ಮತಯಂತ್ರದ ಮೇಲೆ ಸಂಶಯ ವ್ಯಕ್ತಪಡಿಸಿದ ರಾಜಕೀಯ ಪಕ್ಷಗಳಾವವೂ ಹ್ಯಾಕಿಂಗ್ ಸವಾಲು ಸ್ವೀಕರಿಸಲು ಸಿದ್ಧವಿಲ್ಲ!

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಗಳ ಸಂದರ್ಭದಲ್ಲಿ ಮತಯಂತ್ರಗಳ ದೋಷಪೂರಿತವಾಗಿದ್ದವು ಎಂದು ಆಮ್ ಆದ್ಮಿ ಸೇರಿದಂತೆ ಇತರೆ ಪಕ್ಷಗಳು ಟೀಕೆ ಮಾಡಿದ್ದವು. ಆದರೆ ಈ ಟೀಕೆಯನ್ನು ಖಂಡಿಸಿದ್ದ ಚುನಾವಣಾ ಆಯೋಗ, ಜೂನ್ 3ರಂದು ಮತಯಂತ್ರ ತಿರುಚಿಸಲು ಸಾಧ್ಯವಿದೆ ಎಂಬುದನ್ನು ಸಾಬೀತು ಪಡಿಸಲು ಮುಕ್ತ ಸವಾಲು ನೀಡಿತ್ತು. ಆದರೆ ಈ ಸವಾಲು ಸ್ವೀಕರಿಸಲು ಯಾವುದೇ ಪಕ್ಷಗಳು ಮುಂದಾಗಿಲ್ಲ.

ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳ ಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸಿದ ಕಾರಣ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಮತಯಂತ್ರಗಳನ್ನು ದೂಷಿಸಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಮತಯಂತ್ರಗಳನ್ನು ತಮಗೆ ಅನುಕೂಲವಾಗುವಂತೆ ತಿರುಚಲಾಗಿದೆ ಎಂದು ನೇರವಾಗಿ ಆರೋಪಿಸಿದ್ದರು.

ಆಮ್ ಆದ್ಮಿ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಮತಯಂತ್ರದ ಮಾದರಿಯನ್ನು ದೆಹಲಿ ವಿಧಾನ ಸಭೆಗೆ ತಂದು ಹೇಗೆಲ್ಲಾ ಮತಯಂತ್ರ ತಿರುಚಬಹುದು ಎಂಬ ಪ್ರಯೋಗ ಮಾಡಿತ್ತು. ಈ ಎಲ್ಲ ಬೆಳವಣಿಗೆಗಳಿಂದಾಗಿ ಚುನಾವಣಾ ಆಯೋಗ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವಾದರೆ ಮಾಡಿ ತೋರಿಸಿ ಎಂದು ಸವಾಲು ಹಾಕಿ ಜೂನ್ 3ರಂದು ದಿನಾಂಕ ನಿಗದಿ ಮಾಡಿತ್ತು. ಈ ಸವಾಲನ್ನು ಸ್ವೀಕರಿಸಲು ಮೇ 26ರಂದು ಅಂತಿಮ ದಿನ ಎಂದು ಘೋಷಿಸಿತ್ತು. ಆದರೆ ಈ ಅಂತಿಮ ಗಡುವಿಗೆ ಕೆಲವೇ ಗಂಟೆಗಳು ಬಾಕಿ ಇದ್ದರೂ ಈ ಸವಾಲು ಸ್ವೀಕರಿಸಲು ಟೀಕೆ ಮಾಡಿದ್ದ ಯಾವುದೇ ರಾಜಕೀಯ ನಾಯಕರು ಮುಂದೆ ಬಂದಿಲ್ಲ.

ಅಲ್ಲಿಗೆ, ಎಲ್ಲರಿಗೂ ಈ ವಿಷಯ ಇಟ್ಟುಕೊಂಡು ರಾಜಕೀಯ ಗದ್ದಲ ಎಬ್ಬಿಸುವುದೇ ಮುಖ್ಯವೇ ಹೊರತು ಸತ್ಯದ ಪರೀಕ್ಷೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಯಾವ ರಾಜಕೀಯ ಪಕ್ಷಗಳೂ ಸವಾಲು ಸ್ವೀಕರಿಸದೇ ಇರುವುದರಿಂದ ಚುನಾವಣಾ ಆಯೋಗದ ಜೂನ್ 3ರ ಸವಾಲು ರದ್ದಾಗುವ ಸಾಧ್ಯತೆ ಇದೆ.

Leave a Reply