ಪ್ರದೇಶ ಕಾಂಗ್ರೆಸ್ ಸಾರಥ್ಯಕ್ಕೆ ಡಿ.ಕೆ.ಶಿವಕುಮಾರ್- ಎಸ್.ಆರ್ ಪಾಟೀಲ್ ನಡುವೆ ಪೈಪೋಟಿ

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ವಿಧಾನಸಭಾ ಚುನಾವಣೆ  ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಎಸ್. ಆರ್. ಪಾಟೀಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ರಾಜ್ಯದ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ವೇಣುಗೋಪಾಲ್ ಕಳೆದ ಐದು ದಿನಗಳಿಂದ ತಾಲ್ಲೂಕು, ಜಿಲ್ಲಾಧ್ಯಕ್ಷರು, ಸಚಿವರು, ಶಾಸಕರು, ಸಂಸದರೊಟ್ಟಿಗೆ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಆದರೂ ಪರಮೇಶ್ವರ್ ಸ್ಥಾನಕ್ಕೆ ಪರ್ಯಾಯ ನಾಯಕನ ಆಯ್ಕೆಗಾಗಿ ಸಾಕಷ್ಠು ಕಸರತ್ತು ನಡೆಸುತ್ತಿದ್ದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಜಿಲ್ಲಾಧ್ಯಕ್ಷರು, ಕೆಳಹಂತದ ಕಾರ್ಯಕರ್ತರು, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಮುಖ್ಯಮಂತ್ರಿ  ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರು ಇವರ ವಿರುದ್ಧವಾಗಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ಕೊಟ್ಟಿವೆ.

ಈ ಸಂಬಂಧ ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈಗಾಗಲೇ ಎಸ್. ಆರ್. ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು, ಅವರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವ ಉದ್ದೇಶದಿಂದ ಪಾಟೀಲ್ ಅವರೊಬ್ಬರ ಹೆಸರನ್ನೇ ಪ್ರದೇಶ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದೇನೆ. ಒಮ್ಮೆ ಒಬ್ಬರ ಹೆಸರು ಶಿಫಾರಸು ಮಾಡಿದ ನಂತರ ಮತ್ತೊಬ್ಬರ ಹೆಸರನ್ನು ನೀಡುವುದಿಲ್ಲ. ಪಕ್ಷದ ವರಿಷ್ಠರು ಶಿವಕುಮಾರ್ ಸೇರಿದಂತೆ ಯಾರನ್ನೇ ನೇಮಿಸಿದರೂ ಅವರಿಗೆ ಸಹಕಾರ ಕೊಡುತ್ತೇನೆ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇತ್ತ ಒಕ್ಕಲಿಗ ಸಮುದಾಯದ ಸಚಿವರು ಮತ್ತು ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಹಾಲಿ ಅಧ್ಯಕ್ಷ ಪರಮೇಶ್ವರ್ ಅವರು, ಶಿವಕುಮಾರ್ ಪರ ಒಲವು ತೋರಿಲ್ಲ. ಆದರೆ ಸಂಸದರು ಇವರ ಹೆಸರನ್ನು ಬೆಂಬಲಿಸಿದ್ದಾರೆ. ಹೀಗಾಗಿ ವೇಣುಗೋಪಾಲ್ ಅವರಿಗೆ ಒಮ್ಮತದ ನಿರ್ಧಾರಕ್ಕೆ ಬರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈಗಾಗಲೇ ಸ್ವತಃ ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಎರಡು ಬಾರಿ ಭೇಟಿ ಮಾಡಿ ತಮ್ಮ ಹೆಸರನ್ನು ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಶಿವಕುಮಾರ್ ಅವರಿಗೆ ಪ್ರತಿಕ್ರಿಯೆ ನೀಡಿರುವ ವೇಣುಗೋಪಾಲ್, ‘ಈ ಸಂದರ್ಭದಲ್ಲಿ ಶೇ.40 ರಷ್ಟು ನಾಯಕರು ನಿಮ್ಮ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ನಾನು ಹೇಗೆ ನಿರ್ಣಯ ಕೈಗೊಳ್ಳಲಿ. ಅಧ್ಯಕ್ಷ ಗಾದಿ ವಿಷಯದಲ್ಲಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ. ನೀವು ಒಳ್ಳೆಯ ಸಂಘಟಕರು ಎನ್ನುವುದು ತಿಳಿದಿದ್ದೇನೆ, ನಿಮ್ಮ ಜೊತೆ ಕೆಲಸವನ್ನೂ ಮಾಡಿದ್ದೇನೆ. ಆದರೆ ನಾನು ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ವರಿಷ್ಠರೇ ಅಂತಿಮ ನಿರ್ಧಾರ ಕೈಗೊಳ್ಳಬೇಕು’ ಎಂದು ಡಿ.ಕೆ. ಅವರಿಗೆ ಕಿವಿಮಾತು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ  ರಾಹುಲ್ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕ ಹೊಂದುತ್ತಿರುವ ಡಿಕೆಶಿ ಅವರು, ರಾಜ್ಯ ನಾಯಕರು ತಮ್ಮ ಕೈಹಿಡಿಯದಿದ್ದರೆ, ದೆಹಲಿಯಲ್ಲೇ ಸ್ಥಾನ ಗಿಟ್ಟಿಸಿಕೊಳ್ಳಲು ಕಳೆದ ಮೂರು ದಿನಗಳಿಂದ ರಾಷ್ಟ್ರದ ರಾಜಧಾನಿಯಲ್ಲೇ ಬೀಡುಬಿಟ್ಟಿದ್ದು, ಇಂದಷ್ಟೇ ನಗರಕ್ಕೆ ಹಿಂದಿರುಗಿದ್ದಾರೆ. ಸಂಘಟನೆ ಮತ್ತು ಹೊಸ ನಾಯಕನ ಅನ್ವೇಷಣೆಗೆ ಸಂಬಂಧಿಸಿದಂತೆ ಎಲ್ಲಾ ಕಸರತ್ತು ಮುಗಿಸಿರುವ ವೇಣುಗೋಪಾಲ್, ಒಂದೆರಡು ದಿನದಲ್ಲೇ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಿದ್ದಾರೆ. ಈ ವರದಿ ಆಧಾರದ ಮೇಲೆ ಪಕ್ಷದ ವರಿಷ್ಠರು ಶನಿವಾರ ಇಲ್ಲವೇ ಭಾನುವಾರ ರಾಜ್ಯದ ನಾಯಕರನ್ನು ಕರೆಸಿ, ಅವರೊಟ್ಟಿಗೆ ಸಮಾಲೋಚಿಸಿ ತಿಂಗಳಾಂತ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ಹೆಸರನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ.

1 COMMENT

Leave a Reply