ಐಎಎಸ್ ಅಧಿಕಾರಿಗಳಿಂದ ಕೆಎಎಸ್ ಅಧಿಕಾರಿಗಳಿಗೆ ಕಿರುಕುಳ- ಲೋಕಾಯುಕ್ತಕ್ಕೆ ದೂರು ಕೊಟ್ರು ಕೆ.ಮಥಾಯಿ

ಡಿಜಿಟಲ್ ಕನ್ನಡ ಟೀಮ್:

ಐಎಎಸ್ ಅಧಿಕಾರಿಗಳು ಕೆಎಎಸ್ ಹಾಗೂ ಕಿರಿಯ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇದರೊಂದಿಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕಿರಿಯ ಅಧಿಕಾರಿಗಳು ಐಎಎಸ್ ಲಾಭಿ ವಿರುದ್ಧ ಬಂಡಾಯ ಎದ್ದಿದ್ದು, ಐಎಎಸ್ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಹಂತಕ್ಕೆ ಹೋಗಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ರಮಣ ರೆಡ್ಡಿ, ಡಾ. ಕಲ್ಪನಾ, ಡಾ.ಟಿ.ಕೆ. ಅನಿಲ್ ಕುಮಾರ್ ಹಾಗೂ ಲಕ್ಷ್ಮಿನಾರಾಯಣ ವಿರುದ್ಧ ಮಥಾಯಿ ಅವರು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ಸಲ್ಲಿಸಿದರು. ಈ ದೂರಿನಲ್ಲಿ ‘ಹಿರಿಯ ಅಧಿಕಾರಿಗಳು ಮಾಫಿಯಾದಲ್ಲಿ ತೊಡಗಿದ್ದಾರೆ. ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ’ ಎಂದು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ. ಈ ದೂರು ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಥಾಯಿ ಅವರು ಹೇಳಿದಿಷ್ಟು…

‘ತಾನು ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದಾಗ ₹ 2 ಸಾವಿರ ಕೋಟಿ ಅಕ್ರಮ ಜಾಹೀರಾತು ದಂಧೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಇದಾದ ಬಳಿಕ ತನಗೆ ಕಿರುಕುಳ ಆರಂಭವಾಯಿತು. ವರದಿಯನ್ನು ಸರ್ಕಾರವೇ ಅಂಗೀಕರಿಸಿ ಸಿಐಡಿಗೆ ಒಪ್ಪಿಸಿ ತಮಗೆ ಅಭಿನಂದನೆ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಮಾತ್ರ ತನ್ನ ಸೇವಾ ವರದಿಯಲ್ಲಿ `ನಿಮ್ಮ ಸೇವೆ ತೃಪ್ತಿ ತಂದಿಲ್ಲ’ ಎಂದು ಬರೆದು ತನ್ನ ಮುಂದಿನ ಸೇವೆಗೆ ಹಾಗೂ ಬಡ್ತಿಗೆ ತೊಂದರೆ ಮಾಡಿದ್ದಾರೆ.

ಅಲ್ಲಿಂದ ಸಕಾಲ ಯೋಜನೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕವೂ ಕಿರುಕುಳ ಮುಂದುವರೆದಿದೆ. ಇಲ್ಲಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಅವರು, ದಿನನಿತ್ಯ ತಮಗೆ ಶೋಕಾಸ್ ನೋಟೀಸ್ ಜಾರಿ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ 9.45ಕ್ಕೆ ಕಚೇರಿಯಲ್ಲಿದ್ದರೂ 11 ಗಂಟೆಗೆ ಆಗಮಿಸಿದ ಡಾ. ಕಲ್ಪನಾ ಅವರು, ಹಾಜರಾತಿ ಪುಸ್ತಕದಲ್ಲಿ ನಾನು ಗೈರು ಹಾಜರಾಗಿದ್ದೇನೆಂದು ನಮೂದಿಸಿದ್ದಾರೆ. ಇಂತಹ ಅನೇಕ ರೀತಿಯ ಕಿರುಕುಳ ಸಹಿಸಲಾಗದೆ. ಹೀಗಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ.

ಸಕಾಲ ಯೋಜನೆಗೆ ನಾನು ಸೇರುವ ಒಂದು ದಿನ ಮೊದಲು ಆಡಳಿತಾಧಿಕಾರಿಗೆ ವಾಹನ ಸೌಲಭ್ಯ ಇತ್ತು. ಆದರೆ ನಾನು ಕರ್ತವ್ಯಕ್ಕೆ ಹಾಜರಾದ ಬಳಿಕ ಆ ಸೌಲಭ್ಯವನ್ನೂ ಕಡಿತಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಸಕಾಲ ಯೋಜನೆಯ ಪ್ರಚಾರಕ್ಕಾಗಿ ಬಿಡುಗಡೆಯಾಗಬೇಕಿದ್ದ ₹ 2 ಕೋಟಿ ಹಣ ಬಿಡುಗಡೆ ಮಾಡದೆ ಅದರ ಹೊಣೆಯನ್ನು ನನ್ನ ಮೇಲೆ ಹಾಕಲಾಗಿದೆ. ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಹೆಚ್ಚಿನ ಕಚೇರಿಗಳಲ್ಲಿ ಇಲ್ಲ. ಹಿರಿಯ ಅಧಿಕಾರಿಗಳು ಮಾಫಿಯಾದಲ್ಲಿ ತೊಡಗಿದ್ದು, ಕಾನೂನು ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ನಿರಂತರ ಒತ್ತಡ, ಕಿರುಕುಳ ಸಹಿಸಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ಹಲವು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆವೊಂದೇ ನಮ್ಮ ಮುಂದಿರುವ ದಾರಿ. ಆದರೆ ನಾನು ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಇಲ್ಲದಿರುವುದರಿಂದ ನಮ್ಮಂತಹ ಕಿರಿಯ ಅಧಿಕಾರಿಗಳು ಲೋಕಾಯುಕ್ತವನ್ನು ಸಂಪರ್ಕಿಸಬೇಕಾಯಿತು. ಇದು ನನ್ನೊಬ್ಬನ ಸ್ಥಿತಿಯಲ್ಲ. ಅನೇಕ ಕೆಎಎಸ್ ಮತ್ತು ಕಿರಿಯ ಅಧಿಕಾರಿಗಳಿಗೆ ಐಎಎಸ್ ಅಧಿಕಾರಿಗಳು ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕವಾಗಿ ನೊಂದು ಅಧಿಕಾರಿಗಳ ವಿರುದ್ಧವೇ ದೂರು ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದೆ ಇನ್ನು ಏನೇನೋ ಅನುಭವಿಸಬೇಕೋ ಗೊತ್ತಿಲ್ಲ.

ಬಿಬಿಎಂಪಿ ಜಾಹೀರಾತು ಹಗರಣದ ಬಗ್ಗೆ ವರದಿ ನೀಡಿದಾಗ ಸಾಕಷ್ಟು ಕಿರುಕುಳ ಅನುಭವಿಸಿದ್ದೆ. ಆಗಲೇ ಮುಖ್ಯಮಂತ್ರಿಯವರ ಭೇಟಿಗೆ ಅವಕಾಶ ಕೋರಿದ್ದೆ. ಆದರೆ ಹಿರಿಯ ಅಧಿಕಾರಿಗಳು ಅದಕ್ಕೆ ತಡೆವೊಡ್ಡಿದರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ದೂರು ಸ್ವೀಕರಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ.’

Leave a Reply