ದೇಶದ ಅತಿ ದೊಡ್ಡ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

ಭಾರತದ ಅತಿ ದೊಡ್ಡ ಸೇತುವೆ ಎಂಬ ಖ್ಯಾತಿಗೆ ಭಾಜನವಾಗಿರುವ ಧೋಲಾ-ಸಾದಿಯಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 3 ವರ್ಷ ತುಂಬಿರುವ ಸಂದರ್ಭದಲ್ಲೇ ಈ ಸೇತುವೆ ಲೋಕರ್ಪಣೆ ಮಾಡಲಾಗಿದೆ.

ಬ್ರಹ್ಮಪುತ್ರ ನದಿಯ ಉಪನದಿ ಲೋಹಿಯಾಗೆ ಅಡ್ಡಲಾಗಿ ಕಟ್ಟಿರುವ 1.15 ಕಿ.ಮೀ ಉದ್ದದ ಈ ಸೇತುವೆಗೆ ಖ್ಯಾತ ಗಾಯಕ ಹಾಗೂ ಸಂಗೀತಗಾರ ಭೂಪೇನ್ ಹಜಾರಿಕಾ ಅವರ ಹೆಸರನ್ನು ಇಟ್ಟಿದ್ದು, ‘ಭೂಪೇನ್ ಹಜಾರಿಕಾ ಸೇತುವೆ’ ಎಂದು ನಾಮಕರಣ ಮಾಡಲಾಗಿದೆ. ಈ ಸೇತುವೆ ಉದ್ಘಾಟಿಸಿದ ನಂತರ ಅಸ್ಸಾಂನ ತಿನಸುಕಿಯಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ಭಾಗದ ಅಭಿವೃದ್ಧಿಗೆ ಎನ್ ಡಿಎ ಸರ್ಕಾರ ಬದ್ಧತೆಯನ್ನು ವಿವರಿಸಿದರು. ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿ ಹೇಳಿದಿಷ್ಟು…

‘ಹಲವು ವರ್ಷಗಳಿಂದ ನೀವೆಲ್ಲರು ಕಾಯುತ್ತಿದ್ದ ಆ ಸುದಿನ ಇಂದು ಬಂದಿದೆ. ಈ ದಿನ ಇಲ್ಲಿ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಈ ಸಂಭ್ರಮವನ್ನು ಎಲ್ಲರಿಗೂ ತಲುಪಿಸಿ. ಶ್ರೀಕೃಷ್ಣ ಪರಮಾತ್ಮ ಕಾಲಿಟ್ಟಿದ್ದ ಈ ಪುಣ್ಯಭೂಮಿಗೆ ಆಗಮಿಸಿರುವುದು ನನ್ನ ಭಾಗ್ಯ.

ಕಳೆದ ಐದು ದಶಕಗಳಿಂದ ನೀವು ಕಾದು ಕುಳಿತಿದ್ದ ಈ ಸೇತುವೆ ಇಂದು ನಿಮ್ಮ ಮುಂದೆ ಸಿದ್ಧವಾಗಿದೆ. 2004ರಲ್ಲಿ ಅಟಲ್ ಬಿಹಾರಿ ವಾಜರೇಯಿ ಅವರು ಮತ್ತೆ ಅಧಿಕಾರಕ್ಕೆ ಬಂದಿದ್ದರೆ, 10 ವರ್ಷಗಳ ಹಿಂದೆಯೇ ಈ ಸೇತುವೆ ಉದ್ಘಾಟನೆಯಾಗುತ್ತಿತ್ತು. ಆದರೆ ರಾಜಕೀಯ ಕಾರಣಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ಈಗ ಮತ್ತೆ ಎನ್ ಡಿಎ ಸರ್ಕಾರ ಬಂದ ನಂತರ ಕಳೆದ ಮೂರು ವರ್ಷಗಳಿಂದ ವಾಜಪೇಯಿ ಅವರ ಕನಸನ್ನು ನನಸಾಗಿಸಿದ್ದೇವೆ. ಈ ಸೇತುವೆ ಕೇವಲ ಅಸ್ಸಾಂ ರಾಜ್ಯದ ಹೆಮ್ಮೆಯಲ್ಲ. ಇಡೀ ದೇಶದ ಹೆಮ್ಮೆ.

ಈ ಸೇತುವೆ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶ ನಡುವಣ 165 ಕಿ.ಮೀ ಅಂತರವನ್ನು ಕಡಿಮೆ ಮಾಡಿದೆ. ಇದರಿಂದ ದಿನಕ್ಕೆ 10 ಲಕ್ಷ ಮೊಲ್ಯದ ಇಂಧನ ಉಳಿಕೆಯಾಗಲಿದ್ದು, ಜನರ ಅತ್ಯಮೂಲ್ಯ 7-8 ತಾಸು ಸಮಯ ಉಳಿಕೆಯಾಗಲಿದೆ. ಅಷ್ಟೇ ಅಲ್ಲದೆ ಆರ್ಥಿಕತೆಯ ಅಭಿವೃದ್ಧಿಗೂ ಈ ಸೇತುವೆ ನಾಂದಿಯಾಡಿದೆ. ಸಾದಿಯಾ ಪ್ರದೇಶದ ಶುಂಠಿ ಬೆಳೆಗಾರರು ಹೊಸ ಮಾರುಕಟ್ಟೆಯನ್ನು ಪಡೆಯಲಿದ್ದಾರೆ.

ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರ್ವ ಹಾಗೂ ಈಶಾನ್ಯ ರಾಜ್ಯಗಳ ಕೊಡುಗೆ ಮಹತ್ವದ್ದಾಗಿದೆ. ಹೀಗಾಗಿ ಈ ರಾಜ್ಯಗಳ ಅಭಿವೃದ್ಧಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬದ್ಧರಾಗಿದ್ದೇವೆ. ಕೇವಲ ರಸ್ತೆ ಹಾಗೂ ರೈಲು ಸಂಪರ್ಕ ಮಾತ್ರವಲ್ಲದೇ ಜಲ ಸಂಪರ್ಕ ಅಭಿವೃದ್ಧಿಯತ್ತಲೂ ಗಮನಹರಿಸುತ್ತೇವೆ. ಏಷ್ಯಾದ ಈಶಾನ್ಯ ಭಾಗವನ್ನು ತಲುಪಲು ಈ ರಾಜ್ಯಗಳು ಪ್ರಮುಖ ಪಾತ್ರ ವಹಿಸಲಿವೆ. ಈಶಾನ್ಯ ರಾಜ್ಯಗಳಲ್ಲಿ ರೈಲ್ವೇ ಸಂಪರ್ಕ ಅಗತ್ಯದ ರೀತಿ ತಲುಪಿಲ್ಲ. ಸಂಪರ್ಕದ ಕೊರತೆಯಿಂದಾಗಿ ಅನೇಕ ಭಾರತೀಯರು ಈ ಸುಂದರ ಪ್ರದೇಶದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಬ್ರಹ್ಮಪುತ್ರ ನದಿಯ ಮಗನಂತೆ ಬಿಂಬಿತವಾಗಿರುವ ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಅವರ ಹೇಸರನ್ನೇ ಈ ಸೇತುವೆಗೆ ನಾಮಕರಣ ಮಾಡಲಾಗುವುದು.

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದ್ದು, ಇಲ್ಲಿನ ಸಮಸ್ಯೆಗಳು ಒಂದೊಂದಾಗಿಯೇ ಪರಿಹಾರವಾಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿರುವ ಸರ್ಬಾನಂದ ಸೊನೊವಾಲ್ ಅವರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’

ಈ ಸೇತುವೆ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಅರುಣಾಚಲ ಪ್ರದೇಶದ ಕುರಿತಾಗಿ ಚೀನಾ ಜತೆಗಿನ ತಿಕ್ಕಾಟ, ಮಿಲಿಟರಿ ಉಪಯೋಗ ಹಾಗೂ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶ ನಡುವೆ ಸಂಪರ್ಕ ಸೇರಿದಂತೆ ಇತರೆ ವಿಷಯವಾಗಿ ಈ ಸೇತುವೆ ಸಾಕಷ್ಟು ಪ್ರಾಮುಖ್ಯತೆ ವಹಿಸಿದೆ. ಈ ಕುರಿತಂತೆ ಈ ಹಿಂದೆ ಡಿಜಿಟಲ್ ಕನ್ನಡ ವರದಿ ಹೀಗಿದೆ.

ಈ ಕಾರ್ಯಕ್ರಮದ ನಂತರ ಮೋದಿ ಅಸ್ಸಾಂನ ಧೆಮಾಜಿ ಜಿಲ್ಲೆಯ ಗೋಗಮುಖ್ ಪ್ರದೇಶದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಗುದ್ದಲಿ ಪೂಜೆ ಕಾರ್ಯಕ್ರಮ ನೇರವೇರಿಸಿ ನಂತರ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Leave a Reply