ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡಿಗೆ ಹಾರಿದ ಟೀಂ ಇಂಡಿಯಾ, ಕೇದಾರ್ ಜಾಧವ್- ರೋಹಿತ್ ಶರ್ಮಾ ಭಾರತದಲ್ಲೇ ಉಳಿದಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ತಿಂಗಳು ಆರಂಭವಾಗಲಿರುವ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡ ನಿನ್ನೆ ಸಂಜೆ ವಿಮಾನದ ಮೂಲಕ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿತು. ಆದರೆ ಟೀಂ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೇದಾರ್ ಜಾಧವ್ ಮಾತ್ರ ತಂಡದ ಜತೆ ಪ್ರಯಾಣ ಬೆಳೆಸದೇ ಭಾರತದಲ್ಲಿಯೇ ಉಳಿದಿದ್ದಾರೆ.

ಈ ಇಬ್ಬರು ಆಟಗಾರರು ಇಂಗ್ಲೆಂಡಿಗೆ ಪ್ರಯಾಣ ಬೆಳೆಸದಿರಲು ಪ್ರತ್ಯೇಕ ಕಾರಣಗಳಿವೆ. ಅದೇನೆಂದರೆ, ಆರಂಭಿಕ ರೋಹಿತ್ ಶರ್ಮಾ ತಮ್ಮ ಸಹೋದರ ಸಂಬಂಧಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ತಂಡದ ಜತೆ ಪ್ರಯಾಣ ಬೆಳೆಸದೇ ತಡವಾಗಿ ಇಂಗ್ಲೆಂಡ್ ಗೆ ತೆರಳಲು ನಿರ್ಧರಿಸಿದ್ದಾರೆ. ಈ ಕುರಿತಾಗಿ ಬಿಸಿಸಿಐಗೆ ಮನವಿ ಮಾಡಿ ಒಪ್ಪಿಗೆಯನ್ನೂ ಪಡೆದಿದ್ದಾರೆ.

ಇನ್ನು ಕೇದಾರ್ ಜಾಧವ್ ಅವರಿಗೆ ಸರಿಯಾದ ಸಮಯದಲ್ಲಿ ವಿಸಾ ಸಿಗದ ಕಾರಣ ಜಾಧವ್ ತಂಡದೊಂದಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗಲಿಲ್ಲ. ಈ ಕುರಿತಾಗಿ ಬಿಸಿಸಿಐ ಬ್ರಿಟೀಷ್ ಹೈ ಕಮಿಷನ್ ಕಚೇರಿಗೆ ಸಂಪರ್ಕಿಸಿದ್ದು, ಶೀಘ್ರದಲ್ಲೇ ಜಾಧವ್ ಗೆ ವೀಸಾ ದೊರೆಯುವ ನಿರೀಕ್ಷೆ ಇದೆ. ಜಾಧವ್ ಶುಕ್ರವಾರ ಇಂಗ್ಲೆಂಡ್ ವಿಮಾನ ಹತ್ತುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಜೂನ್ 1ರಿಂದ ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡ ಜೂನ್ 4ರಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ನಂತರ ಜೂನ್ 8ರಂದು ಶ್ರೀಲಂಕಾ ವಿರುದ್ಧ, ಜೂನ್ 11ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಜೂನ್ 14 ಮತ್ತು 15 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಜೂನ್ 18ರಂದು ಫೈನಲ್ ಪಂದ್ಯ ನಡೆಯಲಿದೆ.

Leave a Reply