12 ಮಂದಿಯ ಪ್ರಾಣ ಅಪಾಯದಲ್ಲಿದ್ದರೆ ಅತ್ತ ಮಸೀದಿಯಿಂದ ಪ್ರಚೋದನೆಯ ಧ್ವನಿ ಮೊಳಗುತ್ತಿತ್ತು!- ಮನದಟ್ಟಾಗಬೇಕಿರುವ ಮೇಜರ್ ಗೊಗೊಯ್ ಮಾತುಗಳಿವು

ಡಿಜಿಟಲ್ ಕನ್ನಡ ಟೀಮ್:

ಕಳೆದ ತಿಂಗಳು ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬಡ್ಗಾಂವ್ ಕ್ಷೇತ್ರದಲ್ಲಿನ ಉಪಚುನಾವಣೆ ವೇಳೆ ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ಭಾರತೀಯ ಸೇನೆ ಒಬ್ಬ ವ್ಯಕ್ತಿಯನ್ನು ತನ್ನ ಜೀಪಿಗೆ ಕಟ್ಟಿಹಾಕಿ ರಸ್ತೆಯಲ್ಲಿ ಸಾಗಿದ್ದ ವಿಡಿಯೋ ವೈರಲ್ ಆಗಿತ್ತು. ಆ ದಿನ ಉಟ್ಲಿಗಾಮ್ ಪ್ರದೇಶದ ಮಸೀದಿಯ ಮೈಕ್ ನಲ್ಲಿ ಸ್ಥಳೀಯ ಜನರನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿಸಿ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಪ್ರಯತ್ನಿಸಿದ ಪರಿ ಹಾಗೂ ಅದರಿಂದ ಸೇನೆ ಪಾರಾದ ರೀತಿಯನ್ನು ಮೇಜರ್ ಲೀತುಲ್ ಗೊಗೊಯ್ ನಿನ್ನೆ ಸುದ್ದಿಗೋಷ್ಠಿ ನಡೆಸಿ ವಿವರಿಸಿದ್ದಾರೆ. ಆ ಕಾರ್ಯಾಚರಣೆಯನ್ನು ಗೊಗೊಯ್ ಅವರು ವಿವರಿಸಿರೋದು ಹೀಗೆ…

‘ಅಂದು ಏಪ್ರಿಲ್ 9. ಬಡ್ಗಾಂವ್ ಕ್ಷೇತ್ರದಲ್ಲಿ ಉಪಚುನಾವಣೆ ನಿಗದಿಯಾಗಿದ್ದರಿಂದ ಶಾಂತಿಯುತ ಮತದಾನ ನಡೆಸುವ ಜವಾಬ್ದಾರಿ ನಮ್ಮ ಮೇಲಿತ್ತು. ಅಂದು ಕಲ್ಲುತೂರಾಟಗಾರರು ಮತದಾನವನ್ನು ವಿರೋಧಿಸಿ ಸಾಕಷ್ಟು ಹಿಂಸಾತ್ಮಕ ಪ್ರತಿಭಟನೆಗೆ ಮುಂದಾದರು.

ಬೆಳಗ್ಗೆ 9.15ರ ಸುಮಾರಿಗೆ ಗುಂಡಿಪುರ ಪೊಲೀಸ್ ಠಾಣೆಯಿಂದ ಐಟಿಬಿಪಿ ಅಧಿಕಾರಿಯೊಬ್ಬರು ಕರೆ ಮಾಡಿ, ಸುಮಾರು 400-500 ಮಂದಿ ಕಲ್ಲು ತೂರಾಟಗಾರರು ಮತಗಟ್ಟೆ ಹಾಗೂ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಮಾಹಿತಿ ಕೊಟ್ಟರು. ತಕ್ಷಣವೇ ನಾನು ಇತರೆ ಸಿಬ್ಬಂದಿಯೊಂದಿಗೆ ಗುಂಡಿಪುರಕ್ಕೆ ತೆರಳಿದೆವು. ಆ ಸ್ಥಳಕ್ಕೆ ಹೋಗುವಾಗ ಅನೇಕ ಕಡೆಗಳಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕಡೆಗೆ ನಾವು ಆ ಸ್ಥಳ ತಲುಪಿ ಅಲ್ಲಿನ ಗುಂಪನ್ನು ಚದುರಿಸಿದೆವು.

ಗುಂಡಿಪುರದಲ್ಲಿ ಕಾರ್ಯಾಚರಣೆ ಮುಕ್ತಾಯಗೊಳಿಸುತ್ತಿದ್ದಂತೆ ಉಟ್ಲಿಗಾಮ್ ಪ್ರದೇಶದಿಂದ ಮತ್ತೊಬ್ಬ ಐಟಿಬಿಪಿ ಅಧಿಕಾರಿಯಿಂದ 10.30ಕ್ಕೆ ಕರೆ ಬಂದಿತು. ಆ ಕರೆ ತೀರಾ ಗಾಬರಿಯಿಂದ ಕೂಡಿತ್ತು. ಸುಮಾರು 1200 ಕಲ್ಲುತೂರಾಟಗಾರರು ಮತಗಟ್ಟೆಯನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದ್ದು, ಕಲ್ಲುತೂರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮತಗಟ್ಟೆ ಸುಟ್ಟುಹಾಕಲು ಪೆಟ್ರೋಲ್ ಬಾಂಬ್ ಬಳಸುತ್ತಿದ್ದಾರೆ ಎಂದು ಅಧಿಕಾರಿ ಗಾಬರಿಯ ಧ್ವನಿಯಿಂದ ಮಾಹಿತಿ ನೀಡಿದರು. ತಕ್ಷಣವೇ ನಮ್ಮ ತಂಡ ಉಟ್ಲಿಗಾಮ್ ಗೆ ಹೊರಟು 30 ನಿಮಿಷಗಳಲ್ಲಿ ಅಲ್ಲಿಗೆ ತಲುಪಿದೆವು. ಅಲ್ಲೂ ಸಹ ಅನೇಕ ರಸ್ತೆಗಳು ಮುಚ್ಚಿದ್ದವು. ನಾವು ಆ ಪ್ರದೇಶ ತಲುಪುತ್ತಿದ್ದಂತೆ ಅಲ್ಲಿದ್ದ ಜನರು ಕಲ್ಲುತೂರಾಟ ನಡೆಸಲು ಆರಂಭಿಸಿದರು. ಆ ಪೈಕಿ ಮಹಿಳೆಯರು ಹಾಗೂ ಮಕ್ಕಳೂ ಸಹ ಭಾರತ ವಿರೋಧಿ ಘೋಷಣೆ ಕೂಗುತ್ತ ಕಲ್ಲು ತೂರಾಟ ಮಾಡುತ್ತಿದ್ದರು.

ಆಗ ನಮ್ಮ ವಾಹನದಲ್ಲಿದ್ದ ಮೇಗಾ ಫೋನ್ ಮೂಲಕ ನಾವು ಕೇವಲ ಅಧಿಕಾರಿಗಳ ರಕ್ಷಣೆಗೆ ಮಾತ್ರ ಆಗಮಿಸಿರುವುದಾಗಿ ಪ್ರಕಟಿಸಿದೆವು. ಆದರೂ ಕಟ್ಟಡದ ಮೇಲ್ಚಾವಣೆ ಮೇಲಿಂದ ನಿಂತು ಕಲ್ಲು ತೂರಾಟ ಮಾಡುತ್ತಿದ್ದರು. ಆಗ ಪರಿಸ್ಥಿತಿ ತೀವ್ರ ಮಟ್ಟದಲ್ಲಿ ಬಿಗಡಾಯಿಸಿತ್ತು. ಮಾಡು ಇಲ್ಲವೆ ಮಡಿ ಎಂಬ ವಾತಾವರಣ ನಮ್ಮ ಮುಂದಿತ್ತು. ಕಲ್ಲು ತೂರಾಟಗಾರರ ನಡುವೆ ಸಿಕ್ಕಿದ್ದ ನನ್ನ ಸಹೋದ್ಯೋಗಿಗಳನ್ನು ರಕ್ಷಿಸಲೇಬೇಕು ಎಂದು ನಿರ್ಧರಿಸಿದೆ.

ಆ ಪರಿಸ್ಥಿತಿಯಲ್ಲಿ ನಮ್ಮಿಂದ 30 ಮೀಟರ್ ದೂರದಲ್ಲಿ ಒಬ್ಬ ವ್ಯಕ್ತಿ ಭಾರತ ವಿರೋಧಿ ಘೋಷಣೆ ಕೂಗುತ್ತಾ ಎಲ್ಲರನ್ನು ಹಿಂಸಾಚಾರಕ್ಕೆ ಉತ್ತೇಜಿಸುತ್ತಿದ್ದ. ಆತನನ್ನು ಹಿಡಿದು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ತಕ್ಷಣವೆ ಐವರು ಸಿಬ್ಬಂದಿಗೆ ಸೂಚನೆ ನೀಡಿದೆ. ಕಲ್ಲುತೂರಾಟದ ನಡುವೆಯೂ ವಾಹನದಿಂದ ಇಳಿದು ಆತನನ್ನು ಹಿಡಿಯಲು ಓಡಿದೆವು. ನಮ್ಮನ್ನು ಗಮನಿಸಿದ ಆತ ಓಡಲು ಶುರು ಮಾಡಿದ. ಆತನ ರಕ್ಷಣೆಗೆ ಮತ್ತೊಬ್ಬ ಬೈಕಿನಲ್ಲಿ ಬಂದಿದ್ದ. ಆದರೆ ಅವರ ಪ್ರಯತ್ನ ವಿಫಲವಾಗಿ ಆ ವ್ಯಕ್ತಿ ಸೆರೆ ಸಿಕ್ಕ. ನಂತರ ನಡೆದ ತನಿಖೆಯಲ್ಲಿ ಆತ ಫಾರೂಕ್ ಅಹ್ಮದ್ ದಾರ್ ಎಂದು ತಿಳಿದು ಬಂದಿತು. ಆತ ಕಲ್ಲುತೂರಾಟ ನಡೆಸುತ್ತಿದ್ದ ಗುಂಪಿನ ನಾಯಕನಾಗಿದ್ದ. ಫಾರೂಕ್ ನನ್ನು ಹಿಡಿಯುತ್ತಿದ್ದಂತೆ ಗುಂಪಾಗಿ ಸೇರಿದ್ದವರ ಪೈಕಿ ಕೆಲವರು ಓಡಲು ಆರಂಭಿಸಿದರು. ಆಗ ಅಲ್ಲಿದ್ದ ಮೈನ್ ಪ್ರೊಟೆಕ್ಟೆಡ್ ವಾಹನದ ಸಹಾಯದೊಂದಿಗೆ ನಾವು ಮತಗಟ್ಟೆಯನ್ನು ತಲುಪಿದೆವು. ನಾವು ಅಲ್ಲಿದ್ದ ಮತಗಟ್ಟೆಯೊಳಗೆ ಹೋಗಿ ಅಲ್ಲಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆಯೆ ಎಂದು ಪರಿಶೀಲಿಸಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಮುಂದಾದೆವು.

ನಾವು ವಾಪಸ್ ತೆರಳುವಾಗ ಅಲ್ಲಿನ ಮಸೀದಿಯ ಮೈಕಿನ ಮೂಲಕ ಗಟ್ಟಿಯಾದ ಧ್ವನಿಯಲ್ಲಿ ಸಂದೇಶ ರವಾನಿಸಲಾಗುತ್ತಿತ್ತು. ಹೆಚ್ಚಿನ ಜನರನ್ನು ಸೇರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಮೈಕಿನಲ್ಲಿ ಸ್ಥಳೀಯ ಭಾಷೆಯಲ್ಲಿ ಮಾತನಾಡಿದ್ದು ನಮಗೆ ಅರ್ಥವಾಗಲಿಲ್ಲ. ಆದರೆ ಅವರ ಕೂಗಾಟ ಜನರನ್ನು ಮತ್ತಷ್ಟು ಹಿಂಸಾಚಾರಕ್ಕೆ ಪ್ರೇರಣೆಯಾಗುತ್ತಿದ್ದದ್ದು ಖಚಿತವಾಗಿತ್ತು. ನಾವು ಅಲ್ಲಿಂದ ತೆರಳುವ ಸಂದರ್ಭದಲ್ಲಿ ನಮ್ಮ ಮೈನ್ ಪ್ರೊಟೆಕ್ಟೆಡ್ ವಾಹನ ಕೆಸರಿನಲ್ಲಿ ಹೂತುಹೋಯಿತು. ಆಗ ಅಲ್ಲಿದ್ದ ಜನರು ಮತ್ತೆ ಕಲ್ಲು ತೂರಾಟ ಆರಂಭಿಸಿದರು. ಅನೇಕರು ನಮ್ಮತ್ತ ಪೆಟ್ರೋಲ್ ಬಾಂಬ್ ಎಸೆದರು. ಅದೃಷ್ಟವಶಾತ್ ಆ ಪೆಟ್ರೋಲ್ ಬಾಂಬ್ ಗಳು ಸ್ಫೋಟಗೊಳ್ಳಲಿಲ್ಲ.

ಹೀಗೆ ಪರಿಸ್ಥಿತಿ ಕೈ ಮೀರುವ ಹಂತದಲ್ಲಿ ನಾನು ಮತ್ತೆ ಜನರಿಗೆ ಕರೆ ಕೊಟ್ಟು ಯಾವುದೇ ತೊಂದರೆ ನೀಡದಂತೆ ಹೇಳಿದೆ. ಆದರೆ ನನ್ನ ಮಾತು ಕೇಳುವ ಪರಿಸ್ಥಿತಿಯಲ್ಲಿ ಅವರು ಇರಲಿಲ್ಲ. ಆ ಸಂದರ್ಭದಲ್ಲಿ ನನ್ನ ಮನಸ್ಸಿಗೆ ಒಂದು ಆಲೋಚನೆ ಬಂದಿತು. ನಮ್ಮ ಬಳಿ ಸೆರೆ ಸಿಕ್ಕಿರುವ ವ್ಯಕ್ತಿ ಈ ಪ್ರದೇಶದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಸೀರ್ ಪ್ರದೇಶದ ನಿವಾಸಿಯಾಗಿದ್ದ. ಹೀಗಾಗಿ ಅವರನ್ನು ಜೀಪಿಗೆ ಕಟ್ಟಲು ನಿರ್ಧರಿಸಿದೆ. ಆತನನ್ನು ಜೀಪಿಗೆ ಕಟ್ಟುತ್ತಿದ್ದಂತೆ ಕಲ್ಲುತೂರಾಟ ದಿಢೀರನೆ ನಿಂತು ಹೋಯಿತು.

ಆ ಸಂದರ್ಭದಲ್ಲಿ ನಮ್ಮ ಕೈಯಲ್ಲಿ ಅಸ್ತ್ರಗಳಿದ್ದವು. ನಾವು ಅದನ್ನು ಪ್ರಯೋಗಿಸಿದ್ದರೆ, ಕನಿಷ್ಠ 12 ಮಂದಿಯಾದರೂ ಸಾಯುವ ಸಾಧ್ಯತೆ ಇತ್ತು. ಹೀಗಾಗಿ ಅಸ್ತ್ರ ಪ್ರಯೋಗಕ್ಕೆ ಮುಂದಾಗದೇ ಫಾರೂಕ್ ನನ್ನು ಜೀಪಿಗೆ ಕಟ್ಟಲು ನಿರ್ಧರಿಸಿದೆವು. ಇದರಿಂದ 4 ಚುನಾವಣ ಅಧಿಕಾರಿಗಳು, 7 ಆಟಿಬಿಪಿ ಸಿಬ್ಬಂದಿ ಹಾಗೂ 1 ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿಯನ್ನು ರಕ್ಷಿಸಿದೆವು. ಇದರ ಜತೆಗೆ ಗುಂಡು ಹಾರಿಸದೇ ಇದ್ದರಿಂದ ಅನೇಕ ಸ್ಥಳೀಯರ ಪ್ರಾಣವೂ ಉಳಿಯಿತು.’

Leave a Reply