ಬುರ್ಹಾನ್ ಸಹಚರ ಸಬ್ಸಾರ್ ನನ್ನು ಹೊಸಕಿತು ಭಾರತೀಯ ಸೇನೆ, 6 ಉಗ್ರರ ಬಲಿ ಪಡೆದ ಭರ್ಜರಿ ಬೇಟೆ

  ಬುರ್ಹಾನ್ ವಾನಿ ಜತೆಯಲ್ಲಿರುವ ಸಬ್ಸಾರ್ ಅಹ್ಮದ್ ಬಟ್ 

  ಡಿಜಿಟಲ್ ಕನ್ನಡ ಟೀಮ್:

  ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆ, ಈಗ ಆತನ ಉತ್ತರಾಧಿಕಾರಿ ಸಬ್ಸಾರ್ ಅಹ್ಮದ್ ಬಟ್ ನನ್ನು ಹೊಸಕಿ ಹಾಕಿದೆ. ಶುಕ್ರವಾರದಿಂದ ದಕ್ಷಿಣ ಕಾಶ್ಮೀರದ ಪುಲ್ವಾಮ್ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸಬ್ಸಾರ್ ನನ್ನು ಹತ್ಯೆ ಮಾಡಲಾಗಿದೆ.

  ಕಳೆದ ಜುಲೈನಲ್ಲಿ ಬುರ್ಹಾನ್ ವಾನಿ ಸತ್ತ ನಂತರ ಸಬ್ಸಾರ್ ಬಟ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೇತೃತ್ವ ವಹಿಸಿದ್ದ. ಈ ಕಾರ್ಯಾಚರಣೆಯಲ್ಲಿ ಸಬ್ಸಾರ್ ಬಟ್ ಜತೆಗೆ ಮತ್ತೊಬ್ಬ ಉಗ್ರನನ್ನು ಹೊಡೆದು ಹಾಕಲಾಗಿದೆ ಎಂಬ ವರದಿಗಳು ಬಂದಿವೆ. ಇನ್ನು ಬರಾಮುಲ್ಲಾ ಪ್ರದೇಶದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ 6 ಉಗ್ರರನ್ನು ಹೊಡೆದು ಹಾಕಿದೆ. ಆ ಮೂಲಕ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಭರ್ಜರಿ ಬೇಟೆ ನಡೆಸಿದೆ.

  ವರದಿಗಳ ಪ್ರಕಾರ ಸಬ್ಸಾರ್ ಪ್ರಾಣ ಬಿಡುವ ಮುನ್ನ ತನ್ನ ಕುಟುಂಬ ಸದಸ್ಯರಿಗೆ ಕರೆ ಮಾಡಿ ‘ನಾನು ತಪ್ಪು ಮಾಡಿದ್ದರೆ ಕ್ಷಮಿಸಿ. ಭಾರತೀಯ ಸೇನೆ ನಮ್ಮನ್ನು ಸುತ್ತುವರಿದಿದೆ’ ಎಂದು ಹೇಳಿದ್ದಾನೆ. ಇನ್ನು ಇಂಡಿಯಾ ಟುಡೆಗೆ ಲಭ್ಯವಿರುವ ಸಬ್ಸಾರ್ ಸಹಚರ ಮಾತನಾಡಿರುವ ಆಡಿಯೋದಲ್ಲಿ, ‘ಭಾರತೀಯ ಸೇನೆ ಟ್ರಾಲ್ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸುತ್ತಿದ್ದು, ಇದರಲ್ಲಿ ಸಬ್ಸಾರ್ ಭಾಯ್ ಸಿಲುಕಿಕೊಂಡಿದ್ದಾರೆ’ ಎಂದು ಸಂದೇಶ ರವಾನಿಸಿದ್ದಾನೆ.

  ಅತ್ತ ಭಾರತೀಯ ಸೇನೆ ಸಬ್ಸಾರ್ ನನ್ನು ಹೊಡೆದು ಹಾಕುತ್ತಿದ್ದಂತೆ, ಇತ್ತ ಕಾಶ್ಮೀರದ ಅನಂತ್ ನಾಗ್ ಪ್ರದೇಶ ಸೇರಿದಂತೆ ಇತರೆ ಕಡೆಗಳಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದು, ಕಲ್ಲುತೂರಾಟ ಪ್ರಕರಣಗಳು ಕಂಡುಬಂದಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ‘ಇವು ಸಣ್ಣ ಪ್ರಮಾಣದ ಪ್ರಕರಣಗಳಾಗಿದ್ದು, ಈ ಪ್ರದೇಶಗಳ ಪರಿಸ್ಥಿತಿ ನಿಯಂತ್ರಣದಲ್ಲಿವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

  ಉಗ್ರರನ್ನು ಹೊಸಕಿ ಹಾಕುವುದರ ಹೊರತಾಗಿ ಭಾರತೀಯ ಸೇನೆಯ ಬಳಿ ಎರಡನೇ ಮಾತೇ ಇಲ್ಲ ಎಂಬುದು ಈ ಕಾರ್ಯಾಚರಣೆ ಮೂಲಕ ಸಾಬೀತಾಗಿದೆ. ಕಳೆದ ವರ್ಷ ವಾನಿ ಹತ್ಯೆಯ ನಂತರ ಮೇಜರ್ ಗೌರವ್ ಆರ್ಯ ತಾವು ಬರೆದಿದ್ದ ಬಹಿರಂಗ ಪತ್ರದಲ್ಲಿ ಈ ಸಂದೇಶವನ್ನು ರವಾನಿಸಿದ್ದರು.

  ‘ಬುರ್ಹಾನ್ ವಾನಿ ಒಬ್ಬ ಭಯೋತ್ಪಾದಕ. ಹೀಗಾಗಿ ಭಾರತೀಯ ಸೇನೆ ಆತನನ್ನು ಹೊಡೆದು ಹಾಕಿದೆ. ಈತ ಸತ್ತ ನಂತರ ಮತ್ತೊಬ್ಬ ನಾಯಕ ಹುಟ್ಟುಕೊಳ್ಳಲಿದ್ದು, ಬುರ್ಹಾನ್ ವಾನಿಗೆ ಎಷ್ಟೇ ಉತ್ತರಾಧಿಕಾರಿಗಳು ಹುಟ್ಟಿಕೊಂಡರೂ ಆವರನ್ನು ಭಾರತೀಯ ಸೇನೆ ಮುಲಾಜಿಲ್ಲದೆ ಹೊಡೆದು ಹಾಕಲಿದೆ. ಕಾಶ್ಮೀರದಲ್ಲಿ ಉಗ್ರರ ಶವಗಳನ್ನಿಟ್ಟುಕೊಂಡು ಹಿರೋಗಳಂತೆ ಬಿಂಬಿಸಿ ಎಷ್ಟೇ ಪ್ರತಿಭಟನೆ ನಡೆಸಿದರೂ ಭಾರತೀಯ ಸೇನೆ ಮಾತ್ರ ಎದೆಗುಂದದೇ ತನ್ನ ಕಾರ್ಯವನ್ನು ಮುಂದುವರಿಸಲಿದೆ.’

  ಗೌರವ್ ಆರ್ಯ ಅವರ ಈ ಮಾತುಗಳಲ್ಲೇ ಬುರ್ಹಾನ್ ವಾನಿಯ ಉತ್ತರಾಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ಸಂದೇಶ ಸ್ಪಷ್ಟವಾಗಿತ್ತು. ಇಂದು ನಡೆದಿರುವ ಕಾರ್ಯಾಚರಣೆಯಲ್ಲಿ ಆ ಮಾತು ನಿಜವಾಗಿದೆ.

  ಸಬ್ಸಾರ್ ನನ್ನು ಹೊಡೆದು ಹಾಕಿರುವುದು ಭಾರತೀಯ ಸೇನೆಗೆ ದೊಡ್ಡ ಜಯವಾಗಿದ್ದು, ಸಬ್ಸಾರ್ ಕುರಿತಾದ ಪ್ರಮುಖ ಅಂಶಗಳು ಹೀಗಿವೆ…

  • ಸಬ್ಸಾರ್ ಬಟ್ ಕಾಶ್ಮೀರದ A++ ಉಗ್ರನಾಗಿದ್ದ. ಟ್ರಾಲ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದ ಈತ ಇತ್ತೀಚೆಗಷ್ಟೇ ಜಾಕಿರ್ ರಶೀದ್ ಈ ಗುಂಪನ್ನು ಬಿಟ್ಟಿಹೋದ ನಂತರ ಸಂಘಟನೆಯ ಕಾರ್ಯಾಚರಣೆ ಮುಖ್ಯಸ್ಥನಾಗಿದ್ದ.
  • ಸಬ್ಸಾರ್, ಬುರ್ಹಾನ್ ವಾನಿಯ ಬಲಗೈ ಬಂಟನಾಗಿದ್ದ. ಸುಮಾರು ಎರಡು ವರ್ಷಗಳ ಕಾಲ ಬುರ್ಹಾನ್ ವಾನಿಯ ಜತೆ ಕೆಲಸ ಮಾಡಿದ್ದ.
  • ತನ್ನ ಸಂಬಂಧಿಕರ ಹುಡುಗಿಯೊಬ್ಬಲನ್ನು ಪ್ರೀತಿಸುತ್ತಿದ್ದ ಸಬ್ಸಾರ್, ಆಕೆಯಿಂದ ತಿರಸ್ಕೃತಗೊಂಡ ನಂತರ ಉಗ್ರ ಸಂಘಟನೆಗೆ ಸೇರಿದ್ದ.
  • ಬುರ್ಹಾನ್ ವಾನಿಯ ಹಿರಿಯ ಸಹೋದರ ಖಾಲಿದ್ ಸತ್ತಾಗ ಉದ್ಭವಿಸಿದ್ದ ಪ್ರತಿಭಟನೆ ವೇಳೆ ಸಬ್ಸಾರ್ ಸೇನಾ ಶಿಬಿರಗಳಿಂದ ಶಸ್ತ್ರಾಸ್ತ್ರಗಳನ್ನು ಕಳ್ಳತನ ಮಾಡಿದ್ದ. ಆಗಿನಿಂದ ಹಿಜ್ಬಲ್ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದ.
  • ಬುರ್ಹಾನ್ ವಾನಿ ಸತ್ತ ನಂತರ ಸಬ್ಸಾರ್ ಬಟ್, ಆತನೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಕಾಶ್ಮೀರಿಗರ ಪ್ರೀತಿ ಗಳಿಸುವ ಪ್ರಯತ್ನ ನಡೆಸಿದ್ದ.
  • ಸಬ್ಸಾರ್, ಕಳೆದ ಮಾರ್ಚ್ ನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆ ವೇಳೆ, ಕಲ್ಲುತೂರಾಟಗಾರರ ರಕ್ಷಣೆಯಿಂದಾಗಿ ತಪ್ಪಿಸಿಕೊಂಡಿದ್ದ.

  ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಯೋಧರ ಮೇಲಿನ ನಿರಂತರ ದಾಳಿಗೆ, ಸೇನೆ ತಕ್ಕ ಪ್ರತಿಕಾರ ತೀರಿಸಿಕೊಂಡಿದ್ದು, ಇನ್ನಷ್ಟು ಉಗ್ರರು ಸೇನೆಯ ಗುಂಡಿಗೆ ತತ್ತರಿಸುವ ನಿರೀಕ್ಷೆ ಇದೆ.

  Leave a Reply