ಕ್ಯೂಬಾದ ಈ ಹೆಬ್ಬಾವುಗಳು ಬೇಟೆಯಾಡೋದು ಹೇಗೆ ಗೊತ್ತಾ? ವಿಜ್ಞಾನಿಗಳ ಅಧ್ಯಯನ ವರದಿ ಹೇಳೋದೇನು?

ಡಿಜಿಟಲ್ ಕನ್ನಡ ಟೀಮ್:

ಭೂಮಿಯ ಮೇಲಿರುವ ಕೆಲವು ಪ್ರಾಣಿಗಳು ಬೇಟೆ ಮಾಡಿಯೋ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಕೆಲವೊಮ್ಮೆ ಏಕಾಂಗಿಯಾಗಿ ಬೇಟೆಯಾಡಿದರೆ, ಮತ್ತೆ ಕೆಲವು ಬಾರಿ ಗುಂಪಾಗಿ ದಾಳಿ ನಡೆಸಿ ತಮ್ಮ ಆಹಾರ ಹುಡುಕಿಕೊಳ್ಳುತ್ತವೆ. ಆದರೆ ಕ್ಯೂಬಾದಲ್ಲಿ ಹೆಚ್ಚಾಗಿ ಕಂಡುಬರುವ ಕಂದು ಬಣ್ಣ ತಲೆಯ ಹೆಬ್ಬಾವುಗಳು ಮಾತ್ರ ಬೇಟೆಯಾಡುವ ಪರಿ ನಿಜಕ್ಕೂ ಸ್ವಾರಸ್ಯಕರವಾಗಿದೆ. ಈ ಹೆಬ್ಬಾವುಗಳು ಗುಂಪಾಗಿ ದಾಳಿ ಮಾಡುವಾಗ ಅವುಗಳ ರಣತಂತ್ರ ಬೇಟೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿ ಇರುತ್ತದೆ ಎಂದು ಸೈನ್ಸ್ ಅಲರ್ಟ್ ನ ಅನಿಮಲ್ ಬಿಹೇವಿಯರ್ ಅಂಡ್ ಕಾಗ್ನಿಷನ್ (ಪ್ರಾಣಿಗಳ ವರ್ತನೆ ಹಾಗೂ ಸಂವೇದನೆ) ವಿಭಾಗದ ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಹಾವುಗಳು ಹೆಚ್ಚಾಗಿ ಬೇಟೆಯಾಡುವುದು, ದಂಶಕ, ಪಕ್ಷಿ, ಹಲ್ಲಿಯಂತಹ ಜೀವಿಗಳನ್ನು. ಆದರೆ ಕ್ಯೂಬಾದ ಈ ಹೆಬ್ಬಾವುಗಳು ಜಮೈಕನ್ ಫ್ರ್ಯೂಟ್ ಬ್ಯಾಟ್ (ಬಾವುಲಿಯ ಒಂದು ಜಾತಿ) ಗಳನ್ನು ಗಾಳಿಯಲ್ಲಿ ಜಿಗಿದು ಬೇಟೆಯಾಡುವುದು ವಿಶೇಷ. ಈ ಹೆಬ್ಬಾವುಗಳು ತಮ್ಮ ಬೇಟೆಯ ವೇಳೆ ವಿಶೇಷ ತಂತ್ರಗಾರಿಕೆ ಪ್ರಯೋಗಿಸುವುದು ಈ ಅಧ್ಯಯನದಿಂದ ಕಂಡುಬಂದಿದೆ. ಈ ಬಾವುಲಿಗಳು ವಾಸಿಸುವ ಗುಹೆಗೆ ಗುಂಪು ಗುಂಪಾಗಿ ನುಗ್ಗುವ ಈ ಹೆಬ್ಬಾವುಗಳು ಹೊಂಚು ಹಾಕಿ ಕುಳಿತು ತಮ್ಮ ಬೇಟೆ ಯಾವುದೇ ರೀತಿಯಲ್ಲೂ ತಪ್ಪಿಸಿಕೊಳ್ಳದಂತೆ ವ್ಯೂಹ ರಚಿಸಿಕೊಂಡು ದಾಳಿ ಮಾಡುತ್ತವೆ. ಕೆಲವೊಮ್ಮೆ ಈ ಬಾವುಲಿಗಳು ಹಾರುವಾಗಲು ಜೀಗಿದು ಅವುಗಳನ್ನು ಹಿಡಿಯುತ್ತವೆ.

ಈ ಹೆಬ್ಬಾವುಗಳು ತಮ್ಮ ಬೇಟೆಯಲ್ಲಿ ಸಂಘಟಿತ ದಾಳಿ ಮಾಡುತ್ತವೆಯೇ ಅಥವಾ ತಮ್ಮ ಪಾಡಿಗೆ ತಾವು ಏಕಾಏಕಿ ದಾಳಿ ಮಾಡುತ್ತವೆಯೇ ಎಂಬುದನ್ನು ತಿಳಿಯುವ ಸಲುವಾಗಿ ಟೆನೆಸ್ಸಿ ನೊವಿಲ್ಲೆ ವಿಶ್ವವಿದ್ಯಾಲಯದ ವ್ಲಾಡ್ಮಿರ್ ಡಿನೆಟ್ಸ್ ಈ ಅಧ್ಯಯನ ಕೈಗೊಂಡರು. ಈ ಅಧ್ಯಯನದಲ್ಲಿ ಅವರಿಗೆ ತಿಳಿದು ಬಂದ ಅಂಶ ಎಂದರೆ, ಈ ಹಾವುಗಳು ಒಂದೇ ಸಮಯದಲ್ಲಿ ದಾಳಿಗೆ ಮುಂದಾದರೆ, ಅವು ಪ್ರತ್ಯೆಕವಾಗಿ ದಾಳಿ ಮಾಡುವುದಿಲ್ಲ. ಒಂದಕ್ಕೊಂದು ನೆರವು ನೀಡಿ ಈ ಬಾವುಲಿಗಳು ತಪ್ಪಿಸಿಕೊಳ್ಳದಂತೆ ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸುತ್ತವೆ. ಹೀಗೆ ಒಂದು ತಂಡವಾಗಿ ಬೇಟೆಯಾಡುವ ಹೆಬ್ಬಾವುಗಳು ಬಹಳ ಸುಲಭವಾಗಿ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತವೆ.

Leave a Reply