ಭಾರತದಲ್ಲೇ ಖರೀದಿಸಿ: ಸ್ಥಳೀಯ ಉತ್ಪಾದಕರಿಗೆ ಬಲ ತುಂಬಲಿರುವ ಮೋದಿ ಸರ್ಕಾರದ ನಿರ್ಧಾರ

ಡಿಜಿಟಲ್ ಕನ್ನಡ ಟೀಮ್:

ತನ್ನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಮೆರಿಕದ ಸೂತ್ರವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಅಮೆರಿಕದಲ್ಲಿ ತನ್ನ ದೇಶದಲ್ಲಿ ಉತ್ಪಾದನೆಯಾದ ವಸ್ತುವನ್ನೇ ಕೊಳ್ಳಲು ಮೊದಲು ಆದ್ಯತೆ ನೀಡಲಾಗುತ್ತದೆ. ಅದೇ ಮಾದರಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಬುಧವಾರ ಕೇಂದ್ರ ಸಚಿವ ಸಂಪುಟ ‘ಮೇಕ್ ಇನ್ ಇಂಡಿಯಾಗೆ ಆದ್ಯತೆಯ ರಾಷ್ಟ್ರೀಯ ಸರ್ಕಾರಿ ನೀತಿಗೆ’ ಒಪ್ಪಿಗೆ ನೀಡಿದೆ. ಅದರೊಂದಿಗೆ ‘ಬೈ ಇನ್ ಇಂಡಿಯಾ’ (ಭಾರತದಲ್ಲೇ ಖರೀದಿಸಿ) ಎಂಬ ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ನೀತಿಯ ಮೂಲಕ ಸರ್ಕಾರಿ ಸಂಸ್ಥೆಗಳು, ಕಂಪನಿಗಳು ಹಾಗೂ ಸರ್ಕಾರದ ವ್ಯಾಪ್ತಿಯಲ್ಲಿ ಒಳಪಡುವ ಸ್ವಾಯತ್ತ ಸಂಸ್ಥೆಗಳು ನಮ್ಮ ದೇಶದಲ್ಲೇ ತಯಾರಾದ ಉತ್ಪನ್ನಗಳ ಖರೀದಿಗೆ ಮೊದಲ ಆದ್ಯತೆ ನೀಡಲಾಗುವುದು. ಇದರಿಂದ ವರ್ಷಕ್ಕೆ ₹ 2 ಟ್ರಿಲಿಯನ್ (2 ಲಕ್ಷ ಕೋಟಿ) ಯಷ್ಟು ವ್ಯವಹಾರವನ್ನು ನಮ್ಮಲ್ಲಿ ಉತ್ಪಾದಕರ ಜತೆಗೆ ನಡೆಸುವ ಗುರಿ ಇದೆ. ಸರ್ಕಾರಿ ಸ್ವಾಮ್ಯದ ಎಲ್ಲ ಕ್ಷೇತ್ರಗಳಲ್ಲಿ ₹ 5 ಲಕ್ಷಕ್ಕೂ ಮೇಲ್ಪಟ್ಟ ಪ್ರತಿ ಖರೀದಿಗೂ ಈ ನೀತಿಯನ್ನು ಕಡ್ಡಾಯವಾಗಿದೆ. ₹ 5 ಲಕ್ಷಕ್ಕಿಂತ ಕಡಿಮೆ ಮೊತ್ತದ ಖರೀದಿಗೆ ಕೇಂದ್ರ ಈ ನೀತಿಯಿಂದ ವಿನಾಯಿತಿ ನೀಡಿದೆ.

ಇದರಿಂದ ಸ್ಥಳೀಯ ಉತ್ಪನ್ನ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ಉದ್ಯೋಗ ಸೃಷ್ಟಿಗೂ ಸಾಕಷ್ಟು ನೆರವಾಗಲಿದೆ. ಈ ನಿರ್ಧಾರದ ಕುರಿತಾಗಿ ಸಚಿವ ಸಂಪುಟ ಹೇಳಿಕೆ ಪ್ರಕಟಿಸಿದ್ದು, ‘ಈ ನಿರ್ಧಾರದಿಂದ ಸ್ಥಳೀಯ ಉತ್ಪಾದಕರಿಗೆ ಬಂಡವಾಳ ಹರಿವು ಹಾಗೂ ತಂತ್ರಜ್ಞಾನ ಪೂರೈಕೆಗೆ ನೆರವಾಗಲಿದ್ದು, ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡಿತಂದಾಗಲಿದೆ’ ಎಂದು ತಿಳಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಸ್ಥಳೀಯ ಉತ್ಪಾದಕರಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ಸಿಗಲಿದ್ದು, ಜನರಲ್ಲಿ ಸ್ಥಳೀಯ ಉತ್ಪಾದಕರ ಮೇಲೆ ವಿಶ್ವಾಸ ಮೂಡಿಸಲು ನೆರವಾಗುತ್ತದೆ ಎಂಬುದು ಈ ಕಾರ್ಕ್ರಮದ ಉದ್ದೇಶ.

Leave a Reply