ಊರು ಮುಳುಗಿಸಿ ಜೋಗ ಜಲಪಾತವನ್ನು ಸರ್ವಋತುವಾಗಿಸುವ ಸರ್ಕಸ್ಸು ಬೇಕೇ?

ಡಿಜಿಟಲ್ ಕನ್ನಡ ವಿಶೇಷ

ವಿಶ್ವವಿಖ್ಯಾತ ಜೋಗ ಜಲಪಾತವನ್ನು ವರ್ಷಪೂರ್ತಿ ಪ್ರವಾಸಿಗರು ನೋಡಲಿ ಎಂದು ಸರ್ಕಾರ ಸರ್ವಋತು ಜೋಗ ಎಂಬ ನಿಸರ್ಗಕ್ಕೆ ವಿರುದ್ಧವಾದ ಯೋಜನೆ ಜಾರಿಗೆ ಉತ್ಸುಕತೆ ತೋರುತ್ತಿದೆ ಎಂಬ ವಿರೋಧದ ಧ್ವನಿಗಳೀಗ ಕೇಳಿಬರುತ್ತಿವೆ.

ದುಬೈ ಉದ್ಯಮಿ ಬಿ ಆರ್ ಶೆಟ್ಟಿ ಒಡೆತನದ ಕಂಪನಿ ಮೂಲಕ ಅನುಷ್ಛಾನಕ್ಕೆ ಯೋಜಿಸಿರುವ ಈ ಯೋಜನೆ ಸದ್ಯಕ್ಕೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ. ಸ್ಥಳ ಪರಿಶೀಲನೆ ನಂತರವಷ್ಟೆ ನಿರ್ಧರಿಸುವುದಾಗಿ ಸಚಿವಾಲಯ ಹೇಳಿರುವುದರಿಂದ ಇದೀಗ ಆ ಕುರಿತ ಚರ್ಚಾಕಾಲ.

ಸ್ಥಳೀಯರು, ಸಾಹಿತಿಗಳು, ವಿವಿಧ ಸಂಘಟನೆಗಳು ಯೋಜನೆ ವಿರೋಧಿಸುತ್ತಿದ್ದಾರೆ. ಮಳೆಗಾಲದ ನಂತರವೂ ನೀರು ಹರಿಸಬೇಕೆಂದರೆ ಕಿರು ಅಣೆಕಟ್ಟು ಕಟ್ಟಬೇಕು. ಪ್ರಸ್ತುತ ಸೀತಾಕಟ್ಟೆ ಬಳಿ ಅಣೆಕಟ್ಟೆ ನಿರ್ಮಿಸಿದ್ದೇ ಆದಲ್ಲಿ ಸುಮಾರು 12 ಹಳ್ಳಿಗಳು ಮತ್ತೆ ಮುಳುಗಡೆಯಾಗಲಿವೆ. ಇದರಿಂದಾಗಿ ಒಮ್ಮೆ ಮುಳುಗಡೆಯಾದವರು ಮತ್ತೆ ಮುಳುಗಡೆಯಾಗಬೇಕಾದ  ಸ್ಥಿತಿ ನಿರ್ಮಾಣವಾಗಲಿದೆ. ಹಿಂದೆ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ವಿದ್ಯುತ್‍ಗಾಗಿ ಮುಳುಗಡೆಯಾದವರು ಪಕ್ಕದಲ್ಲೇ ತಲಕಳಲೆ ಬಳಿ ಪುನರ್ವಸತಿ ಪಡೆದಿದ್ದರು. ಬಳಿಕ ತಲಕಳಲೆ ಜಲಾಶಯ ನಿರ್ಮಾಣದ ವೇಳೆ ಮತ್ತೆ ನಿರಾಶ್ರಿತರಾದವರು ಸೀತಾಕಟ್ಟೆ, ಜೋಗಿನ್‍ಮಠ ಬಳಿ ಬದುಕು ಕಟ್ಟಿಕೊಂಡಿದ್ದಾರೆ ಎಂಬುದು ವಿರೋಧಿಸುವವರ ವಾದ.

ಯೋಜನೆ ಪ್ರಸ್ತಾವ ಹೊಂದಿರುವ ಸರ್ಕಾರ ಈ ಬಗ್ಗೆ ಮಾತನಾಡುತ್ತಿಲ್ಲ. ಅದರ ಬದಲು, ಇಳಿದುಹೋಗುವ ನೀರನ್ನು ಸಂಗ್ರಹಿಸಿ ಮತ್ತೆ ಮೇಲೆತ್ತಿ ಹರಿಸುವುದರಿಂದ ಒಂದೆಡೆ ಜೋಗ ಜಲಪಾತ ಮೈದುಂಬಿಕೊಂಡರೆ ಮತ್ತೊಂದೆಡೆ ಇದರ ಹರಿವಿನ ನಾಲ್ಕು ಕಿ.ಮೀವರೆಗೆ ವನ್ಯಪ್ರಾಣಿಗಳಿಗೆ ಬಾಯಾರಿಕೆ ತಣಿಸಿದಂತಾಗುತ್ತದೆ ಎಂಬ ಪ್ರಯೋಜನವನ್ನು ಮುಂದು ಮಾಡಲಾಗುತ್ತಿದೆ. ನೀರನ್ನು ಮತ್ತೆ ಮೇಲಕ್ಕೆ ಪಂಪ್ ಮಾಡುವುದಕ್ಕೆ 47.80 ಮಿಲಿಯನ್ ಯುನಿಟ್ ಶಕ್ತಿ ಬೇಕಾಗುತ್ತದೆಯಾದರೂ ಅಷ್ಟನ್ನು ಹೇಗೆಂದರೂ ಮಳೆಗಾಲದಲ್ಲಿ ಉತ್ಪಾದಿಸುತ್ತೇವಲ್ಲ ಎಂಬ ವಾದ.

ಈ ಯೋಜನೆಯಲ್ಲಿ ಮುಳುಗಡೆ ಪರಿಣಾಮಗಳಿವೆಯೇ ಎಂಬ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಇಲ್ಲ. ಆದರೆ ₹40 ಕೋಟಿಯ ಈ ಯೋಜನೆಗೆ 89.40 ಎಕರೆ ಭೂಮಿಯ ಅವಶ್ಯವಿದೆ ಹಾಗೂ 2.91 ಎಕರೆ ಅರಣ್ಯಭೂಮಿ ಅಗತ್ಯವಿದೆ ಎಂದು ಪ್ರಸ್ತಾವದಲ್ಲಿದೆ.

ಜೋಗದ ಕುರಿತ ಈ ಪ್ರವಾಸ ಬರಹವನ್ನೂ ಓದಿ..

Leave a Reply