ಕಸಾಯಿಖಾನೆಗೆ ಗೋವು ಮಾರಾಟ ನಿಷೇಧ: ಕೇಂದ್ರದ ಈ ನಿರ್ಧಾರ ಪರೋಕ್ಷವಾಗಿ ಗೋಹತ್ಯೆ ಪ್ರತಿಬಂಧಕ!

ಡಿಜಿಟಲ್ ಕನ್ನಡ ಟೀಮ್:

ಇನ್ನು ಮುಂದೆ ಗೋವುಗಳನ್ನು ರೈತರಿಗೆ ಮಾರಾಟ ಮಾಡುವುದನ್ನು ಹೊರತುಪಡಿಸಿ ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದು, ಆ ಮೂಲಕ ಗೋ ಹತ್ಯೆ ನಿಷೇಧವನ್ನು ಜಾರಿಗೆ ತಂದಿದೆ.

ಪಶುಕಲ್ಯಾಣ ಹೆಸರಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದ್ದು, ಆಮೂಲಕ ಇನ್ನು ಮುಂದೆ ಗೋವುಗಳನ್ನು ಭೂ ಮಾಲೀಕರಿಗೆ ಹಾಗೂ ಕೃಷಿ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಉದ್ದೇಶಗಳಿಗಾಗಿ ಮಾತ್ರ ಗೋವುಗಳನ್ನು ಖರೀದಿಸಲಾಗಿದೆಯೇ ಹೊರತು ಹತ್ಯೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ನೀಡಬೇಕು ಎಂದು ತಿಳಿಸಲಾಗಿದೆ.
ಗೋ ರಕ್ಷಣೆಯ ಹೆಸರಿನಲ್ಲಿ ಹೆಚ್ಚುತ್ತಿರುವ ಹಲ್ಲೆ, ಹಿಂಸೆ, ಗಲಭೆಯೇ ಮೊದಲಾದ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿ ಕಳೆದ ತಿಂಗಳಲ್ಲಷ್ಟೇ ಸುಪ್ರೀಂ ಕೋರ್ಟ್‌, ಕೇಂದ್ರ ಹಾಗೂ ಆರು ರಾಜ್ಯ ಸರಕಾರಗಳಿಗೆ ನೊಟೀಸ್‌ ಜಾರಿ ಮಾಡಿತ್ತು. ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸಲ್ಮಾನರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.

ಈ ಆದೇಶದ ಪ್ರಕಾರ ಅಂತಾರಾಷ್ಟ್ರೀಯ ಗ‌ಡಿ ಪ್ರದೇಶದ 50 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗೋವುಗಳ ಸಂತೆ ಇರಬಾರದು, ರಾಜ್ಯದ ಗಡಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ಸಂತೆಗಳಿಗೆ ಅವಕಾಶ ಇಲ್ಲ. ಯಾವುದೇ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಸಾಗಿಸಬೇಕಾದರೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕು.

ಇಲ್ಲಿ ಗೋವು ಎಂಬ ವ್ಯಾಖ್ಯಾನದಲ್ಲಿ ಆಕಳು, ಎತ್ತು, ಕರು ಹಾಗೂ ಒಂಟೆಯನ್ನೂ ಸೇರಿಸಲಾಗಿದೆ.

ಸಂನಿಧಾನದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಗೋಹತ್ಯೆ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿತ್ತು. ರಾಜಕೀಯ ಕಾರಣಗಳಿಗಾಗಿ ಕೆಲವರು ಇದನ್ನು ಪಾಲಿಸಿದರೆ ಕೆಲವು ರಾಜ್ಯಗಳು ದೂರ ಉಳಿದಿದ್ದವು. ಇದೀಗ ಕೇಂದ್ರ ಈ ನಿಯಮ ಪರೋಕ್ಷವಾಗಿ ಗೋಹತ್ಯೆ ಪ್ರತಿಬಂಧಕವಾಗಿ ಕೆಲಸ ಮಾಡಲಿದೆ.

Leave a Reply