ಹಿಮದ ಸಾಮ್ರಾಜ್ಯ ಅಂಟಾರ್ಕ್‍ಟಿಕ ಖಂಡದಲ್ಲಿ ಯಾಕಿಷ್ಟು ಕಳವಳ? ಏನಾಗುತ್ತಿದೆ ಅಲ್ಲಿ?

ವಾಯೇಜರ್ ನೌಕೆ ಇಡೀ ಸೌರಮಂಡಲವನ್ನೇ ಬಿಟ್ಟು ದೂರ ದೂರ ಹೋಗುತ್ತಿದೆ. ಇತ್ತ ಮಂಗಳ ಗ್ರಹದ ಚಹರೆಯೆಲ್ಲವನ್ನು ಅಂತರಿಕ್ಷ ನೌಕೆಗಳು ಎಲ್ಲ ಮಗ್ಗಲುಗಳಿಂದಲೂ ಅಧ್ಯಯನ ಮಾಡಿ ಚಿತ್ರಗಳನ್ನು ರವಾನಿಸುತ್ತಿದೆ. ಸೌರಮಂಡಲದ ಎಲ್ಲ ಗ್ರಹ, ಉಪಗ್ರಹಗಳ ಬಗ್ಗೆ ಬೆರಳ ತುದಿಯಲ್ಲೇ ವಿಜ್ಞಾನಿಗಳಿಗೆ ಮಾಹಿತಿ ಇದೆ. ವಿಚಿತ್ರವೆಂದರೆ ಭೂಮಿಯ ದಕ್ಷಿಣ ತುದಿಯಲ್ಲಿರುವ ಅಂಟಾರ್ಕ್‍ಟಿಕ ಖಂಡದ ಎಲ್ಲ ಭಾಗಗಳೂ ನಮಗೆ ಪರಿಚಯವಿದೆಯೇ ಎಂದರೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು `ಇಲ್ಲ’ ಎಂದು.

ಚೀನಾ, ಭಾರತ ಇವೆರಡ ಒಟ್ಟು ವಿಸ್ತೀರ್ಣಕ್ಕಿಂತ ಅಂಟಾರ್ಕ್‍ಟಿಕ ಖಂಡದ ವಿಸ್ತೀರ್ಣ ಇನ್ನೂ ಹೆಚ್ಚು. ಅದು ಹಿಮದ ಮರುಭೂಮಿ, ಶ್ವೇತಖಂಡ, ಏಳನೆಯ ಖಂಡ, ಅತಿಭಯಂಕರ ಖಂಡ ಎಂಬೆಲ್ಲ ಬಿರುದುಗಳನ್ನು ಪಡೆದಿದೆ. ತೀರ ಸೂಕ್ಷ್ಮಜೀವಿಗಳ ಹೊರತು ಅದಕ್ಕೆಂದೇ ಸೀಮಿತವಾದ ಪಕ್ಷಿಗಳಿಲ್ಲ, ಪ್ರಾಣಿಗಳಿಲ್ಲ. ಹೆಚ್ಚಿನ ಪಾಲು ಪೆಂಗ್ವಿನ್ ಗಳು – ಸೀಲ್ ಗಳು ತೀರ ಪ್ರದೇಶದಲ್ಲಿ ವಾಸಿಸುತ್ತವೆ.  ಜಗತ್ತಿನ ಅತಿ ಶೀತಲ ಜಾಗವಿರುವುದು ಉತ್ತರ ಧ್ರುವದಲ್ಲಲ್ಲ, ದಕ್ಷಿಣ ಧ್ರುಮದಲ್ಲಿ. ರಷ್ಯಾದ ಸಂಶೋಧಕರು ದಕ್ಷಿಣ ಧ್ರುವದ ಬಳಿ ಸಂಶೋಧನ ಕೇಂದ್ರದಲ್ಲಿ ಉಷ್ಣತೆಯನ್ನು ಅಳೆದಾಗ ಬರೋಬ್ಬರಿ ಮೈನಸ್ 79 ಡಿಗ್ರಿ ಸೆಂಟಿಗ್ರೇಡಿಗೆ ಇಳಿದಿತ್ತು.

ಭಾರತವೂ ಸೇರಿದಂತೆ ಈಗಲೂ 30 ದೇಶಗಳು ಅಲ್ಲಿ ಸಂಶೋಧನೆ ಮಾಡುತ್ತಿವೆ. ವೈಜ್ಞಾನಿಕ ಮಾಹಿತಿ ಹಂಚಿಕೊಳ್ಳುತ್ತಿವೆ, ಪರಸ್ಪರ ಸಹಕರಿಸುತ್ತಿವೆ. 1912ರಲ್ಲಿ ನಾರ್ವೆಯ ಅಮುಂಡ್ಸನ್ ದಕ್ಷಿಣ ಧ್ರುವದ ನೆತ್ತಿಯ ಮೇಲೆ ನಿಂತಮೇಲೆ ಅನೇಕ ರಾಷ್ಟ್ರಗಳು ಅದರ ಮೇಲೆ ಹಿಡಿತ ಸಾಧಿಸಲು ದೊಡ್ಡ ದೊಡ್ಡ ಯಾತ್ರೆಗಳನ್ನು ಮಾಡಿದವು. ಈ ಖಂಡದ ಪ್ರಾಕೃತಿಕ ಸಂಪತ್ತು, ವಿಶೇಷವಾಗಿ ಲೋಹ, ತೈಲ ಸಿಕ್ಕಿದರೆ ಅದರ ಒಡೆತನ ಸಾಧುಸುವ ಹುನ್ನಾರ ಇತ್ತು. ಅಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೆ ಕುದುರೆಗಳ ಮೂಲಕ, ನಾಯಿ ಗಾಡಿಗಳ ಮೂಲಕ ಅಂಟಾರ್ಕ್‍ಟಿಕದ ಸಂಶೋಧನೆಗೆ ಇಳಿದವು. ಎಷ್ಟೋ ಮಂದಿ ಜೀವ ಕಳೆದುಕೊಂಡರು. ಈಗ ಅಂಟಾರ್ಕ್‍ಟಿಕ ಖಂಡ ಯಾವೊಂದು ದೇಶದ ಸ್ವತ್ತೂ ಅಲ್ಲ, ಇಡೀ ಮನುಕುಲಕ್ಕೇ ಸೇರಿದ್ದು. ಇಲ್ಲಿ ಅಪರೂಪದ ಪ್ರಯೋಗಗಳಾಗುತ್ತಿವೆ. ವಾಯುಗೋಳದ ಭೌತವಿಜ್ಞಾನದ ಬಗ್ಗೆ, ಧ್ರುವಪ್ರಭೆಗಳು ಹುಟ್ಟುವ ಬಗ್ಗೆ, ಹಿಮದ ಸಂಚಯನದ ಬಗ್ಗೆ, ಕಾರ್ಬನ್ ಡೈ ಆಕ್ಸೈಡ್ ಜಮಾಯಿಸುತ್ತಿರುವ ಬಗ್ಗೆ, ಹಾಗೆಯೇ ಖಗೋಳ ವಿಜ್ಞಾನದ ಹೊಸ ಹೊಸ ವಿದ್ಯಮಾನಗಳ ಬಗ್ಗೆ ಮೂವತ್ತು ರಾಷ್ಟ್ರಗಳೂ ಒಂದಲ್ಲ ಒಂದು ಕಾರ್ಯ ಮಾಡುತ್ತಿವೆ. ಅಂಟಾರ್ಕ್‍ಟಿಕ ನೆತ್ತಿಯಲ್ಲಿ ಓಜೋನ್ ತೆಳುವಾಗುತ್ತಿರುವ ಬಗ್ಗೆ ಇಡೀ ಜಗತ್ತೇ ಕಳವಳಗೊಂಡಿತ್ತು. ಇದನ್ನು ಮೊದಲು ಪತ್ತೆಹಚ್ಚಿದ್ದು ಬ್ರಿಟಿಷ್ ಅಂಟಾರ್ಕ್‍ಟಿಕ ಸರ್ವೇ ತಂಡ. ಇಲ್ಲಿನ ಹಿಮ ಕೊರೆದು ಮಾದರಿ ತೆಗೆದಾಗ, ಸಹಸ್ರ ಸಹಸ್ರ ವರ್ಷಗಳ ಉಷ್ಣ ವೈಪರೀತ್ಯದ ಮಾಹಿತಿ ಸಿಕ್ಕಿತು. ಹಿಮದಡಿ ಹೂತುಹೋಗಿರುವ ಅಂಟಾರ್ಕ್‍ಟಿಕ ಖಂಡದ ಲಕ್ಷಣಗಳು, ಶಿಲೆಗಳು, ಅಲ್ಲಿನ ಸೂಕ್ಷ್ಮಜೀವಿಗಳು ಹೀಗೆ ವಿಜ್ಞಾನದ ಅನೇಕ ಅಂಶಗಳನ್ನು ಅಧ್ಯಯನ ಮಾಡಲು ಈ ಖಂಡವೇ ಪ್ರಶಸ್ತ ಎನ್ನಲಾಗಿದೆ.

ಅಸಲಿ, ಅಂಟಾರ್ಕ್‍ಟಿಕದ ಹೆಚ್ಚುಗಾರಿಕೆ ಏನು? ಅದರ ದಪ್ಪ ಹಿಮಸ್ತರವೇ ಹೆಚ್ಚುಗಾರಿಕೆ. ಸುಮಾರು ಮೂರು ಕಿಲೋ ಮೀಟರ್ ಮಂದ ಇದೆಯೆಂದು 1957ರಲ್ಲೇ ವಿಜ್ಞಾನಿಗಳು ಅಲ್ಲಿ ಅಳೆದಿದ್ದರು. ಎಷ್ಟೋ ಬೆಟ್ಟಗುಡ್ಡಗಳು ಇದರಡಿ ಮುಚ್ಚಿಹೋಗಿವೆ. ಈ ಶ್ವೇತಖಂಡ ಸದ್ಯಕ್ಕೆ ಬಹು ದೊಡ್ಡ ಆತಂಕವನ್ನು ಹೊಂದಿದೆ. ಖಂಡದ ಎರಡು ಭಾಗಗಳಲ್ಲಿ `ಲಾರ್ಸನ್ ಐಸ್ ಷೆಲ್ಫ್’ ಮತ್ತು `ರಾಸ್ ಐಸ್ ಷೆಲ್ಫ್’ ಎಂಬಲ್ಲಿ ದೊಡ್ಡ ದೊಡ್ಡ ಹಿಮಬಂಡೆಗಳು ಕಿತ್ತು ಸಾಗರ ಸೇರುತ್ತಿವೆ. ಇವೇನೂ ಸಾಮಾನ್ಯ ಬಂಡೆಗಳಲ್ಲ. 1976ರಲ್ಲಿ ಲಾರ್ಸನ್ ಐಸ್ ಷೆಲ್ಫ್ ನಿಂದ ಕಿತ್ತು ಬಂದ ಹಿಮ ಬಂಡೆ 3,600 ಚದರ ಕಿಲೋ ಮೀಟರ್ ವಿಸ್ತೀರ್ಣವಿತ್ತು. ಹೆಚ್ಚು ಕಡಿಮೆ ನಮ್ಮ ಕೊಡಗಿನ ಮುಕ್ಕಾಲು ಭಾಗವನ್ನು ಇದರ ಮೇಲೆ ಕೂಡಿಸಬಹುದಾಗಿತ್ತು. ಸಾಗರಕ್ಕೆ ಅದು ದೊಪ್ಪೆಂದು ಕಿತ್ತು ಬಿದ್ದೊಡನೆ ಅಲ್ಲಿ ಒಂದು ಮಿನಿ ಸುನಾಮಿಯೇ ಹುಟ್ಟಿತು. ಇದೇನೂ ಹೊಸತಲ್ಲ, ಪ್ರತಿವರ್ಷವೂ 60 ರಿಂದ 2000 ಘನ ಕಿಲೋ ಮೀಟರ್ ಹಿಮ ಬಂಡೆ ಜಾರಿಬಿದ್ದು ಸಮುದ್ರದ ಪಾಲಾಗುತ್ತಿದೆ ಎಂದು ಲೆಕ್ಕಹಾಕಿದ್ದಾರೆ.

ಜಗತ್ತು ಕುಡಿಯುವ ನೀರಿಗಾಗಿ ತಹತಹ ಪಡುತ್ತಿದೆ, ನಿಜ. ಆದರೆ ಅಂಟಾರ್ಕ್‍ಟಿಕ ಖಂಡವೊಂದೇ ಇಡೀ ಜಗತ್ತಿನ ಶೇ. 70ರಿಂದ 80 ಪಾಲು ಸಿಹಿನೀರನ್ನು ಹಿಮಗಡ್ಡೆಯ ರೂಪದಲ್ಲಿ ಹಿಡಿದಿಟ್ಟಿದೆ. ಆದರೇನು ಬಂತು? ಅದನ್ನು ಸಿಹಿನೀರು ಕೊರತೆ ಇರುವ ಯಾವ ದೇಶಕ್ಕೂ ಎಳೆದುತಂದು ಕೊಡುವಂತಿಲ್ಲ. ಕರಗಿ ಹೋಗಿಬಿಡುತ್ತದೆ. ವಿಜ್ಞಾನಿಗಳ ಒಂದು ಲೆಕ್ಕಾಚಾರದ ಪ್ರಕಾರ ಇಡೀ ಖಂಡದ ಹಿಮಗಡ್ಡೆಯೆಲ್ಲವೂ ಕರಗಿದರೆ ಜಾಗತಿಕ ಸಮುದ್ರ ಮಟ್ಟ ಏರಿ ಕಡಲ ತೀರದ ನಗರಗಳು ಜಲಪ್ರಳಯಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಇಲ್ಲಿನ ಹಿಮಗಡ್ಡೆಗಳಲ್ಲಿ ಸಾವಿರಾರು ಅಡಿ ಆಳದವರೆಗೆ ಬಿರುಕುಗಳು ವಿಸ್ತರಿಸಿವೆ. ಇತ್ತೀಚೆಗಂತೂ ಬಿರುಕು ಬಿಡುವುದು ಹೆಚ್ಚಾಗುತ್ತಿದೆ. ಅಂಟಾರ್ಕ್‍ಟಿಕದಲ್ಲೂ ಸಾವಿರಾರು ಸಿಹಿನೀರಿನ ಕೊಳಗಳಿವೆ. ಕೆಲವೊಮ್ಮೆ ಇವುಗಳಿಂದ ಹರಿದು ಬರುವ ನೀರು ಹಿಮಗಡ್ಡೆಯ ಸೀಳುಗಳಲ್ಲಿ ಸೇರುತ್ತವೆ. ಸೀಳುಬಿಟ್ಟ ಜಾಗ ಜಾರಿಹೋಗಲು ಇದು ಅವಕಾಶಮಾಡಿಕೊಡುತ್ತದೆ. ಇದು ಮುಂದುವರಿದಂತೆ ಯಾವುದೋ ಒಂದು ಹಂತದಲ್ಲಿ ಹಿಮಗಡ್ಡೆ ಕಿತ್ತುಬರುತ್ತದೆ, ಸಾಗರದ ಪಾಲಾಗುತ್ತವೆ. ಇವು ಅಂಟಾರ್ಕ್‍ಟಿಕ ಖಂಡವನ್ನೇ ಗಸ್ತು ಹೊಡೆಯುವುದುಂಟು. ಏಕೆಂದರೆ ಜಗತ್ತಿನ ಅತಿ ವೇಗದ ಬಿರುಗಾಳಿ ಹುಟ್ಟುವ ಖಂಡ ಇದು.

ಇನ್ನೊಂದು ದುರಂತಕ್ಕೆ ನಿಸರ್ಗವನ್ನು ದೂರಿದರೆ ಪ್ರಯೋಜನವಿಲ್ಲ. ನಾವು ವಾಯುಗೋಳಕ್ಕೆ ಬಿಡುತ್ತಿರುವ ಉಷ್ಣವರ್ಧಕ ಅನಿಲಗಳ ಪಾತ್ರವೂ ಇದರಲ್ಲಿದೆ. ಸದ್ದಿಲ್ಲದೆ ಅವು ಈ ಶೈತ್ಯಖಂಡದ ಉಷ್ಣತೆಯನ್ನು ಹೆಚ್ಚಿಸುತ್ತಿವೆ. ಇದು ಮುಂದುವರಿದರೆ ಬರುವ 200 ವರ್ಷಗಳಲ್ಲಿ ಹಿಮಗಡ್ಡೆಗಳೇ ಖಂಡದ ಅಂಚಿನಿಂದ ಸಂಪೂರ್ಣವಾಗಿ ಕಣ್ಮರೆಯಾಗಬಹುದು ಎಂಬ ಭಯ ಇದ್ದೇಇದೆ. ಯಾವುದಾದರೂ ನೆಲದಲ್ಲಿ ಹಸುರು ಹರಡಿದ್ದರೆ ಮನಸ್ಸು ಮುದಗೊಳ್ಳುತ್ತದೆ. ಆದರೆ ಅಂಟಾರ್ಟಿಕದ ತೀರ ಪ್ರದೇಶದಲ್ಲಿ ಹಸುರು ದಟ್ಟೈಸಿದರೆ ಅದು ಬದಲಾಗುತ್ತಿರುವ ವಾಯುಗುಣದ ಸಂಕೇತ. ಇಲ್ಲಿ ಅನೇಕ ಭಾಗಗಳಲ್ಲಾಗಲೇ ಪಾಚಿ ಬೆಳೆಯುತ್ತಿದೆ. ಸಂಶೋಧಕರು ಹೊಸತಾಗಿ ಇಲ್ಲಿ ಯಾವ ಜೀವಿಗಳನ್ನೂ ತರುವಂತಿಲ್ಲ. ಉದಾ; ಬೆಕ್ಕು, ನಾಯಿ ಇತ್ಯಾದಿ. ಹಿಮವನ್ನು ಕಲುಷಿತಗೊಳಿಸುವಂತಿಲ್ಲ, ಅಷ್ಟೇ ಏಕೆ, ತಮ್ಮ ಮಲವನ್ನೂ ಅಲ್ಲಿ ಬಿಟ್ಟುಬರುವಂತಿಲ್ಲ. ಇಷ್ಟೆಲ್ಲ ಎಚ್ಚರಿಕೆ ತೆಗೆದುಕೊಂಡರೂ ಅಂಟಾರ್ಕ್‍ಟಿಕದ ಮೇಲೆ ಉಷ್ಣವರ್ಧಕ ಅನಿಲಗಳ ದಾಳಿ ನಿಯಂತ್ರಣ ಮೀರಿ ಹೋಗುತ್ತಿದೆ. ಈ ಖಂಡ ಹೇಗೆ ಪ್ರತಿಕ್ರಿಯಿಸುತ್ತದೆ? ಹಿಮ ಕರಗುವುದರ ಮೂಲಕ. ನಿಸರ್ಗದ ಸಮತೋಲವನ್ನು ಏರುಪೇರುಮಾಡಿದರೆ ಅದು ಮುಳುವಾಗುವುದು ನಮಗೇ.

ಅಂಟಾರ್ಕ್‍ಟಿಕದ ಹಿಮ ಕರಗುತ್ತಿರುವ ಕುರಿತಾದ ವಿಡಿಯೋ ಇಲ್ಲಿದೆ ನೋಡಿ…

1 COMMENT

Leave a Reply to ಅಂಟಾರ್ಕ್‍ಟಿಕದಿಂದ ಬೇರೆಯಾಯ್ತು ಲಂಡನ್ ಸೈಜಿನ ಹಿಮ ಭಾಗ, ಇದೆಯೇ ಅಪಾಯ? | Digital Kannada Cancel reply