಿನಿಯರುಗಳಿಗೊಂದು ನಮಸ್ತೆ!

ಡಿಜಿಟಲ್ ಕನ್ನಡ ಟೀಮ್:

ನಮ್ಮಲ್ಲಿ ಮೆಟ್ರೊ ಕಾಮಗಾರಿಯಿಂದ ಹಿಡಿದು ಮೋರಿ ರಿಪೇರಿವರೆಗೂ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಅದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವುದಿಲ್ಲ. ಆದರೆ, ಕೋಲ್ಕತಾದ ಮೆಟ್ರೊ ಸಂಪರ್ಕಕ್ಕಾಗಿ ಮಾಡಲಾಗಿರುವ ಸುರಂಗ ಕಾಮಗಾರಿ ನಿಗದಿತ ಅವಧಿಗೂ ಮುನ್ನವೇ ಪೂರ್ಣಗೊಂಡಿದೆ.

ಅಂದಹಾಗೆ ಈ ಸುರಂಗವನ್ನು ಹೂಗ್ಲಿ ನದಿಯ ಕೆಳಭಾಗದಿಂದ ಕೊರೆಯಲಾಗಿದ್ದು, ಇದು ದೇಶದ ಮೊದಲ ನೀರಿನೊಳಗಿನ ರೈಲ್ವೆ ಸುರಂಗ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಆಫ್ಕಾನ್ಸ್ ಟ್ರಾನ್ಸ್ ಟನ್ನೆಲ್ ಸ್ಟ್ರಾಯ್ ಕಂಪನಿ ಹಾಗೂ ಕೊಲ್ಕತಾ ಮೆಟ್ರೋ ರೈಲ್ವೆ ನಿಗಮ, ಮುಂಬರುವ ಜುಲೈ ವೇಳೆಗೆ ಈ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಅಂತಿಮ ಗಡುವು ಹೊಂದಿತ್ತು.

ಕೋಲ್ಕತಾ ಮೆಟ್ರೊದ ಪೂರ್ವ-ಪಶ್ಚಿಮ ಮಾರ್ಗದ ಮೆಟ್ರೋ ಸಂಪರ್ಕ 16.6 ಕಿ.ಮೀ ಉದ್ಧದ ಮಾರ್ಗವಾಗಿದ್ದು. ಆ ಪೈಕಿ 10.8 ಕಿ.ಮೀ ಸುರಂಗ ಮಾರ್ಗವಾಗಿದೆ. ಈ 10.8 ಕಿಮೀ ಉದ್ದದ ಸುರಂಗದಲ್ಲಿ 502 ಮೀ. ಹೂಗ್ಲಿ ನದಿಯ ಕೆಳಗೆ ನಿರ್ಮಿಸಿರುವಂತದ್ದಾಗಿದೆ. ಈ 16.6 ಕಿ.ಮೀ ಉದ್ಧದ ಮೆಟ್ರೋ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, ಆ ಪೈಕಿ 6 ನಿಲ್ದಾಣಗಳನ್ನು ಭೂಮಿಯ ಒಳಗೆ ನಿರ್ಮಿಸಲಾಗಿದೆ.

ಸುರಂಗ ಕಾಮಗಾರಿ ಶುರುವಾಗಿದ್ದು 2016ರ ಏಪ್ರಿಲ್ 14ರಂದು. ಈ ಇಡೀ ಕಾಮಗಾರಿಯಲ್ಲಿ 502 ಮೀ. ಉದ್ದದ ಸುರಂಗ ಕೊರೆಯುವುದು ಬಹುದೊಡ್ಡ ಸವಾಲಾಗಿತ್ತು. ಈ ಸುರಂಗವನ್ನು ಕೇವಲ 1 ತಿಂಗಳು ಹಾಗೂ 6 ದಿನಗಳ ಅವಧಿಯಲ್ಲಿ ಕೊರೆಯಲಾಗಿದೆ. ಆ ಮೂಲಕ ನಿಗದಿತ ಅವಧಿಗಿಂತ 50 ದಿನ ಮುಂಚಿತವಾಗಿಯೇ ಕಾಮಗಾರಿ ಮುಗಿಸಿ ಆಫ್ಕಾನ್ಸ್ ಕಂಪನಿ ಹಾಗೂ ಕೆಎಂಆರ್ ಸಿಎಲ್ ಪ್ರಶಂಸೆಗೆ ಪಾತ್ರವಾಗಿವೆ. ಇದರ ಶ್ರೇಯಸ್ಸು ಯೋಜನೆಯಲ್ಲಿ ಭಾಗಿಯಾಗಿರುವ 250 ಎಂಜಿನಿಯರುಗಳು, ಕೆಲಸಗಾರರು ಮತ್ತು ತಂತ್ರಜ್ಞರಿಗೆ ಸಲ್ಲುತ್ತದೆ ಅಂತ ಕೊಲ್ಕತ ಮೆಟ್ರೋ ಶ್ಲಾಘಿಸಿದೆ.

Leave a Reply