ತಂತ್ರಜ್ಞಾನ ಕಳ್ಳತನ ಮಾಡಿ ಚೀನಾಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಮೆರಿಕದಲ್ಲಿ 7 ಮಂದಿ ಬಂಧನ

ಡಿಜಿಟಲ್ ಕನ್ನಡ ಟೀಮ್:

ಕಡಲ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪನಿಯ ರಹಸ್ಯ ಮಾಹಿತಿಗಳನ್ನು ಕಳ್ಳತನ ಮಾಡಿ ಚೀನಾ ಮೂಲದ ಕಂಪನಿಗೆ ನೀಡುವ ಆರೋಪದ ಮೇಲೆ ಅಮೆರಿಕದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಆ ಪೈಕಿ ಮೂವರನ್ನು ಹೊಸ್ಟನ್ ನಲ್ಲಿ, ಇಬ್ಬರನ್ನು ವಾಶಿಗ್ಟನ್ ಹಾಗೂ ಒಬ್ಬನನ್ನು ಮ್ಯಾಸಚುಸೆಟ್ಸ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ಚೀನಾ ಪ್ರಜೆಯಾಗಿದ್ದು, ಆತ ಚೀನಾ ಮೂಲದ ನಿರ್ಮಾಣ ಕಂಪನಿಯ ಸಿಬ್ಬಂದಿ ಎಂದು ಹೇಳಲಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಆರಂಭಿಸಲಾಗಿದೆ. ನ್ಯಾಯಾಲಯಕ್ಕೆ ನೀಡಿರುವ ದಾಖಲೆಗಳ ಪ್ರಕಾರ, ಹೆಸರು ಬಹಿರಂಗವಾಗದ ಕಡಲ ತಂತ್ರಜ್ಞಾನ ಕಂಪನಿಯು ವಿಮಾನಯಾನ, ನೌಕಾದಳ, ತೈಲೋತ್ಪನ್ನ, ಜಲಾಂತರ್ಗಾಮಿಯಂತಹ ನೀರಿನೊಳಗೆ ಸಾಗುವ ಯಂತ್ರಗಳಿಗೆ ಸಂಬಂಧಿಸಿದಂತೆ ಒಂದು ನೊರೆಯಂತಹ ವಸ್ತುವನ್ನು ಕಂಡು ಹಿಡಿದಿದೆ. ಈ ತಂತ್ರಜ್ಞಾನವನ್ನು ಮಾಹಿತಿ ಕಳ್ಳತನ ಮಾಡಿ, ಅದನ್ನು ಚೀನಾ ಕಂಪನಿಗೆ ನೀಡುವ ಪ್ರಯತ್ನಕ್ಕೆ ಈ ಬಂಧಿತರು ಕೈ ಹಾಕಿದ್ದರು ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ಚೀನಾದಲ್ಲಿ ಅಮೆರಿಕದ ಗುಪ್ತಚರ ಇಲಾಖೆಯ ಸುಮಾರು 20 ಗೂಢಚಾರಿಗಳ ಪೈಕಿ ಕೆಲವರನ್ನು ಹತ್ಯೆ ಮಾಡಿದ್ದರೆ, ಉಳಿದವರನ್ನು ಜೈಲಿನಲ್ಲಿಟ್ಟಿರುವ ಬಗ್ಗೆ ಡಿಜಿಟಲ್ ಕನ್ನಡ ವರದಿ ನೀಡಿತ್ತು. ಈಗ ಚೀನಾ ಮೂಲದ ಕಂಪನಿ ಸಿಬ್ಬಂದಿ ಅಮೆರಿಕದ ತಂತ್ರಜ್ಞಾನವನ್ನು ಕದಿಯಲು ಮುಂದಾಗಿ ಸಿಕ್ಕಿ ಬಿದ್ದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪರೋಕ್ಷ ಸಮರಗಳು ನಡೆಯುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ.

Leave a Reply