ಭಾರತದ ಎರಡನೇ ಕಾಶ್ಮೀರವಾಗುತ್ತಿದ್ದ ಪಂಜಾಬ್ ಅನ್ನು ರಕ್ಷಿಸಿದ್ದ ‘ಸೂಪರ್ ಕಾಪ್’ ಕೆಪಿಎಸ್ ಗಿಲ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಎರಡು ಬಾರಿ ಪಂಜಾಬಿನ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಕನ್ವರ್ ಪಾಲ್ ಸಿಂಗ್ ಗಿಲ್ ಅವರು ಇಂದು ವಿಧಿವಶರಾಗಿದ್ದಾರೆ. 82 ವರ್ಷ ವಯಸ್ಸಾಗಿದ್ದ ಕೆಪಿಎಸ್ ಗಿಲ್ ಅವರು ಇಂದು ಮಧ್ಯಾಹ್ನ ದೆಹಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

1958 ರಿಂದ 1995ರವರೆಗೂ ಸುಮಾರು 37 ವರ್ಷಗಳ ಕಾಲ ಭಾರತೀಯ ಪೊಲೀಸ್ ಸೇವೆಯಲ್ಲಿ ಕಾರ್ಯನಿರ್ವಹಿಸಿದ್ದ ಗಿಲ್, ಅನೇಕರ ಪಾಲಿಗೆ ಹೀರೊ ಆಗಿದ್ದರು. ಒಂದು ಕಾಲದಲ್ಲಿ ಉಗ್ರವಾದ, ಪ್ರತ್ಯೇಕತಾವಾದದ ಕೂಗಿನಿಂದ ಹೊತ್ತಿ ಉರಿಯುತ್ತಿದ್ದ ಪಂಜಾಬ್ ರಾಜ್ಯದ ಸ್ಥಿತಿಯನ್ನು ಸರಿಪಡಿಸಿದ ಶ್ರೇಯ ಕೆಪಿಎಸ್ ಗಿಲ್ ಅವರದ್ದು. ಗಿಲ್ ಪಂಜಾಬಿನಲ್ಲಿ ತೆಗೆದುಕೊಂಡ ಕ್ರಮಗಳು ಮಹತ್ವದ್ದಾಗಿದ್ದು, ಗಿಲ್ ಪಂಜಾಬಿನ ಸೇವೆಗೆ ಲಭ್ಯವಾಗದಿದ್ದರೆ ಇಂದು ಪಂಜಾಬ್ ಮತ್ತೊಂದು ಕಾಶ್ಮೀರವಾಗಿ ಮಾರ್ಪಡುತ್ತಿತ್ತು. ಹಾಗಾದರೇ ಗಿಲ್ ಅವರ ಸ್ಫೂರ್ತಿದಾಯಕ ಪೊಲೀಸ್ ವೃತ್ತಿಯ ಹಾದಿ ಹೇಗಿತ್ತು ನೋಡೋಣ ಬನ್ನಿ…

1958ರಲ್ಲಿ ಐಪಿಎಸ್ ನಲ್ಲಿ ಸೇವೆ ಆರಂಭಿಸಿದ ಗಿಲ್, ಮೊದಲಿಗೆ ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ಮೆಘಾಲಯಗಳಿಗೆ ನಿಯೋಜನೆಗೊಂಡರು. 1984ರಲ್ಲಿ ಪಂಜಾಬಿನ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಗಿಲ್, ನಂತರ 1988ರಲ್ಲಿ ಎರಡನೇ ಬಾರಿಗೆ ಅದೇ ಸ್ಥಾನದಲ್ಲಿ ಮುಂದುವರಿದು 1991ರವರೆಗೂ ಸೇವೆ ಸಲ್ಲಿಸಿದರು. ಈ ಎಂಟು ವರ್ಷಗಳ ಅವಧಿಯಲ್ಲಿ ಗಿಲ್ ‘ಸೂಪರ್ ಕಾಪ್’ ಎಂಬ ಪಟ್ಟ ಅಲಂಕರಿಸಿದ್ದರು.

ಇವರ ಕಾಲಘಟ್ಟದಲ್ಲಿ ಪಂಜಾಬ್ ರಾಜ್ಯದಲ್ಲಿ ಪಾಕಿಸ್ತಾನ ಉತ್ತೇಜಿತ ಸಿಖ್ ಉಗ್ರವಾದ ಹಾಗೂ ಪ್ರತ್ಯೇಕ ಪಂಜಾಬ್ ರಾಜ್ಯ ಖಾಲಿಸ್ತಾನ ರಚನೆಗಾಗಿ ತೀವ್ರವಾದದ ಚಳುವಳಿಗಳು ಆರಂಭವಾಗಿದ್ದವು. 1988ರ ಮೇ ತಿಂಗಳಲ್ಲಿ ಇವರ ಸಾರಥ್ಯದಲ್ಲಿ ನಡೆದ ‘ಆಪರೇಷನ್ ಬ್ಲ್ಯಾಕ್ ಥಂಡರ್’ ಇವರ ವೃತ್ತಿಜೀವನದ ದೊಡ್ಡ ಸಾಧನೆ. ಮೇ 9ರಂದು ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಸೇರಿಕೊಂಡಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆ ಇದಾಗಿತ್ತು. ಸುದೀರ್ಘ 10 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ 41 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಜತೆಗೆ ತೀವ್ರವಾದಿಗಳನ್ನು ಮೆಟ್ಟಿದ ಪರಿಣಾಮ ಸುಮಾರು 200 ಉಗ್ರರು ಶರಣಾಗುವಂತಾಯಿತು.

ನಿಮಗೆ ಗೊತ್ತಿರಲಿ. ಕೆಪಿಎಸ್ ಗಿಲ್ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ ಅಂತ ಆಗಲೂ ಮಾಧ್ಯಮ ಮತ್ತು ಬುದ್ಧಿಜೀವಿ ವರ್ಗ ಚೀರಿಕೊಂಡಿತ್ತು. ಈಗ ಕಾಶ್ಮೀರದಲ್ಲಿ ಸೇನೆಯ ವಿರುದ್ಧ ಅಪಸ್ವರ ತೆಗೆಯುತ್ತಿರುವ ಬುದ್ಧಿಜೀವಿ ವರ್ಗ ಅವತ್ತು ಕೆಪಿಎಸ್ ಗಿಲ್ ಅವರನ್ನು ಗುರಿಯಾಗಿಸಿಕೊಂಡಿತ್ತು. ಆದರೆ ಇವ್ಯಾವುದಕ್ಕೂ ಗಿಲ್ ಸೊಪ್ಪು ಹಾಕಲಿಲ್ಲ. ಪ್ರತ್ಯೇಕತಾವಾದಿ ಉಗ್ರರನ್ನು ಯಾರು ಹೊಡೆಯುತ್ತಾರೋ ಅಂಥ ಪೊಲೀಸ್ ಸಹೋದ್ಯೋಗಿಗಳಿಗೆ ಲಕ್ಷಗಳ ಮೊತ್ತದಲ್ಲಿ ಬಹುಮಾನ ಘೋಷಿಸಿದ್ದರು ಗಿಲ್. ಪ್ರತ್ಯೇಕತಾವಾದ ಹತ್ತಿಕ್ಕುವ ನಿಟ್ಟಿನಲ್ಲಿ ಯಾರನ್ನೇ ತಪಾಸಿಸುವುದಕ್ಕೆ, ಬಂಧಿಸಿ ವಿಚಾರಿಸುವುದಕ್ಕೆ ತುಸುವೂ ಮುಲಾಜು ಇಟ್ಟುಕೊಳ್ಳುತ್ತಿರಲಿಲ್ಲ. ಅಂಥ ಕಾಠಿಣ್ಯ ತೋರದಿದ್ದರೆ ಇವತ್ತಿಗೆ ಪಂಜಾಬ್ ಮತ್ತೊಂದು ಕಾಶ್ಮೀರವಾಗಿ ಕುದಿಯುತ್ತಲೇ ಉಳಿಯುತ್ತಿತ್ತೇನೊ. ವ್ಯಂಗ್ಯ ಗಮನಿಸಿ- ಮಾತೆತ್ತಿದರೆ ಮಾನವ ಹಕ್ಕು ಎನ್ನುವ ರಾಜ್ದೀಪ್ ಸರ್ದೇಸಾಯಿ ಥರದ ಪತ್ರಕರ್ತರೂ ಇವತ್ತು ಕೆಪಿಎಸ್ ಗಿಲ್ ಪ್ರಶಂಸಿಸುತ್ತ ಟ್ವೀಟ್ ಮಾಡಿಕೊಂಡಿದ್ದಾರೆ.

ಅರ್ಥವಿಷ್ಟೆ- ದೇಶದ ಸಮಗ್ರತೆಗೆ ದುಡಿದವನಿಗೆ ಪ್ರಾರಂಭದಲ್ಲಿ ಏನೇ ವಿರೋಧ ಬಂದರೂ ಇತಿಹಾಸ ನೆನಪಿಡದೇ ಬಿಡುವುದಿಲ್ಲ.

Leave a Reply