ಟೀಂ ಇಂಡಿಯಾ ತರಬೇತುದಾರ ಸ್ಥಾನಕ್ಕೆ ಆಹ್ವಾನ ಕರೆದ ಬಿಸಿಸಿಐ, ಕೋಚ್ ಜಾಗದಿಂದ ಕುಂಬ್ಳೆ ನಿರ್ಗಮನ ಖಚಿತ, ಇದಕ್ಕೆಲ್ಲಾ ಕಾರಣವೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುತ್ತಿದ್ದಂತೆ ಇತ್ತ ಬಿಸಿಸಿಐ ತಂಡದ ಮುಂದಿನ ಕೋಚ್ ಆಯ್ಕೆಗೆ ಬಹಿರಂಗವಾಗಿ ಆಹ್ವಾನ ಪ್ರಕಟಿಸಿದೆ. ಅದರೊಂದಿಗೆ ಚಾಂಪಿಯನ್ಸ್ ಟ್ರೋಫಿ ನಂತರ ಅನಿಲ್ ಕುಂಬ್ಳೆ ಟೀಂ ಇಂಡಿಯಾ ತರಬೇತುದಾರನಾಗಿ ಮುಂದುವರಿಯುವುದಿಲ್ಲ ಎಂಬ ಅಂಶ ಸ್ಪಷ್ಟವಾಗಿದೆ.

ಕಳೆದ ವರ್ಷ ಒಂದು ವರ್ಷಗಳ ಅವಧಿಗೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದರು ಅನಿಲ್ ಕುಂಬ್ಳೆ ಅವರ ಅವಧಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಮುಕ್ತಾಯವಾಗಲಿದೆ. ಕಳೆದ ಒಂದು ವರ್ಷಗಳಲ್ಲಿ ಟೀಂ ಇಂಡಿಯಾ ಅತ್ಯದ್ಭುತ ಪ್ರದರ್ಶನ ನೀಡಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಸಾರ್ವಭೌಮನಾಗಿ ಮೆರೆದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ತಂಡದ ಈ ಯಶಸ್ಸಿನಲ್ಲಿ ಅನಿಲ್ ಕುಂಬ್ಳೆ ಅವರ ಪಾತ್ರ ನಿಜಕ್ಕೂ ಮಹತ್ವದ್ದಾಗಿದೆ. ಭಾರತ ತಂಡ ಕಳೆದ ಒಂದು ವರ್ಷದ ಅವಧಿಯಲ್ಲಿ 17 ಟೆಸ್ಟ್ ಪಂದ್ಯಗಳನ್ನಾಡಿದ್ದು, ಆ ಪೈಕಿ 12 ಪಂದ್ಯಗಳಲ್ಲಿ ಗೆದ್ದರೆ, 1 ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದೆ. ಈ ಅತ್ಯದ್ಭುತ ಪ್ರದರ್ಶನ ನೋಡಿದರೆ ಅನಿಲ್ ಕುಂಬ್ಳೆ ಸಹಜವಾಗಿಯೇ ಈ ಸ್ಥಾನದಲ್ಲಿ ಮುಂದುವರಿಯಲು ಬಿಸಿಸಿಐನಿಂದ ಒಪ್ಪಂದ ವಿಸ್ತರಣೆಗೆ ಅರ್ಹರರು. ಆದರೆ, ಬಿಸಿಸಿಐ ಮಾತ್ರ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿ ಮುಂದುವರಿಸಲು ಇಚ್ಛಿಸುತ್ತಿಲ್ಲ.

ಸದ್ಯ ಬಿಸಿಸಿಐ ಪ್ರಕಟಿಸಿರುವ ಆಹ್ವಾನದಲ್ಲಿ ಕೋಚ್ ಹುದ್ದೆ ಆಕಾಂಕ್ಷಿಗಳು ಮೇ 31ರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿಸಿದೆ. ಈ ಬಾರಿ ಭಾರತ ಕಿರಿಯ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹಿರಿಯರ ತಂಡದ ಗುರುವಿನ ಸ್ಥಾನ ಅಲಂಕರಿಸಬಹುದು ಎಂಬ ನಿರೀಕ್ಷೆ ಹಲವರದು. ಕಳೆದ ವರ್ಷವೂ ಕೋಚ್ ಆಯ್ಕೆ ಪ್ರಕ್ರಿಯೆಗೆ ಆಹ್ವಾನ ಕರೆದಾಗ ಎಲ್ಲರ ದೃಷ್ಟಿ ನೆಟ್ಟಿದ್ದು ರಾಹುಲ್ ಕಡೆಗೆ. ಆದರೆ ಭವಿಷ್ಯದ ಭಾರತೀಯ ಕ್ರಿಕೆಟರ್ ಗಳನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ದ್ರಾವಿಡ್ ಕೋಚ್ ಸ್ಥಾನಕ್ಕೆ ಅರ್ಜಿಯನ್ನೂ ಹಾಕಿರಲಿಲ್ಲ. ಈ ಬಾರಿಯೂ ಅದೇ ರೀತಿ ನಿರೀಕ್ಷೆಗಳಿದ್ದು ರಾಹುಲ್ ಈ ಕುರಿತಾಗಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ. ಉಳಿದಂತೆ ಕಳೆದ ವರ್ಷ ಕೋಚ್ ಸ್ಥಾನ ರೇಸ್ ನಲ್ಲಿ ಅನಿಲ್ ಕುಂಬ್ಳೆ ಜತೆಗೆ ಪೈಪೋಟಿ ನೀಡಿದ್ದ ರವಿಶಾಸ್ತ್ರಿ ಈ ಬಾರಿ ಮತ್ತೊಂದು ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚಿದೆ.

ಹೀಗೆ ಅನಿಲ್ ಕುಂಬ್ಳೆ ಕೋಚ್ ಸ್ಥಾನ ನಿರ್ಗಮನದ ನಂತರ ಆ ಜಾಗ ಯಾರು ತುಂಬುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಈ ಲೆಕ್ಕಾಚಾರದ ಜತೆಗೆ ಎಲ್ಲರಲ್ಲೂ ಒಂದು ಪ್ರಶ್ನೆ ಕಾಡುತ್ತಿದೆ. ಅದು, ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ಕುಂಬ್ಳೆ ಅವರಿಗೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿರುವುದೇಕೆ? ಎಂದು.

ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಬಿಸಿಸಿಐ ಕುಂಬ್ಳೆ ವಿರುದ್ಧ ಮುನಿದಿರುವುದೇಕೆ ಎಂಬುದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಬರಲಿದೆ. ಅದು ಏನೆಂದರೆ ಆಟಗಾರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಬೇಡಿಕೆ ವಿಷಯದಲ್ಲಿ ಕುಂಬ್ಳೆ ಮುಂದಾಳತ್ವ ವಹಿಸಿರುವುದು. ಹೌದು, ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ಮುನ್ನ ಬಿಸಿಸಿಐ ಆಡಳಿತ ಸಮಿತಿಯನ್ನು ಭೇಟಿ ಮಾಡಿದ್ದ ಅನಿಲ್ ಕುಂಬ್ಳೆ, ಎ ಶ್ರೇಣಿಯ ಒಪ್ಪಂದ ಮಾಡಿಕೊಳ್ಳುವ ಆಟಗಾರರ ವೇತನದಲ್ಲಿ ಶೇ.150 ರಷ್ಟು ಹೆಚ್ಚಳವಾಗಬೇಕು. ಜತೆಗೆ ತಮ್ಮ ಪ್ರಸ್ತುತ ವಾರ್ಷಿಕ ವೇತನವನ್ನು ₹ 6.25 ಕೋಟಿಯಿಂದ ₹ 7.50 ಕೋಟಿಗೆ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ ಭಾರತ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸಹ ದೇಶಿ ಕ್ರಿಕೆಟ್ ನಲ್ಲಿ ಆಟಗಾರರ ಸಂಭಾವನೆ ಹೆಚ್ಚಳ ಮಾಡುವ ವಿಷಯದಲ್ಲಿ ಕುಂಬ್ಳೆ ಮುಂದಾಳತ್ವ ವಹಿಸಿ ಬಿಸಿಸಿಐ ಮುಂದೆ ಬೇಡಿಕೆ ಇಡಬೇಕು ಎಂದು ಬಹಿರಂಗ ಹೇಳಿಕೆಯನ್ನು ಕೊಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಅನಿಲ್ ಕುಂಬ್ಳೆ ಕುರಿತಾಗಿ ಬಿಸಿಸಿಐ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಂದಹಾಗೆ, ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ಮತ್ತೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಒಂದು ವೇಳೆ ಅರ್ಜಿ ಸಲ್ಲಿಸಿದರೆ ಕುಂಬ್ಳೆ ನೇರವಾಗಿ ಅಂತಿಮ ಸಂಭಾವ್ಯರ ಪಟ್ಟಿಗೆ ಅರ್ಹತೆ ಪಡೆಯಲಿದ್ದಾರೆ. ಆದರೆ ಬಿಸಿಸಿಐ ಅಧಿಕಾರಿಗಳಿಗೆ ಕುಂಬ್ಳೆ ಅವರನ್ನು ಮತ್ತೆ ಕೋಚ್ ಹುದ್ದೆ ನೀಡಲು ಮನಸ್ಸಿದ್ದಿದ್ದರೆ, ಅವರ ಒಪ್ಪಂದ ಮುಂದುವರಿಸುತ್ತಿದ್ದರೇ ಹೊರತು ಅರ್ಜಿ ಆಹ್ವಾನ ಪ್ರಕಟಿಸುತ್ತಿರಲಿಲ್ಲ ಎಂದು ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

Leave a Reply